ಕನ್ನಡಪ್ರಭ ವಾರ್ತೆ ಹಾಸನ
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಹಿಮ್ಸ್)ಯ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಎಕೋ ಕ್ಲಬ್ ವತಿಯಿಂದ ಗವೇನಹಳ್ಳಿಯಲ್ಲಿರುವ ಕಾಮಧೇನು ವೃದ್ಧಾಶ್ರಮದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ ಶಿಬಿರದ ಉದ್ಘಾಟನೆಯನ್ನು ಕಾಮಧೇನು ವೃದ್ಧಾಶ್ರಮದ ಅಧ್ಯಕ್ಷರಾದ ಮಾಧವ ಶೆಣೈ ನೆರವೇರಿಸಿ, ಹಿಮ್ಸ್ ಸಂಸ್ಥೆಯು ಬಡ ಮತ್ತು ಹಿರಿಯ ನಾಗರಿಕರ ಹಿತದೃಷ್ಟಿಯಿಂದ ಇಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಿರುವುದರಿಂದ ಹಿರಿಯ ನಾಗರಿಕರಿಗೆ ಅನುಕೂಲವಾಗುತ್ತಿದೆ ಎಂದರು.ಹಿಮ್ಸ್ ಸಂಸ್ಥೆಯ ನಿರ್ದೇಶಕರಾದ ಡಾ. ರಾಜಣ್ಣ.ಬಿ ಅವರು ಮಾತನಾಡಿ, ರಾಜ್ಯದಲ್ಲೇ ಉತ್ತಮವಾದ ಮತ್ತು ಮಾದರಿ ಸಹಕಾರಿ ತತ್ವದಲ್ಲಿ ಆರಂಭವಾದ ಈ ಆಶ್ರಮ ಈಗಾಗಲೇ ಸರಕಾರದಿಂದ ಗುರುತಿಸಲ್ಪಟ್ಟಿದೆ ಮತ್ತು ಆಶ್ರಮವಾಸಿಗಳಿಗೆ ಸುಲಭವಾಗಿ ಆರೋಗ್ಯ ಸೇವೆ ದೃಷ್ಟಿಯಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿಮ್ಸ್ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಬಿ.ಸಿ.ರವಿಕುಮಾರ್, ಡಾ. ಗುರುರಾಜ ಹೆಬ್ಬಾರ್‌ರವರು ಆರಂಭಿಸಿರುವ ಈ ಆಶ್ರಮದಲ್ಲಿ ಅನೇಕ ಹಿರಿಯ ನಾಗರಿಕರು ಮತ್ತು ಅನಾಥ ಮಕ್ಕಳು ಆಶ್ರಯ ಪಡೆದಿದ್ದಾರೆ ಹಾಗೂ ಡಾ. ಹೆಬ್ಬಾರ್‌ರವರ ಕಾಳಜಿ ಹಾಗೂ ಚಿಂತನೆಗಳನ್ನು ನಾವೆಲ್ಲರೂ ಸ್ಮರಿಸಬೇಕು ಎಂದರು. ಈ ಸಂದರ್ಭದಲ್ಲಿ ಆಶ್ರಮದ ಸುಮಾರು ೯೮ ಜನ ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ಹಿಮ್ಸ್ ಸಂಸ್ಥೆಯ ವಿವಿಧ ವಿಭಾಗಗಳಿಂದ ವೈದ್ಯರು ಆರೋಗ್ಯ ತಪಾಸಣೆಯನ್ನು ಮಾಡಿ ಉಚಿತ ಔಷಧಿಗಳನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಹೇಮಂತ್ ಕುಮಾರ್ ಹಾಗೂ ತಂಡದವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಕಾಮಧೇನು ಆಶ್ರಮದ ನಿರ್ದೇಶಕರುಗಳಾದ ಡಾ. ಪ್ರತಿಭಾ ಜಿ. ಹೆಬ್ಬಾರ್, ಚಂದ್ರಶೇಖರ್ ಕಟ್ಟಾಯ, ಜಯಲಕ್ಷ್ಮಿ, ಪರಮೇಶ್ ಹಾಗೂ ಹಿಮ್ಸ್ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ ನಿಚಿತಾ ಕುಮಾರಿ ಉಪಸ್ಥಿತರಿದ್ದರು.