ಕುಷ್ಟಗಿ: ಇಂದಿನ ದಿನಗಳಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಸುಲಭದ ಮಾತಲ್ಲ. ಬಡವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸುವ ಇಂತಹ ಸೇವಾ ಕಾರ್ಯಗಳು ವರದಾನವಾಗಿವೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಕಾಖಂಡಕಿ ಕುಟುಂಬ ಮಹಿಪತಿದಾಸರ ಮನೆತನವಾಗಿದ್ದು, ಸೇವಾ ಮನೋಭಾವದಿಂದ ಪ್ರತಿವರ್ಷ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ. ಜಾತಿ, ಮತ ಭೇದವಿಲ್ಲದೆ ಎಲ್ಲ ವರ್ಗದವರಿಗೂ ಚಿಕಿತ್ಸೆ ನೀಡುತ್ತಿರುವುದು ಮಾದರಿಯಾಗಿದೆ. ಮಹಿಪತಿದಾಸರು ಬಾಳಿದ ಸ್ಥಳವನ್ನು ಸಂರಕ್ಷಿಸಿ, ಅವರ ಹೆಸರಿನಲ್ಲಿ ಇಂತಹ ಸೇವಾ ಕಾರ್ಯಕ್ರಮಗಳನ್ನು ಮುಂದುವರಿಸಬೇಕು ಎಂದರು. ಬಡವರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಯುಷ್ಮಾನ್ ಭಾರತ ಯೋಜನೆ ಜಾರಿಗೊಳಿಸಿದ್ದಾರೆ ಎಂದರು.
ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಕಾಖಂಡಕಿ ಕಣ್ಣಿನ ಆಸ್ಪತ್ರೆ ಮೂಲಕ ಇದು ವರೆಗೆ ಸುಮಾರು ಐದು ಸಾವಿರ ಜನರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಿರುವುದು ಮಹತ್ವದ ಸೇವೆಯಾಗಿದೆ. ಪರೋಪಕಾರ ಮಾಡುವವರಿಗೆ ಭಗವಂತನ ಕೃಪೆ ಇರುತ್ತದೆ. ಕಾಖಂಡಕಿ ಕುಟುಂಬದ ಸೇವೆ ಇತರರಿಗೆ ಪ್ರೇರಣೆಯಾಗಿದೆ ಎಂದರು.ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಬ್ರಾಹ್ಮಣ ಸಮಾಜದವರು ಕಾಖಂಡಕಿ ಅವರೊಂದಿಗೆ ಕೈಜೋಡಿಸಿ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಿರುವುದು ಮಾದರಿ ಕಾರ್ಯ. ಪ್ರತಿಯೊಬ್ಬರೂ ಕಣ್ಣು ದಾನದ ಬಗ್ಗೆ ಜಾಗೃತಿ ಮೂಡಿಸಬೇಕು. ಸಾವಿನ ಬಳಿಕ ಮಣ್ಣಿನಲ್ಲಿ ಲೀನವಾಗುವ ಕಣ್ಣುಗಳು ಮತ್ತೊಬ್ಬರ ಬದುಕಿಗೆ ಬೆಳಕಾಗಬಹುದು ಎಂದರು.