ಮುಂಡರಗಿ: ಉಚಿತ ಮತ್ತು ಕಡ್ಡಾಯ ಶಿಕ್ಷಣ ಪ್ರತಿ ಮಗುವಿನ ಹಕ್ಕು. ಅದನ್ನು ಪ್ರತಿ ಮಗುವಿಗೆ ದೊರಕಿಸುವುದು ಪ್ರತಿ ನಾಗರಿಕನ ಕರ್ತವ್ಯವಾಗಿರುತ್ತದೆ ಎಂದು ಮುಂಡರಗಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ ತಿಳಿಸಿದರು.ಪಟ್ಟಣದ ಸ್ವಾಮಿ ವಿವೇಕಾನಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಕಾರ್ಮಿಕ ಇಲಾಖೆ, ವಕೀಲರ ಸಂಘ ಮತ್ತು ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ನ್ಯಾಯವಾದಿ ಮಂಜುನಾಥ ಅರಳಿ ಮಾತನಾಡಿ, ಎಲ್ಲ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಶಿಕ್ಷಾರ್ಹ ಅಪರಾದವಾಗಿದೆ. ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿದ ಮಾಲೀಕರಿಗೆ 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ₹20 ಸಾವಿರದಿಂದ ₹50 ಸಾವಿರದವರೆಗೆ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ ಎಂದರು.ಸಂಸ್ಥೆಯ ಆಡಳಿತಾಧಿಕಾರಿ ಸಿ.ಎಸ್. ಅರಸನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ದುಡಿಮೆ ಬೇಡ, ಶಿಕ್ಷಣ ಬೇಕು ಎಂಬುದನ್ನು ಎಲ್ಲರೂ ಅರಿಯಬೇಕು. ಬಾಲಕಾರ್ಮಿಕ ವಿರೋಧಿ ದಿನಾಚರಣೆಯ ತಿಳಿವಳಿಕೆಯ ಕಾರ್ಯಕ್ರಮವನ್ನು ಪಾಲಕರಿಗಾಗಿಯೂ ನಡೆಸಬೇಕು. ಅಂದಾಗ ಅವರಿಗೆ ಮನವರಿಕೆಯಾಗಿ ಮಕ್ಕಳನ್ನು ಬಾಲ್ಯಾವಸ್ಥೆಯಲ್ಲಿ ಕೆಲಸಕ್ಕೆ ಕಳಿಸುವುದನ್ನು ನಿಲ್ಲಿಸಬಹುದು ಎಂದರು.ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕ ಭಾಗ್ಯವಂತ ಪತ್ತಾರ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ನ್ಯಾಯಾೃವಾದಿಗಳಾದ ಪ್ರಭುದೇವ ಕುಲಕರ್ಣಿ, ಪರಮೇಶ ನಾಯಕ, ಬಸವರಾಜ ಕೊಟಗೋಡ, ವೀರಭದ್ರ ಶಿರಹಟ್ಟಿ, ವೆಂಕಟೇಶ ಸಂಕ್ಲಾಪೂರ, ಭೀಮರಾಯ ಹಾದಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ದೇವರಡ್ಡಿ ಇಮ್ರಾಪೂರ ಸ್ವಾಗತಿಸಿದರು. ಹಿರಿಯ ಶಿಕ್ಷಕ ಗುಡದಪ್ಪ ಲಿಂಗಶೆಟ್ಟರ ನಿರೂಪಿಸಿ, ವಂದಿಸಿದರು.