ಹೂವಿನಹಡಗಲಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷೆ: ಶಾಸಕ ಕೃಷ್ಣನಾಯ್ಕ

KannadaprabhaNewsNetwork |  
Published : May 15, 2026, 02:15 AM IST
ಹೂವಿನಹಡಗಲಿಯ ಶಾಸಕರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಕೃಷ್ಣನಾಯ್ಕ.  | Kannada Prabha

ಸಾರಾಂಶ

ಈಗಾಗಲೇ ಸರ್ಕಾರ 56 ಸಾವಿರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ಹೂವಿನಹಡಗಲಿ: ಗ್ರಾಮೀಣ ಪ್ರದೇಶದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ, ತರಬೇತಿಯನ್ನು ಬೆಂಗಳೂರಿನ ಸಾಧನಾ ಸಂಸ್ಥೆಯಿಂದ ಉಚಿತವಾಗಿ ನೀಡಲಾಗುತ್ತಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಇಲ್ಲಿನ ಶಾಸಕ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸರ್ಕಾರ 56 ಸಾವಿರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳು ದೂರದ ನಗರ ಪ್ರದೇಶಗಳಿಗೆ ಹೋಗಿ ಲಕ್ಷಾಂತರ ರುಪಾಯಿ ಶುಲ್ಕ ಪಾವತಿ ಮಾಡಿ, ತರಬೇತಿ ಪಡೆಯಲು ಅವರಿಗೆ ಆರ್ಥಿಕ ಹೊರೆ ಉಂಟಾಗುತ್ತಿದೆ. ಹೂವಿನಹಡಗಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪಟ್ಟಣದ ಎಸ್‌ಆರ್‌ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 6ರಿಂದ 8 ತಿಂಗಳುಗಳ ಕಾಲ ತರಬೇತಿ ನೀಡಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ತಾಲೂಕಿನ 800 ಕ್ಕಿಂತಲ್ಲೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ತಗುಲುವ ವೆಚ್ಚವನ್ನು ನಾನೇ ಭರಿಸುತ್ತೇನೆ. ವಿದ್ಯಾರ್ಥಿಗಳಿಂದ ಶುಲ್ಕ ಪಾವತಿ ಇರುವುದಿಲ್ಲ. ಬೆಂಗಳೂರಿನ ಸಾಧನಾ ಸಂಸ್ಥೆ ಉತ್ತಮ ತರಬೇತಿ ನೀಡುತ್ತಿದೆ. ಎಲ್ಲ ಸರ್ಕಾರಿ ಹುದ್ದೆಗಳಿಗೆ ತಕ್ಕಂತೆ ತರಬೇತಿ ನೀಡುವಂತಹ ನುರಿತ ತರಬೇತುದಾರರಿದ್ದಾರೆ. ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.

ಬೆಂಗಳೂರಿನ ಸಾಧನಾ ಸಂಸ್ಥೆ ನಿರ್ದೇಶಕಿ ಡಾ.ಜ್ಯೋತಿ ಮಾತನಾಡಿ, ಬೆಂಗಳೂರಿನ ತರಬೇತಿ ಸಂಸ್ಥೆಯನ್ನು ಹೂವಿನಹಡಗಲಿಗೆ ಕರೆ ತಂದು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಉಚಿತ ತರಬೇತಿ ನೀಡುವ ವ್ಯವಸ್ಥೆ ಕಲ್ಪಿಸಿದ ರಾಜ್ಯದ ಮೊದಲ ಶಾಸಕರಾಗಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಗೆ ಮುನ್ನುಡಿ ಬರೆಯುತ್ತಿರುವ ಇವರ ಚಿಂತನೆ ಉತ್ತಮವಾಗಿದೆ ಎಂದರು.

ತರಬೇತಿಗೆ ಮೇ15 ರಿಂದ ಜೂನ್‌ 5ರವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಅರ್ಜಿಗಳು ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿಯೂ ಭರ್ತಿ ಮಾಡಲು ಅವಕಾಶವಿದೆ. ಜೂನ್‌ 10ರಂದು ತರಬೇತಿಗೆ ಆಯ್ಕೆಯಾಗುವ ವಿದ್ಯಾರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಪ್ರತಿ ಭಾನುವಾರ ಟೆಸ್ಟ್‌ ಇರಲಿದೆ ಊಟ ಮತ್ತು ವಸತಿ ವ್ಯವಸ್ಥೆ ಇರುವುದಿಲ್ಲ ಎಂದರು.

ಕಳೆದ 2 ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ತಾಲೂಕು ಪ್ರಥಮ ಸ್ಥಾನದಲ್ಲಿದೆ. ನಾವು ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ 15ರಿಂದ 20 ವಿದ್ಯಾರ್ಥಿಗಳು ಸರ್ಕಾರಿ ಸೇವೆ ಸೇರುವ ರೀತಿಯಲ್ಲಿ ತರಬೇತಿ ನೀಡುತ್ತೇವೆಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಾಧನಾ ಸಂಸ್ಥೆ ಮುಖ್ಯಸ್ಥ ಮಹದೇವರಾಜ, ಜಿಬಿಆರ್‌ ಪದವಿ ಕಾಲೇಜು ಪ್ರಾಚಾರ್ಯ ಎಸ್‌.ಎಸ್‌.ಪಾಟೀಲ, ಎಸ್‌ಆರ್‌ಎಂಪಿಪಿ ಪದವಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ವಿಜಯಕುಮಾರ, ಎಸ್‌ಕೆಜಿಜಿ ಕಾಲೇಜು ಪ್ರಾಚಾರ್ಯ ಎ.ಕೊಟ್ರಗೌಡ ಮಾತನಾಡಿದರು.

ಜಿಪಿಜಿ ಕಾಲೇಜು ಪ್ರಾಚಾರ್ಯ ಕೋರಿ ಹಾಲೇಶ, ಬಿಜೆಪಿ ಮಂಡಲ ಅಧ್ಯಕ್ಷ ಪೂಜಾರ ಮಲ್ಲಿಕಾರ್ಜುನ, ಮಾಜಿ ಅಧ್ಯಕ್ಷ ಹಣ್ಣಿ ಶಶಿಧರ, ಕೆ.ಬಿ.ವೀರಭದ್ರಪ್ಪ, ಎಂ.ಪರಮೇಶಪ್ಪ, ಎಸ್‌.ಬಸವರಾಜ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಪ್ರಾಪ್ತರ ಮದುವೆ ತಡೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ
ಬಸ್, ರಸ್ತೆ ಸಮಸ್ಯೆ ಪರಿಹಾರಕ್ಕೆ ಒತ್ತಾಯ