ಕನ್ನಡಪ್ರಭ ವಾರ್ತೆ ಯಲ್ಲಾಪುರ
ಹಿಂದೂ ಮಹಿಳೆಯ ಹತ್ಯೆ ಖಂಡಿಸಿ ನಡೆದ ಯಲ್ಲಾಪುರ ಬಂದ್ ಮತ್ತು ಪ್ರತಿಭಟನಾ ಸಭೆ ಸಂದರ್ಭದಲ್ಲಿ ಅನಾಥ ಬಾಲಕನ ಮುಂದಿನ ಶಿಕ್ಷಣದ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವುದಾಗಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಪರವಾಗಿ ಅದರ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಪ್ರಕಟಿಸಿದ್ದರು. ಅದೇ ದಿನ ಸಂಜೆ ನತದೃಷ್ಟೆಯ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಪರವಾಗಿ 5 ಲಕ್ಷ ರೂ. ನಗದು ಪರಿಹಾರ ನೀಡಿ, ವಿಶ್ವದರ್ಶನ ಸಂಸ್ಥೆ ಅನಾಥ ಬಾಲಕನಿಗೆ ಉಚಿತ ಶಿಕ್ಷಣ ನೀಡಲು ಮುಂದೆ ಬಂದಿರುವುದನ್ನು ಉಲ್ಲೇಖಿಸಿ ಪ್ರಶಂಸೆ ಮಾಡಿದ್ದರು.
ಬುಧವಾರ ಸಂಜೆ ಯಲ್ಲಾಪುರದ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರೊಂದಿಗೆ ಮೃತ ಯುವತಿ ಮನೆಗೆ ತೆರಳಿದ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಬಾಲಕ ಸ್ವಾತಿಕ್ ಸಚಿನ ಕಾಟೆಗೆ ಉಚಿತ ಶಿಕ್ಷಣದ ಲಿಖಿತ ವಾಗ್ದಾನ ಪತ್ರವನ್ನು ನೀಡಿದರು.ಆಟೋ ಚಾಲಕನಿಗೆ ಸನ್ಮಾನ:
ದಲಿತ ಹಿಂದೂ ಯುವತಿ ರಂಜಿತಾಳ ಮೇಲೆ ಹಂತಕ ಮಾರಣಾಂತಿಕ ದಾಳಿ ನಡೆಸಿದ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಸಿಗದಿದ್ದಾಗ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಕರಿಸಿದ ಆಟೋ ಚಾಲಕ ಚಂದ್ರಶೇಖರ ಭೋವಿವಡ್ಡರ ಅವರನ್ನೂ ಇದೇ ವೇಳೆ ಸನ್ಮಾನಿಸಲಾಯಿತು.ಪ್ರಮುಖರಾದ ಬಿಜೆಪಿ ಮಂಡಳ ಅಧ್ಯಕ್ಷ ಶ್ರೀ ಪ್ರಸಾದ ಹೆಗಡೆ, ವಿಹಿಂಪ ಅಧ್ಯಕ್ಷ ಶ್ರೀ ಗಜಾನನ ನಾಯ್ಕ, ಪ್ರಮುಖರಾದ ವೆಂಕಟ್ರಮಣ ಬೆಳ್ಳಿ, ಶ್ಯಾಮಿಲಿ ಪಾಟಣಕರ, ಶ್ರುತಿ ಹೆಗಡೆ, ಮಂಜುನಾಥ ಹೀರೇಮಠ, ಅನಂತ ಕಂಚಿಪಾಲ, ಗಿರೀಶ ಭಾಗ್ವತ ಮೊದಲಾದವರು ಜೊತೆಯಲ್ಲಿದ್ದರು.