ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧ ಪೂರೈಕೆ ತುರ್ತಾಗಿ ಜಾರಿಯಾಗಲಿ: ಡಾ. ಗೋಪಾಲ ದಾಬಡೆ

KannadaprabhaNewsNetwork |  
Published : Jun 03, 2025, 12:57 AM IST
2ಎಚ್‌ವಿಆರ್2 | Kannada Prabha

ಸಾರಾಂಶ

ಉಚಿತ ಮತ್ತು ಗುಣಮಟ್ಟದ ಔಷಧಿಗಳನ್ನು ಎಲ್ಲ ಸರ್ಕಾರಿ ಆಸ್ಪತ್ರೆಗೆ ಒದಗಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದೇವೆ.

ಹಾವೇರಿ: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಮಾಡಿ ಆದೇಶಿಸಿರುವುದು ಸ್ವಾಗತಾರ್ಹ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಗಳ ಪೂರೈಕೆ ತುರ್ತಾಗಿ ಜಾರಿಯಾಗಬೇಕು. ಅದಕ್ಕಾಗಿ ತಮಿಳುನಾಡು ಮಾದರಿಯಲ್ಲಿ ಕೆಎಸ್‌ಎಂಎಸ್‌ಸಿಎಲ್‌ ಕಾರ್ಯನಿರ್ವಹಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಡ್ರಗ್ ಆ್ಯಕ್ಷನ್ ಫೋರಂನ ಅಧ್ಯಕ್ಷ ಡಾ. ಗೋಪಾಲ ದಾಬಡೆ ಆಗ್ರಹಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಒಂದು ಕಡೆ ಉಚಿತ ಔಷಧಿಗಳನ್ನು ನೀಡುವ ಘೋಷಣೆ ಮಾಡಿದರೂ, ಇನ್ನೊಂದು ಕಡೆ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳಲ್ಲಿ ಬಡ ರೋಗಿಗಳು ಹಣ ನೀಡಿ ಔಷಧಿ ಖರೀದಿಸಬೇಕಿದೆ. ಇದು ದ್ವಂದ್ವ ನೀತಿಯಾಗಿದೆ. ರಾಜ್ಯಾದ್ಯಂತ ಡ್ರಗ್ ಆ್ಯಕ್ಷನ್ ಫೋರಂ, ಸಾರ್ವತ್ರಿಕ ಆಂದೋಲನ ಮತ್ತು ನಾಗರಿಕ ಹಿತರಕ್ಷಣಾ ವೇದಿಕೆ ಜಂಟಿಯಾಗಿ ರಾಜ್ಯದ 15 ಜಿಲ್ಲೆಗಳಲ್ಲಿ ಆರೋಗ್ಯ ಹಕ್ಕು ಜಾಥಾ ನಡೆಸಿದ್ದೇವೆ. ಉಚಿತ ಮತ್ತು ಗುಣಮಟ್ಟದ ಔಷಧಿಗಳನ್ನು ಎಲ್ಲ ಸರ್ಕಾರಿ ಆಸ್ಪತ್ರೆಗೆ ಒದಗಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದೇವೆ ಎಂದರು.ತಮಿಳುನಾಡು ವೈದ್ಯಕೀಯ ಸೇವೆಗಳ ನಿಗಮ ತಮಿಳುನಾಡಿನ ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದು 1990ರಿಂದಲೂ ಕೆಲಸ ಮಾಡುತ್ತಿದ್ದು, ಅದೇ ರೀತಿ ರಾಜಸ್ಥಾನದಲ್ಲಿ ಕೂಡ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅದೇ ಉದ್ದೇಶದಿಂದ 2003ರಲ್ಲಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ಸ್ಥಾಪನೆ ಮಾಡಲಾಗಿದೆ. ಆದರೆ ಅದರ ನೈಜ ಉದ್ದೇಶ ಈಡೇರಿಲ್ಲ. ಇಂದಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ವಿತರಣೆ ಕೇವಲ ಘೊಷಣೆಯಾಗಿದೆ. ಕೆಲವೇ ಔಷಧಿಗಳನ್ನು ಮಾತ್ರ ಉಚಿತ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಜತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ನೀಡುವ ನಮ್ಮ ಸಂಘಟನೆಯ ವತಿಯಿಂದ ಕುರಿತು ಚರ್ಚೆ ಮಾಡಿದ್ದು, ಅದಕ್ಕೆ ಆರೋಗ್ಯ ಸಚಿವರು ಒಪ್ಪಿಗೆ ಸೂಚಿಸಿದ್ದರು. ಆದರೆ ಮೆಡಿಕಲ್ ಮಾಫಿಯಾ ಮತ್ತು ಸರ್ಕಾರದ ವಿವಿಧ ಹಂತಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಅಪವಿತ್ರ ಮೈತ್ರಿ ಅದಕ್ಕೆ ಇನ್ನೂ ಅವಕಾಶ ಮಾಡಿಕೊಡುತ್ತಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತುರ್ತು ಕ್ರಮಕ್ಕೆ ಮುಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿಗಳ ವಿತರಣೆಗೆ ಮುಂದಾಗಲಿ. ಇದರಿಂದ ಬಡವರ ಮೇಲೆ ಔಷಧಿಗಾಗಿ ಖರ್ಚಾಗುತ್ತಿರುವ ಆರ್ಥಿಕ ಹೊರೆ ಕಡಿಮೆ ಮಾಡಬಹುದು ಎಂದರು. ಡ್ರಗ್ ಆ್ಯಕ್ಷನ್ ಪೋರಂನ ಕಾರ್ಯದರ್ಶಿ ಡಾ. ಎಸ್.ಎಲ್. ಪವಾರ, ಖಜಾಂಚಿ ಅಮರನಾಥ ಭೂತೆ, ಸಂಯೋಜಕ ಕರಿಬಸಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ