ಪ್ರಜಾಸೇವೆಯಲ್ಲಿ ಉಚಿತ ಕಾನೂನು ಸೇವೆ: ಸಿಎಂ

KannadaprabhaNewsNetwork |  
Published : Oct 04, 2026, 02:00 AM ISTUpdated : Oct 04, 2026, 05:08 AM IST
DK Shivakumar

ಸಾರಾಂಶ

ರಾಜ್ಯ ಸರ್ಕಾರ ಪ್ರಜಾಸೇವೆ ಮೂಲಕ ಜನರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಲು ಜನರ ಮುಂದಿದ್ದು, ನ್ಯಾಯಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಉಚಿತ ಸೇವೆ ಒದಗಿಸಲು ಅಭಿಯಾನದಲ್ಲಿ ಪ್ರತ್ಯೇಕ ಕಾನೂನು ಕೇಂದ್ರ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಪಿರಿಯಾಪಟ್ಟಣ: ರಾಜ್ಯ ಸರ್ಕಾರ ಪ್ರಜಾಸೇವೆ ಮೂಲಕ ಜನರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಲು ಜನರ ಮುಂದಿದ್ದು, ನ್ಯಾಯಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಉಚಿತ ಸೇವೆ ಒದಗಿಸಲು ಅಭಿಯಾನದಲ್ಲಿ ಪ್ರತ್ಯೇಕ ಕಾನೂನು ಕೇಂದ್ರ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಶನಿವಾರ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದ ಪ್ರಜಾಸೇವೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿ ತಾಲೂಕಿನಲ್ಲಿ ನ್ಯಾಯಾಲಯದಲ್ಲಿ ಕಾನೂನು ನೆರವು ನೀಡುವ ವಿಭಾಗವಿದ್ದು, ಅವರನ್ನು ಕರೆಸಿ ಈ ಕಾರ್ಯಕ್ರಮದಲ್ಲಿ ಒಂದು ಕೇಂದ್ರ ಆರಂಭಿಸಲಾಗಿದೆ. ಜನರಿಗೆ ಕಾನೂನಿನಲ್ಲಿ ತೊಡಕು ಇದ್ದರೆ ಉಚಿತವಾಗಿ ಸಹಾಯ ಮಾಡಲಾಗುವುದು. ಪ್ರಜಾಸೇವೆ ಇಲಾಖೆ ನಡೆಯುವಾಗ ಈ ವಿಭಾಗದವರು ಅಧಿಕಾರಿಗಳೊಂದಿಗೆ ಕುಳಿತಿರುತ್ತಾರೆ. ಇಡೀ ದೇಶದಲ್ಲೇ ಬೇರೆ ಯಾವುದೇ ರಾಜ್ಯಗಳು ಮಾಡದ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.

ನನ್ನ ಅನುಭವದಲ್ಲಿ ಪ್ರಜಾಸೇವೆ ಆರಂಭ:

ಪ್ರಜಾಸೇವೆ ಇಲಾಖೆ ಆರಂಭಿಸಿ ರಾಜ್ಯದ ಹಿರಿಯ ಪ್ರಾಮಾಣಿಕ ಅಧಿಕಾರಿಗೆ ಜವಾಬ್ದಾರಿ ವಹಿಸಿದ್ದೇವೆ. ಜನರ ಸೇವೆಗಾಗಿ ಜನರ ಸಮಸ್ಯೆಗೆ ಸ್ಪಂದಿಸಲು ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಈ ಹೊಸ ಇಲಾಖೆ ಆರಂಭಿಸಿದ್ದೇನೆ. ನಾನು ಶಾಸಕನಾದ ಬಳಿಕ ಪ್ರತಿ ವರ್ಷ ಪ್ರತಿ ಹಳ್ಳಿಗೆ ತೆರಳಿ ಅನುಭವ ಪಡೆದಿದ್ದೇನೆ. ಜನರ ಸಮಸ್ಯೆಗಳಿಗೆ ಮುಕ್ತಿ ನೀಡಿ, ಅವರ ಆಶಯಗಳಿಗೆ ಧ್ವನಿಯಾಗಿ, ನ್ಯಾಯ ಒದಗಿಸಲು, ಮಂತ್ರಿಗಳು ಹಾಗೂ ಸ್ಥಳೀಯ ಶಾಸಕರು ಸೇರಿದಂತೆ ಸರ್ಕಾರವು ಅಧಿಕಾರಿಗಳ ಸಮೇತ ಜನರ ಮನೆ ಬಾಗಿಲಿಗೆ ಹೋಗಲು ಈ ಇಲಾಖೆ ಆರಂಭಿಸಲಾಗಿದೆ ಎಂದರು.

ಜನರ ನೋವು ಬಗೆಹರಿದರೆ ಆತ್ಮತೃಪ್ತಿ:

ರಸ್ತೆ, ಪೋಡಿ, ಪಿಂಚಣಿ, ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ಅರಣ್ಯ, ಆರೋಗ್ಯ, ಪೊಲೀಸ್, ಕಾರ್ಮಿಕ, ಕೃಷಿ, ತೋಟಗಾರಿಕೆ ಸೇರಿದಂತೆ ಇಲಾಖೆವಾರು ಅಹವಾಲುಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಆಲಿಸಿ ಪರಿಹಾರ ಒದಗಿಸಲು ಪ್ರಜಾ ಸೇವಕನಾಗಿ ಇಡೀ ಸರ್ಕಾರ ನಿಮ್ಮ ಮುಂದೆ ಇದೆ. ನೀವು ಚೆನ್ನಾಗಿದ್ದರೆ, ನಾವು ಚೆನ್ನಾಗಿದ್ದಂತೆ. ನಿಮ್ಮ ನೋವುಗಳನ್ನು ಬಗೆಹರಿಸಿದರೆ, ನಮಗೆ ಆತ್ಮತೃಪ್ತಿ ಸಿಗುತ್ತದೆ ಎಂದರು.

12 ಲಕ್ಷ ಪಿಂಚಣಿದಾರರಿಗೆ ಪ್ರಯೋಜನ:

ನನಗೆ ಆರಂಭದಲ್ಲಿ ಪಿಂಚಣಿ ವಿಚಾರವಾಗಿ ಹೆಚ್ಚಿನ ಅರ್ಜಿ ಬರುತ್ತಿದ್ದವು. 32,000 ಆದಾಯ ಮಿತಿ ನಿಗದಿಪಡಿಸಿದ್ದು, ಪಿಂಚಣಿ ನಿಂತಿದೆ ಎಂದಾಗ, ಅದಕ್ಕೆ 1.20 ಲಕ್ಷ ರು.ವರೆಗೆ ಆದಾಯ ಮಿತಿಯನ್ನು ನಿಗದಿ ಮಾಡಿ ಸಮಸ್ಯೆ ಬಗೆಹರಿಸಲಾಗಿದೆ. ಸರ್ಕಾರದ ಒಂದು ತೀರ್ಮಾನದಿಂದ 12 ಲಕ್ಷ ಜನರಿಗೆ ಪ್ರಯೋಜನವಾಗಿದೆ ಎಂದರು.

ಮೊದಲ ಹಂತದಲ್ಲಿ 5 ಲಕ್ಷ ಬಡವರಿಗೆ ನಿವೇಶನ:

ನಿವೇಶನ ರಹಿತರು ಅರ್ಜಿಗಳನ್ನು ನೀಡುತ್ತಿದ್ದು, ಜಿಲ್ಲಾಧಿಕಾರಿಗಳು ಸರ್ಕಾರಿ ಜಮೀನುಗಳನ್ನು ಗುರುತಿಸಬೇಕು. ಅದಿಲ್ಲದಿದ್ದರೆ ಖಾಸಗಿ ಜಮೀನು ಅಥವಾ ಹೊಸ ಬಡಾವಣೆ ನಿರ್ಮಿಸಿ ಎಂದು ಸೂಚಿಸಲಾಗಿದೆ. ಮೊದಲ ಹಂತದಲ್ಲಿ ಸೂರು ಕೊಡಬೇಕೆಂದು 5 ಲಕ್ಷ ಬಡವರಿಗೆ ನಿವೇಶನ ನೀಡಲು ತೀರ್ಮಾನ ಮಾಡಲಾಗಿದೆ ಎಂದರು.

ಬರಗಾಲ ಎದುರಿಸಲು ಸಿದ್ಧ:

ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, 217 ತಾಲೂಕುಗಳು ಬರಗಾಲ ಪೀಡಿತವಾಗಿವೆ. ಟ್ರ್ಯಾಕ್ಟರ್‌ಗಳಿಗೆ ಸಹಾಯಧನ, ನೇಗಿಲಯೋಗಿ ಯೋಜನೆಗೆ 2 ತಾಲೂಕು ಆಯ್ಕೆ ಮಾಡಿ ಹೊಲ ಉಳುಮೆ ಮಾಡಿಕೊಡಲು ಕೃಷಿ ಸಚಿವ ನರೇಂದ್ರಸ್ವಾಮಿ ಅವರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಬಿಜೆಪಿಗರಿಂದ ಪ್ರಧಾನಿಗೆ ಅವಮಾನ:

ಮತದಾನದ ಹಕ್ಕು ಕಿತ್ತುಕೊಳ್ಳಲು ಬಿಜೆಪಿ ನಾಯಕರು ಹಾಗೂ ಮುಖಂಡರು ಬಡವರನ್ನು ಪಟ್ಟಿಯಿಂದ ಕಿತ್ತುಹಾಕಲು ಅರ್ಜಿ ಕೊಟ್ಟಿದ್ದರು. ಈ ದೇಶದಲ್ಲಿ ದೊಡ್ಡ ಕ್ರಾಂತಿಕಾರಿ ಹೋರಾಟ ಮಾಡಿ ಸರಿಯಾದ ದಾಖಲೆಗಳಿಲ್ಲದೆ ಕಿತ್ತುಹಾಕಬಾರದೆಂಬ ಸೂಚನೆಯನ್ನು ಚುನಾವಣಾ ಆಯೋಗದಿಂದ ಹೊರಡಿಸಿ ಪ್ರತಿಯೊಬ್ಬರ ಮತದಾನದ ಹಕ್ಕನ್ನು ರಕ್ಷಿಸುವ ಕೆಲಸವನ್ನು ಮಾಡಲಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ಜೆಡಿಎಸ್ ನವರು ಯಾರನ್ನೂ ಬಂಧಿಸಬಾರದೆಂದು ಕೇಳಿಕೊಂಡಿದ್ದಾರೆ. ಚುನಾವಣೆಯಲ್ಲಿ ಜನರ ಹೃದಯವನ್ನು ಗೆಲ್ಲಬೇಕು. ಅದು ಬಿಟ್ಟು ಮೋಸ, ಕುತಂತ್ರದಿಂದ ಚುನಾವಣೆ ಗೆಲ್ಲಲು ತಂತ್ರ ಹೂಡಿರುವುದು ದೇಶಕ್ಕೆ ಹಾಗೂ ಪ್ರಧಾನಿಗಳಿಗೆ ಅವಮಾನ ಮಾಡಲು ಹೊರಟಿದ್ದಾರೆ. ಸಂವಿಧಾನ ವಿರೋಧಿ ನೀತಿಯಲ್ಲಿ ತೊಡಗಿದ್ದಾರೆ. ಮತದಾನದ ಹಕ್ಕು ನಿಮ್ಮ ಬದುಕಿನ ಹಕ್ಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬಿಜೆಪಿಗರ ಮೇಲಿನ SIR ಎಫ್ಐಆರ್‌ ರದ್ದಾಗದಿದ್ರೆ ಠಾಣೆಗೆ ಮುತ್ತಿಗೆ : ಬಿವೈವಿ
ಕೇಂದ್ರ ತಂಡದಿಂದ ಬರ ಅಧ್ಯಯನ ಶುರು