ಮಂಗಳೂರು: ಬಹುನಿರೀಕ್ಷೆಯ ಸಂಪೂರ್ಣ ಹಾಸ್ಯಮಯ ಚಲನಚಿತ್ರ ‘ವಾದಿರಾಜ ವಾಲಗ ಮಂಡಳಿ’ಯ ಹಾಡುಗಳ ರೆಕಾರ್ಡಿಂಗ್ ಕೆಲಸ ಪೂರ್ಣಗೊಂಡಿದ್ದು, ಹಿನ್ನೆಲೆ ಸಂಗೀತದ ಕೆಲಸವೂ ಮುಕ್ತಾಯದ ಹಂತದಲ್ಲಿದೆ. ಪ್ರತಿಷ್ಠಿತ ಎಮ್.ಎನ್.ಆರ್. ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಡಾ.ಎಮ್.ಎನ್.ರಾಜೇಂದ್ರ ಕುಮಾರ್ ನಿರ್ಮಾಣದಲ್ಲಿ ಈ ಸಿನೆಮಾ ಕನ್ನಡ ಚಲನಚಿತ್ರರಂಗಕ್ಕೆ ಒಂದು ಅಪೂರ್ವ ಕೊಡುಗೆಯಾಗಬಲ್ಲುದು. ಈಗಾಗಲೇ ಚಿತ್ರತಂಡ ಚಿತ್ರೀಕರಣ ಪೂರ್ತಿಗೊಳಿಸಿದ್ದು, ಪ್ರಸಿದ್ಧ ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್ ಸಂಗೀತ ಸಂಯೋಜನೆಯಲ್ಲಿ ಆರು ಹಾಡುಗಳ ರೆಕಾರ್ಡಿಂಗ್ ಕೆಲಸದಲ್ಲಿ ನಿರತವಾಗಿದೆ. ಕಾಂತಾರ ಸಿನೆಮಾದಲ್ಲಿ ಸೂಪರ್ ಹಿಟ್ ಹಾಡುಗಳನ್ನು ಹಾಡಿದ ‘ವರಾಹರೂಪಂ’ ಖ್ಯಾತಿಯ ಸಾಯಿವಿಘ್ನೇಶ್ ಎರಡು ಹಾಡಿಗೆ ದನಿ ನೀಡಿದ್ದಾರೆ. ಕಾಂತಾರ ಚಾಪ್ಟರ್-೧ ಸಿನೆಮಾದ ‘ಬ್ರಹ್ಮಕಲಶ’ ಹಾಡಿನ ಖ್ಯಾತಿಯ ಕೆನಡಾ ಮೂಲದ ಆಭಿ ವಿ. ಮತ್ತೊಂದು ಹಾಡಿಗೆ ದನಿಯಾಗಿದ್ದಾರೆ.
ರಂಗಭೂಮಿ ಹಿನ್ನೆಲೆಯ ಶಶಿರಾಜ್ ಕಾವೂರು ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಚಂದ್ರಶೇಖರನ್ ಕೆಮರಾ ಕೈಚಳಕ ಈ ಸಿನೆಮಾದಲ್ಲಿ ಇದೆ. ಟೈಗರ್ ಶಿವು ಸಾಹಸ ದೃಶ್ಯಗಳೂ ಉತ್ತಮವಾಗಿ ಮೂಡಿಬಂದಿದೆ. ಸಿನೆಮಾ ಡಿಸೆಂಬರ್ ಮೊದಲ ವಾರದಲ್ಲಿ ತೆರೆಗೆ ಅಪ್ಪಳಿಸಲಿದೆ ಎಂದು ನಿರ್ಮಾಪಕ ಡಾ.ಎಮ್.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.