ಹಾನಗಲ್ಲ: ಕನ್ನಡ ಕೇವಲ ಭಾಷೆಯಲ್ಲ, ನಮ್ಮ ಅಂತರಂಗದ ವಿಚಾರಗಳನ್ನು ಅಭಿವ್ಯಕ್ತಗೊಳಿಸುವ ಅದ್ಭುತವಾದಂತಹ ಸಂವಹನ. ಕೇವಲ ಕನ್ನಡವನ್ನು ಉಳಿಸಿ, ಬೆಳೆಸಿ ಅಂದರೆ ಸಾಲದು. ಅದನ್ನ ದಿನನಿತ್ಯ ಮಾತನಾಡುವ ಪ್ರಕ್ರಿಯೆಯನ್ನು ಕೈಗೊಂಡರೆ ಮಾತ್ರ ಅದ್ಭುತ ನೆಮ್ಮದಿ ನೀಡುತ್ತದೆ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ನುಡಿದರು.
ಕನ್ನಡ ಸಾಹಿತ್ಯ ಪರಿಷತ್ ನಗರಾಧ್ಯಕ್ಷ ಡಾ. ವಿಶ್ವನಾಥ ಬೊಂದಾಡೆ ಕನ್ನಡ ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಎಂಬ ವಿಷಯದ ಕುರಿತು ಮಾತನಾಡಿ, ಜನಪದ ಸಾಹಿತ್ಯದಿಂದ ನಾವು ಅರಿತುಕೊಳ್ಳಬೇಕಾದದ್ದು ತುಂಬಾ ಇದೆ. ಜನಪದ ಎಂದೂ ಋಣಾತ್ಮಕ ಅಂಶಗಳನ್ನು ಜನರಿಗೆ ತಿಳಿಸಲಿಲ್ಲ, ಇರುವಷ್ಟು ದಿನ ಇರುವಷ್ಟು ಗಳಿಗೆ ನೆಮ್ಮದಿಯಿಂದ ಬದುಕಬೇಕು, ಇತರರಿಗೆ ನೆಮ್ಮದಿಯನ್ನು ನೀಡಬೇಕು, ಮುಂದಿನ ಪೀಳಿಗೆಗೆ ಸಾಹಿತ್ಯವನ್ನು ಉಳಿಸಿ ಬೆಳೆಸಿಕೊಂಡು ಹೋಗುವುದನ್ನು ಕಲಿಸಿಕೊಡಬೇಕು. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬುದನ್ನು ತಿಳಿಸಿ ಹೋದವರು ಜನಪದರು. ನೋವು-ನಲಿವು, ಸಂತೋಷ-ದುಃಖ, ಆರೋಗ್ಯ, ಆಹಾರ, ವ್ಯಾಯಾಮ, ಸಂಸ್ಕೃತಿ, ಒಂದಲ್ಲ ಎರಡಲ್ಲ ನೂರಾರು ವಿಷಯಗಳ ಕುರಿತು ನಮಗೆ ತಮ್ಮ ಜನಪದ ಸಾಹಿತ್ಯದ ಮೂಲಕ ಮಾಹಿತಿಯನ್ನು ನೀಡಿ ನಮ್ಮೆಲ್ಲರ ಮುಂದಿನ ಬದುಕು ಹೇಗಿರಬೇಕು ಎಂಬುದನ್ನು ತಿಳಿಸಿ ಕೊಟ್ಟವರು ಜನಪದರು. ಅವರ ಬದುಕೆ ನಮಗೆ ಮಾರ್ಗದರ್ಶನ, ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ಸರಿಯಾಗಿ ನಡೆದರೆ ನಮ್ಮ ಬದುಕು ಹಸನಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ.ವಿ.ಎಸ್. ಪುರಾಣಿಕಮಠ, ಇಂದು ಜನ ನೆಮ್ಮದಿಯನ್ನು ಹುಡುಕಲು ಇಂತಹ ಸಭೆ ಸಮಾರಂಭಗಳಿಗೆ ಆಗಮಿಸುತ್ತಿರುವುದು ಹೆಮ್ಮೆಯ ಸಂಗತಿ, ಟಿ.ವಿ. ಮಾಧ್ಯಮದಿಂದ, ಮೊಬೈಲ್ ಮಾಧ್ಯಮದಿಂದ ದೂರಾಗಿ ತಮ್ಮನ್ನು ತಾವು ಆರೋಗ್ಯವಂತರಾಗಿಸಿಕೊಳ್ಳಲು ಇಂತಹ ಆರೋಗ್ಯ ಪೂರ್ಣ ಉಪನ್ಯಾಸ ಕೇಳುವುದರಿಂದ ಮಾತ್ರ ಸಾಧ್ಯ. ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವೂ ಕೂಡ ಅಷ್ಟೇ ಮುಖ್ಯ. ಆ ಕಾರಣದಿಂದ ಒಳ್ಳೆಯದನ್ನು ಕೇಳೋಣ, ಒಳ್ಳೆಯದನ್ನೇ ಮಾಡೋಣ ಎಂದು ಕರೆಕೊಟ್ಟರು. ಕಾರ್ಯಕ್ರಮದಲ್ಲಿ ೧೫ ವರ್ಷಗಳ ಕಾಲ ನಿರಂತರವಾಗಿ ಶ್ರಮವಹಿಸಿ ನಾಡಹಬ್ಬವನ್ನು ಯಶಸ್ವಿಗೊಳಿಸಿದ ನಾಗೇಶ ಹಾವಿನಾಳ ಹಾಗೂ ನಾಡಹಬ್ಬವನ್ನು ಕುಂಚದಿಂದ ಸುಂದರಗೊಳಿಸಿದ ಪ್ರಭು ಹೂಗಾರ್, ಕರಬಸಪ್ಪ ಡಿ. ಕುಲಕರ್ಣಿಯವರನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಯಿತು.ಕಾರ್ಯಕ್ರಮವನ್ನು ರವಿ ಬಾಬು ಪೂಜಾರಿ ನಿರೂಪಿಸಿದರು. ಗಿರೀಶ್ ದೇಶಪಾಂಡೆ ಸ್ವಾಗತಿಸಿದರು ಹಾಗೂ ಸ್ನೇಹಾ ಮಹಿಳಾ ಮಂಡಲದವರು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ನಾಡಹಬ್ಬ ಉತ್ಸವ ಸಮಿತಿಯ ಅಧ್ಯಕ್ಷರಾದ ನಾಗಪ್ಪ ಸವದತ್ತಿ, ಉದಯ ನಾಸಿಕ, ಕೆ.ಎಲ್.ದೇಶಪಾಂಡೆ ಉಪಸ್ಥಿತರಿದ್ದರು. ನಂತರ ವಿವಿಧ ಜನಪದ ನೃತ್ಯಗಳು, ಭರತನಾಟ್ಯ, ಸಂಗೀತ ಕಾರ್ಯಕ್ರಮಗಳು ನೆರವೇರಿ ಜನರ ಮನಸ್ಸು ತಂಪುಗೊಳಿಸಿದವು.