ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರಿ ಸ್ಥಳಗಳಲ್ಲಿರುವ ಸ್ಮಶಾನಗಳಲ್ಲಿ ಎಲ್ಲಾ ಸಮುದಾಯದವರು ಯಾವುದೇ ಬೇಧ- ಭಾವವಿಲ್ಲದೆ ಅಂತ್ಯಸಂಸ್ಕಾರ ಮಾಡಲು ಮುಕ್ತ ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದುಕೊರತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶವಸಂಸ್ಕಾರವನ್ನು ಪ್ರತಿಯೊಬ್ಬರೂ ಗೌರವಯುತವಾಗಿ ಮಾಡಬೇಕು. ಕೆ.ಆರ್.ಪೇಟೆಯ ಟೌನ್‌ನಲ್ಲಿ ವಾಸಿಸುತ್ತಿರುವ ೬೪ ಪೌರ ಕಾರ್ಮಿಕ ಕುಟುಂಬಗಳಿಗೆ ಒಂದು ವಾರದೊಳಗೆ ಹೊಸಹೊಳಲು ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ ಲಭ್ಯವಿರುವ ೭ ಎಕರೆ ಜಾಗವನ್ನು ಸರ್ವೇ ಮಾಡಿ, ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಕೊಡಿಸುವ ಕಾರ್ಯ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೆಆರ್.ಪೇಟೆ ತಾಲೂಕಿನ ಬಿಂಡಿಗನವಿಲೆ, ಮಂಗರಹಳ್ಳಿಯಿಂದ ಹಿರಸಾವೆಗೆ ಗ್ರಾಮಕ್ಕೆ ಸುಮಾರು ವರ್ಷಗಳಿಂದಲೂ ರಸ್ತೆ ಕಿರಿದಾಗಿದೆ, ಸಾರಿಗೆ ಬಸ್ ಇರುವುದಿಲ್ಲ ಎಂಬ ದೂರು ಬಂದಿದ್ದು, ಸಾರಿಗೆ ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿ ಬಸ್ ಗಳು ಚಲಿಸುವ ಸಾಧ್ಯತೆ ಇದ್ದರೆ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಕುಂದುಕೊರತೆಗಳು ಜಿಲ್ಲಾ ಮಟ್ಟದಲ್ಲಿ ಚರ್ಚೆಯಾಗುವ ವಿಷಯಗಳು ತಾಲೂಕು ಮಟ್ಟದ ಸಭೆಯಲ್ಲಿ ಚರ್ಚೆ ನಡೆಸಿದರೆ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬಹುದು ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಪಂಗಡದವರು ತಮ್ಮ ಗ್ರಾಮದಲ್ಲಿ ಕೆರೆ, ರಸ್ತೆ ಹಾಗೂ ಸ್ಮಶಾನ ಅಭಿವೃದ್ಧಿಪಡಿಸಿಕೊಡಬೇಕು ಎಂದು ಕುಂದುಕೊರತೆ ಸಭೆಯಲ್ಲಿ ಅರ್ಜಿ ಸಲ್ಲಿಸಿದಾಗ ಇದನ್ನು ವಿಶೇಷವಾಗಿ ಪರಿಗಣಿಸಿ ನರೇಗಾ ಯೋಜನೆಯಡಿ ತಯಾರಿಸುವ ಕ್ರಿಯಾ ಯೋಜನೆಯಲ್ಲಿ ನಿಯಮಾನುಸಾರ ಪರಿಶೀಲಿಸಿ ಪ್ರಥಮ ಆದ್ಯತೆ ನೀಡಿ ಸೇರಿಸಿಕೊಳ್ಳಿ ಎಂದು ಹೇಳಿದರು.ಸರ್ಕಾರದ ವ್ಯಾಪ್ತಿಯಲ್ಲಿರುವ ಅಂಗಡಿ ಮಳಿಗೆಗಳನ್ನು ಹರಾಜು ಮಾಡುವಾಗ ಪೌರಕಾರ್ಮಿಕರಿಗೆ ಮೀಸಲಾತಿ ನೀಡುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಚರ್ಚಿಸಲಾಗುವುದು ಎಂದು ನುಡಿದರು.
ಜಿಪಂ ಸಿಇಒ ನಂದಿನಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳನ್ನು ಗುರುತಿಸಿ ಅವರಿಗೆ ನಿವೇಶನ ಒದಗಿಸಲು ಗ್ರಾಮ ಮಟ್ಟದಲ್ಲಿ ಸಭೆ ನಡೆಸಲು ಸೂಚನೆ ನೀಡಿ ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಗ್ರಾಮದ ಸಾರಿಗೆ ಬಸ್ ನಿಲ್ದಾಣದ ಪಕ್ಕ ವಾಸವಿರುವ ದಲಿತ ಕುಟುಂಬದವರಿಗೆ ಪೌತಿ ಖಾತೆ ಮಾಡಿಕೊಡುವ ಬಗ್ಗೆ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯತಿಯಲ್ಲಿ ಲಭ್ಯವಿರುವ ಮಾಹಿತಿ ಹಾಗೂ ವಾಸವಿರುವ ಕುಟುಂಬಸ್ಥರ ಬಳಿ ಇರುವ ಮಾಹಿತಿಯನ್ನು ಪರಿಶೀಲಿಸಿ ಪೌತಿ ಖಾತೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲು ಸಮಿತಿ ರಚಿಸಲಾಗುವುದು ಎಂದರು.
ಪರಿಶಿಷ್ಟ ಜಾತಿ ಪಂಗಡದವರು ಪೊಲೀಸ್ ಇಲಾಖೆಯಲ್ಲಿ ದಾಖಲೆ ಮಾಡುವ ಪ್ರಕರಣಗಳಲ್ಲಿ ಸರಿಯಾಗಿ ಚಾರ್ಜ್‌ಶೀಟ್ ಆಗುತ್ತಿಲ್ಲ ಎಂದು ಕೆಲವು ಮುಖಂಡರು ಸಭೆಯಲ್ಲಿ ಚರ್ಚಿಸಿದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ, ಈ ಕುರಿತು ತಾವೇ ಖುದ್ದು ಪರಿಶೀಲಿಸಿ ವರದಿ ನೀಡುವುದಾಗಿ ಸಭೆಗೆ ತಿಳಿಸಿದರು.ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಉಪವಿಭಾಗಾಧಿಕಾರಿ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್ ಉಪಸ್ಥಿತರಿದ್ದರು.