ಮಾಹಿತಿ । ಅಲಸಂದೆ ಬೆಳೆ ಪ್ರಾತ್ಯಕ್ಷಿಕೆಯ ಪರಿಕರ ವಿತರಣಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿಹೋಬಳಿ ರೈತ ಸಂಪರ್ಕ ಕೇಂದ್ರದ ವತಿಯಿಂದ ಹೋಬಳಿ ವ್ಯಾಪ್ತಿಯ ಸಮುದ್ರವಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡು ರೈತರಿಗೆ ಉಚಿತವಾಗಿ ಅಲಸಂದೆ ಬಿತ್ತನೆ ಬೀಜವನ್ನು ವಿತರಣೆ ಮಾಡಲಾಗುತ್ತಿದೆ ಎಂದು ಹೋಬಳಿ ಕೃಷಿ ಅಧಿಕಾರಿ ಜಿ.ವಿ.ದಿನೇಶ್ ತಿಳಿಸಿದರು.
2024 -25ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಅಲಸಂದೆ ಬೆಳೆ ಪ್ರಾತ್ಯಕ್ಷಿಕೆಯ ಪರಿಕರ ವಿತರಣಾ ಕಾರ್ಯಕ್ರಮದಲ್ಲಿ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ವಿತರಿಸಿ ಮಾತನಾಡಿದರು.ಕಳೆದ ವರ್ಷ ಈ ಯೋಜನೆ ಅಡಿಯಲ್ಲಿ ಹೋಬಳಿಯ ಬೆಳಗುಲಿ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಗ್ರಾಮದ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ವಿತರಣೆ ಮಾಡಲಾಗಿತ್ತು. ಈ ಸಾಲಿನಲ್ಲಿ ಕ್ಷೇತ್ರದ ಶಾಸಕರ ಮನವಿಯಂತೆ ಸಮುದ್ರವಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಮುಂಗಾರು ಬೆಳೆಗೆ ಅನುಕೂಲವಾಗುವ ದೃಷ್ಟಿಯಿಂದ ಅಲಸಂದೆ ಬಿತ್ತನೆ ಬೀಜವನ್ನು ಗ್ರಾಮದ ಎಲ್ಲಾ ರೈತರಿಗೂ ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಗ್ರಾಮದ ಒಟ್ಟು 30 ಎಕ್ಟರ್ ಪ್ರದೇಶದಲ್ಲಿ ಬೆಳೆ ಬೆಳೆಯಲು ಅಲಸಂದೆ ಬಿತ್ತನೆ ಬೀಜವನ್ನು ವಿತರಿಸಲಾಗಿದ್ದು ಮುಂಬರುವ ದಿನಗಳಲ್ಲಿ ಇಲಾಖೆಯಿಂದ ಬರುವ ಕೀಟನಾಶಕ ಔಷಧಿ ಸೇರಿ ರಾಗಿ, ಇತರ ವಿವಿಧ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತದೆ. ರೈತರಿಗೆ ಇಲಾಖೆ ವತಿಯಿಂದ ನೀಡಿರುವ ಬಿತ್ತನೆ ಬೀಜವನ್ನು ತಪ್ಪದೇ ರೈತರು ಬಿತ್ತನೆಗೆ ಮಾತ್ರ ಬಳಸಬೇಕು. ಅದನ್ನು ಹೊರತುಪಡಿಸಿ ಆಹಾರಕ್ಕೆ ಬಳಸಬಾರದು. ಏಕೆಂದರೆ ಬಿತ್ತನೆ ಬೀಜಕ್ಕೆ ವಿಷಕಾರಿ ಕ್ರಿಮಿನಾಶಕವನ್ನು ಬಳಸಿರುವುದರಿಂದ ಹೆಚ್ಚು ಅಪಾಯಕಾರಿಯಾಗಿದೆ. ಈ ಬಗ್ಗೆ ರೈತರು ಹೆಚ್ಚು ನಿಗವಹಿಸುವುದು ಸೂಕ್ತ ಎಂದು ತಿಳಿಸಿದರು.ತಾಲೂಕು ರೈತ ಸಂಘದ ಅಧ್ಯಕ್ಷ ಎಸ್ಎಸ್ ರಾಮಚಂದ್ರು ಮಾತನಾಡಿ, 2024-25ನೇ ಸಾಲಿನಲ್ಲಿ ಸಮುದ್ರವಳ್ಳಿ ಗ್ರಾಮವನ್ನು ಕೃಷಿ ಇಲಾಖೆ ವತಿಯಿಂದ ಆಯ್ಕೆ ಮಾಡಿಕೊಂಡು ಮುಂಗಾರು ಬೆಳೆಗೆ ಅನುಕೂಲವಾಗಲಿ ಎಂದು ಉಚಿತವಾಗಿ ಅಲಸಂದೆ ಬಿತ್ತನೆ ಬೀಜವನ್ನು ವಿತರಣೆ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜ ಸೇರಿದಂತೆ ಕೃಷಿ ಇಲಾಖೆಗೆ ಬರುವ ವಿವಿಧ ಸೌಲಭ್ಯಗಳನ್ನು ಗ್ರಾಮದ ರೈತರಿಗೆ ಇಲಾಖೆ ವತಿಯಿಂದ ನೀಡಬೇಕೆಂದು ಒತ್ತಾಯಿಸಿದರು.
ಕೃಷಿ ಪತ್ತಿನ ನಿರ್ದೇಶಕ ಅಣ್ಣಯ್ಯ (ತಿಮ್ಮೇಗೌಡ) ಮಾತನಾಡಿದರು. ಮುಖಂಡರಾದ ಗಣೇಶ್, ರತೀಶ್, ಕೃಷಿ ಇಲಾಖೆ ಸಿಬ್ಬಂದಿ ವಿಜಯ್ ಕುಮಾರ್ ಹಾಜರಿದ್ದರು.