ಮಂಗಳೂರು: ಆರ್ಥಿಕವಾಗಿ ಹಿಂದುಳಿದ ಜನಸಾಮಾನ್ಯರಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಮತ್ತು ಉನ್ನತ ಮಟ್ಟದ ಸೌಲಭ್ಯಗಳನ್ನು ಒದಗಿಸಿ ವೈದ್ಯಕೀಯ ಸೇವೆ ಸಲ್ಲಿಸುವುದು ನಮ್ಮ ವೈದ್ಯಕೀಯ ಸಂಸ್ಥೆಯ ಧ್ಯೇಯ ಮತ್ತು ಉದ್ದೇಶ ಎಂದು ಜಿ.ಆರ್. ಮೆಡಿಕಲ್ ಕಾಲೇಜು, ಆಸ್ಪತ್ರೆಯ ಅಧ್ಯಕ್ಷ ಗಣೇಶ್ ರಾವ್ ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಶೆಟ್ಟಿ ಮಾತನಾಡಿ, ತಮ್ಮ ಆಸ್ಪತ್ರೆಯಲ್ಲಿ ಉನ್ನತ ಮಟ್ಟದ ಮತ್ತು ಆಧುನಿಕ ತಂತ್ರಜ್ಞಾನ ಅಳವಡಿಸಿ ಚಿಕಿತ್ಸೆ ನೀಡಲಾಗುವುದು. ಜನಸಾಮಾನ್ಯರ ಆರೋಗ್ಯ ರಕ್ಷಣೆ ನಮ್ಮ ಗುರಿ. ಆಸ್ಪತ್ರೆಯಲ್ಲಿ ೭೨೦ ಹಾಸಿಗೆಗಳಿದ್ದು, ೧೯೦ ವೈದ್ಯಕೀಯ ತಜ್ಞರು ಹಗಲಿರುಳು ೨೪ ಗಂಟೆಗಳ ತುರ್ತು ವೈದ್ಯಕೀಯ ಸೇವೆ ನೀಡಲಿರುವರು ಎಂದರು.
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಂಸ್ಥೆ ಅಧ್ಯಕ್ಷ ರವೀಂದ್ರ, ಶಿಬಿರಕ್ಕೆ ನಮ್ಮ ಸಂಸ್ಥೆಯ ಸಂಪೂರ್ಣ ಸಹಕಾರವಿದೆ ಎಂದು, ಶಿಬಿರಕ್ಕೆ ಯಶಸ್ಸು ಕೋರಿದರು.ಖ್ಯಾತ ಮತ್ತು ನುರಿತ ವೈದ್ಯರಾದ ಡಾ.ಈರಪ್ಪ, ಡಾ.ಕಿಶೋರಿ, ಡಾ.ವಿಶಾಲ್, ಡಾ.ರವಿತೇಜ, ಡಾ.ಸುಚೇತಾ ಶೆಟ್ಟಿ, ಡಾ.ಜೆಶ್ವಿನ್ ಭಾಗವಹಿಸಿ ಅಧಿಕ ರಕ್ತದೊತ್ತಡ, ಸಕ್ಕರೆ ಅಂಶ ಮೌಲ್ಯಮಾಪನವನ್ನು ನಡೆಸಿಕೊಟ್ಟರು. ಕಿವಿ, ಮೂಗು, ಗಂಟಲು ಪರೀಕ್ಷೆ, ಮಧುಮೇಹ ಪರೀಕ್ಷೆ, ನರರೋಗ ದೌರ್ಬಲ್ಯ, ನಿದ್ರಾಹೀನತೆ ಸಮಸ್ಯೆಗಳಿಗೆ ಸಲಹೆ ಮತ್ತು ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಸೇವನೆಯ ಬಗ್ಗೆ ಸಲಹೆ ನೀಡಿದರು.
ಶಿಬಿರದ ಸಂಘಟಕ ಡಾ.ದೇವದಾಸ್ ರೈ ಸ್ವಾಗತಿಸಿ, ನಿರೂಪಿಸಿದರು. ಡಾ.ಜೂಲಿಯನ್ ಸಲ್ಡಾನ್ಹಾ ವಂದಿಸಿದರು.