ಬಂಡ್ರಾಳು ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿ

KannadaprabhaNewsNetwork |  
Published : Mar 12, 2026, 01:00 AM IST
ಸಿರುಗುಪ್ಪ ತಾಲೂಕಿನ ಬಂಡ್ರಾಳು ಗ್ರಾಮದಲ್ಲಿ ಜರುಗಿದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಉಚಿತ ಆರೋಗ್ಯ ಶಿಬಿರಗಳು ಸಮಾಜ ಸೇವೆಯ ಅತ್ಯುತ್ತಮ ರೂಪಗಳಲ್ಲಿ ಒಂದಾಗಿವೆ. ಆರೋಗ್ಯವೇ ಮಾನವನಿಗೆ ಅತ್ಯಂತ ಅಮೂಲ್ಯವಾದ ಸಂಪತ್ತು.

ಬಳ್ಳಾರಿ: ಸಿರುಗುಪ್ಪ ತಾಲೂಕಿನ ಬಂಡ್ರಾಳು ಗ್ರಾಮದಲ್ಲಿ ಪೊಂಪಯ್ಯತಾತನವರ 34ನೇ ಪುಣ್ಯ ಸ್ಮರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಿರುಗುಪ್ಪದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ,

ಉಚಿತ ಆರೋಗ್ಯ ಶಿಬಿರಗಳು ಸಮಾಜ ಸೇವೆಯ ಅತ್ಯುತ್ತಮ ರೂಪಗಳಲ್ಲಿ ಒಂದಾಗಿವೆ. ಆರೋಗ್ಯವೇ ಮಾನವನಿಗೆ ಅತ್ಯಂತ ಅಮೂಲ್ಯವಾದ ಸಂಪತ್ತು. ಆದರೆ ಆರ್ಥಿಕ ಸಂಕಷ್ಟದಿಂದ ಅನೇಕ ಜನರು ಸರಿಯಾದ ವೈದ್ಯಕೀಯ ಸೇವೆ ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಉಚಿತ ಆರೋಗ್ಯ ಶಿಬಿರಗಳು ಜನರಿಗೆ ಆಶಾಕಿರಣವಾಗುತ್ತವೆ ಎಂದರು.

ಉಚಿತ ಆರೋಗ್ಯ ಶಿಬಿರಗಳಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಜನರಿಗೆ ಉಚಿತವಾಗಿ ವೈದ್ಯಕೀಯ ಪರೀಕ್ಷೆ, ಸಲಹೆ ಮತ್ತು ಔಷಧಿಗಳನ್ನು ನೀಡುತ್ತಾರೆ. ರಕ್ತದ ಒತ್ತಡ, ಮಧುಮೇಹ, ಕಣ್ಣಿನ ಪರೀಕ್ಷೆ, ದಂತ ಚಿಕಿತ್ಸೆ ಮುಂತಾದ ಹಲವು ಪರೀಕ್ಷೆಗಳು ಇಲ್ಲಿ ನಡೆಯುತ್ತವೆ. ಇದರಿಂದ ಜನರು ತಮ್ಮ ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಶಿಬಿರಗಳ ಮಹತ್ವ ಇನ್ನಷ್ಟು ಹೆಚ್ಚು. ಅಲ್ಲಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೌಲಭ್ಯಗಳು ಕಡಿಮೆ ಇರುವುದರಿಂದ ಜನರು ದೂರದ ನಗರಗಳಿಗೆ ಹೋಗಲು ಕಷ್ಟಪಡುತ್ತಾರೆ. ಉಚಿತ ಆರೋಗ್ಯ ಶಿಬಿರಗಳು ಅವರ ಮನೆಬಾಗಿಲಿಗೆ ವೈದ್ಯಕೀಯ ಸೇವೆಯನ್ನು ತಲುಪಿಸುತ್ತವೆ. ಇಂತಹ ಶಿಬಿರಗಳನ್ನು ಆಯೋಜಿಸುವುದು ನಿಜಕ್ಕೂ ಪುಣ್ಯದ ಕೆಲಸ. ಇದು ಮಾನವೀಯತೆ, ದಯೆ ಮತ್ತು ಸಮಾಜದ ಮೇಲಿನ ಹೊಣೆಗಾರಿಕೆಯನ್ನು ತೋರಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿ ಮಾತನಾಡಿ, ಪ್ರತಿವರ್ಷದಂತೆ ಈ ಬಾರಿಯೂ ಪೊಂಪಯ್ಯತಾತನವರ ಪುಣ್ಯಸ್ಮರಣೆ ಅಂಗವಾಗಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ. ಉಚಿತ ಆರೋಗ್ಯ ಶಿಬಿರಗಳು ಬಡವರಿಗೆ ವರದಾನವಾಗಿವೆ. ವಿವಿಧ ತಜ್ಞ ವೈದ್ಯರು ಗ್ರಾಮೀಣ ಭಾಗಕ್ಕೆ ಬಂದು ಆರೋಗ್ಯ ತಪಾಸಣೆ ಮಾಡುವುದರಿಂದ ಇದರ ಪ್ರಯೋಜನ ಪ್ರತಿಯೊಬ್ಬರೂ ಪಡೆದುಕೊಳ್ಳುವಂತಾಗಬೇಕು ಎಂದು ತಿಳಿಸಿದರು.

ಶಿಬಿರದ ಮುಖ್ಯಸ್ಥ ಕೆ.ಮಲ್ಲಿಕಾರ್ಜುನ ಹಚ್ಚೊಳ್ಳಿ ಅವರು ಮಾತನಾಡಿ ಶಿಬಿರದಲ್ಲಿ ಭಾಗವಹಿಸುವವರಿಗೆ ಹೃದಯ ಸಂಬಂಧಿ, ನರರೋಗ ಸಮಸ್ಯೆ, ಕಣ್ಣಿನ ಸಮಸ್ಯೆ, ಕಿಡ್ನಿ ಸಮಸ್ಯೆ, ಕ್ಯಾನ್ಸರ್ ಸಮಸ್ಯೆಗೆ ತಪಾಸಣೆಯ ಜೊತೆಗೆ ಉಚಿತ ಔಷಧಗಳನ್ನು ನೀಡಲಾಗುವುದು ಹಾಗೂ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ಶಿವರುದ್ರತಾತನವರು ಮುತ್ತಿಪೆಂಡೆಮಠ ಹಚ್ಚೊಳ್ಳಿ ಸಾನ್ನಿಧ್ಯ ವಹಿಸಿದ್ದರು. ಪೊಂಪಯ್ಯತಾತ ಸೇವಾ ಟ್ರಸ್ಟ್, ತಾಲೂಕು ಸಾರ್ವಜನಿಕ ಆಸ್ಪತ್ರೆ ಸಿರುಗುಪ್ಪ ಹಾಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ರಾರಾವಿ ಹಾಗೂ ವೈದೇಹಿ ಆಸ್ಪತ್ರೆ, ಬೆಂಗಳೂರು ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.

ಶಿಬಿರದಲ್ಲಿ ಬಂಡ್ರಾಳ್, ಸುತ್ತಮುತ್ತಲಿನ ಗ್ರಾಮಗಳ ಸುಮಾರು 250ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇದೇ ವೇಳೆ ವೈದೇಹಿ ಆಸ್ಪತ್ರೆಯ ವೈದ್ಯರನ್ನು ಸನ್ಮಾನಿಸಲಾಯಿತು. ಎಂ.ರಾಜಶೇಖರ್ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ