‘ವೆನ್ಲಾಕ್‌ ಆಸ್ಪತ್ರೆಯಲ್ಲಿ ಬೆಡ್‌ ಲಭ್ಯತೆ ಬಗ್ಗೆ ಫಲಕ ಅವಳಡಿಸಿ’

KannadaprabhaNewsNetwork |  
Published : Oct 25, 2026, 03:00 AM IST
ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಎಸ್‌ಸಿ, ಎಸ್‌ಟಿ ಸಭೆ ನಡೆಯಿತು | Kannada Prabha

ಸಾರಾಂಶ

ಮಂಗಳೂರಿನಲ್ಲಿರುವ ವೆನ್ಲಾಕ್‌ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಐಸಿಯು ಸೇರಿದಂತೆ ಹಾಸಿಗೆಗಳ ಲಭ್ಯತೆ ಬಗ್ಗೆ ಸೂಚನಾ ಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಭೆಯಲ್ಲಿ ಆಗ್ರಹಿಸಲಾಗಿದೆ.

ಮಂಗಳೂರು : ಮಂಗಳೂರಿನಲ್ಲಿರುವ ವೆನ್ಲಾಕ್‌ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಐಸಿಯು ಸೇರಿದಂತೆ ಹಾಸಿಗೆಗಳ ಲಭ್ಯತೆ ಬಗ್ಗೆ ಸೂಚನಾ ಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಭೆಯಲ್ಲಿ ಆಗ್ರಹಿಸಲಾಗಿದೆ.ಶನಿವಾರ ನಡೆದ ಸಭೆಯಲ್ಲಿ ದಲಿತ ಮುಖಂಡರು ಈ ವಿಚಾರ ಪ್ರಸ್ತಾಪಿಸಿದರು. ಉಪ ಪೊಲೀಸ್‌ ಆಯುಕ್ತ ಸ್ಯಾಮ್‌ ವರ್ಗೀಸ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು.ವಿಶ್ವನಾಥ್‌ ಬಂಟ್ವಾಳ ಮಾತನಾಡಿ, ಬ್ರೇನ್‌ ಟ್ಯೂಮರ್‌ ಚಿಕಿತ್ಸೆಗಾಗಿ ವ್ಯಕ್ತಿಯೊಬ್ಬರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಕೆಲ ದಿನಗಳ ಹಿಂದೆ ವೆನ್ಲಾಕ್‌ ಆಸ್ಪತ್ರೆಗೆ ಕರೆದುಕೊಂಡ ಹೋದ ವೇಳೆ, ಅಲ್ಲಿ ಹಾಸಿಗೆ ಖಾಲಿ ಇಲ್ಲ ಎಂದು ಗಂಟೆಗಟ್ಟಲೆ ಕಾಯಿಸಿದ್ದಾರೆ. ಕೊನೆಗೆ ರೋಗಿ ಮನೆಯವರು ಒಂದು ದಿನಕ್ಕಾದರೂ ದಾಖಲಿಸಿ ಚಿಕಿತ್ಸೆ ಒದಗಿಸಿ ಎಂದಾಗ, ಅಲ್ಲಿದ್ದ ವೈದ್ಯರು ‘ಇದು ಲಾಡ್ಜ್‌ ಅಲ್ಲ, ಆ ರೀತಿ ದಾಖಲಿಸಿಕೊಳ್ಳಲು’ ಎಂಬ ಉಡಾಫೆಯ ಮಾತನಾಡಿದ್ದಾರೆ. ಬಳಿಕ ನನಗೆ ಮಾಹಿತಿ ತಿಳಿದು ನಾನು ಉಸ್ತುವಾರಿ ಸಚಿವರ ಆಪ್ತರ ಮೂಲಕ ವಿನಂತಿ ಮಾಡಿದ ಮೇರೆಗೆ ಆಸ್ಪತ್ರೆಯ ಅಧೀಕ್ಷಕರ ಮೂಲಕ ದಾಖಲಿಸಿಕೊಳ್ಳಲಾಯಿತು. ಸುಮಾರು ಐದು ಗಂಟೆಗಳ ಕಾಲ ರೋಗಿಯನ್ನು ಕಾಯಿಸಲಾಗಿದೆ ಎಂದು ದೂರಿದರು.

ವೆನ್ಲಾಕ್‌ನಲ್ಲಿ ನಿಜವಾಗಿಯೂ ಬೆಡ್‌ ಕೊರತೆ ಇದೆಯೇ, ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕೊಂಡೊಯ್ಯುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ದರ ಪಟ್ಟಿಪ್ರಕಟಿಸಲು ಸೂಚನೆ ನೀಡಿರುವಂತೆ ವೆನ್ಲಾಕ್‌ ಆಸ್ಪತ್ರೆಯಲ್ಲಿನ ಹಾಸಿಗೆಗಳ ಲಭ್ಯತೆಯ ಬಗ್ಗೆಯೂ ಸೂಚನಾ ಫಲಕ ಅಳವಡಿಸಬೇಕು ಎಂದು ಎಸ್‌.ಪಿ.ಆನಂದ ಆಗ್ರಹಿಸಿದರು.ವೆನ್ಲಾಕ್‌ನಲ್ಲಿ ಐಸಿಯು ಸೇರಿದಂತೆ ಹಾಸಿಗೆಗಳ ಲಭ್ಯತೆ ಬಗ್ಗೆ ಸೂಚನಾ ಫಲಕ ಅಳವಡಿಸಲು ಆಸ್ಪತ್ರೆಯ ಮುಖ್ಯಸ್ಥರಿಗೆ ಸಲಹೆ ನೀಡುವುದಾಗಿ ಡಿಸಿಪಿ ಸ್ಯಾಮ್‌ ವರ್ಗೀಸ್‌ ಭರವಸೆ ನೀಡಿದರು.

ಅಕ್ರಮ ವ್ಯಾಪಾರ ತೆರವುಗೊಳಿಸಿ:ಲೇಡಿಗೋಶನ್‌ ಆಸ್ಪತ್ರೆಯ ಎದುರು ಸುಮಾರು 20ರಷ್ಟುಗೂಡಂಗಡಿಗಳು ಫುಟ್‌ಪಾತ್‌ ಮತ್ತು ರಸ್ತೆಯನ್ನೇ ಬ್ಲಾಕ್‌ ಮಾಡಿ ವ್ಯಾಪಾರ ನಡೆಸುತ್ತಿದ್ದು, ಅದನ್ನು ತೆರವಿಗೆ ಆಗ್ರಹಿಸಲಾಯಿತು. ರಸ್ತೆ ಬ್ಲಾಕ್‌ ಮಾಡುವ ಗ್ಯಾರೇಜ್‌ ವಿರುದ್ಧ ಎಫ್‌ಐಆರ್‌ಗೆ ಸೂಚಿಸಲಾಯಿತು.

ಡಿಸಿಪಿ ರವಿಶಂಕರ್‌, ಡಿಸಿಆರ್‌ ವಿಭಾಗದ ಎಸ್ಪಿ ಸೈಮನ್‌ ಇದ್ದರು.

ಕಳೆದ 15 ವರ್ಷಗಳಿಂದ ಅಂಬೇಡ್ಕರ್‌ ವೃತ್ತ ನಿರ್ಮಾಣಕ್ಕಾಗಿ ಹೋರಾಟ ಮಾಡಲಾಗುತ್ತಿದೆ. ಆದರೆ ಸರ್ಕಾರ ಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ಚಿಂತನೆಯೇ ಇಲ್ಲ ಎಂದು ದಲಿತ ಮುಖಂಡ ಚಂದ್ರಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಪರಿಶೀಲನಾ ಸಮಿತಿ ರಚಿಸಲಾಗಿದ್ದು, ಸಮಿತಿ ಜಿಲ್ಲಾಧಿಕಾರಿಗೆ ವರದಿ ನೀಡಲಿದ್ದು, ಮುಂದಿನ ತಿಂಗಳೊಳಗೆ ವರದಿ ವಿಚಾರ ತಿಳಿಯಲಿದೆ ಎಂದು ಡಿಸಿಪಿ ಸೈಮನ್‌ ವರ್ಗೀಸ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಸಿ ಕ್ರೀಡೆಗಳ ಉತ್ತೇಜಿಸುವ ಕೆಲಸವಾಗಲಿ
ನೃತ್ಯ ಕಲೆಗಳು ನಾಡಿನ ಸಾಂಸ್ಕೃತಿಕ ಆಸ್ತಿ