ವ್ಯಸನದಿಂದ ವ್ಯಕ್ತಿಗಳು ಮುಕ್ತ, ಧರ್ಮಸ್ಥಳ ಸಂಸ್ಥೆಗೆ ಬೆಂಬಲವಾಗಿ ನಿಲ್ಲಿ: ಕೆ.ಸಿ.ನಾರಾಯಣಗೌಡ

KannadaprabhaNewsNetwork | Published : Nov 27, 2024 1:00 AM

ಸಾರಾಂಶ

ಒಂದು ಕುಟುಂಬದ ಸದಸ್ಯ ಕುಡಿತ ಚಟಕ್ಕೆ ಒಳಗಾಗಿದ್ದರೆ ಆತನನ್ನು ಕುಡಿತದಿಂದ ಮುಕ್ತಗೊಳಿಸಿದರೆ ಆ ಕುಟುಂಬ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಈ ಕಾರ್ಯದಲ್ಲಿಧರ್ಮಸ್ಥಳ ಸಂಸ್ಥೆ ಸಿಬ್ಬಂಧಿಗಳ ಅಪಾರ ಶ್ರಮವಿದೆ. ಪೂಜ್ಯ ಹೆಗ್ಗಡೆ ಯವರ ಆಶೀರ್ವಾದವಿದೆ. ಕುಡಿತ ಬಿಟ್ಟು ನವ ಜೀವನಕ್ಕೆ ಕಾಲಿಟ್ಟಿರುವವರು ಧೃಡ ಸಂಕಲ್ಪದೊಂದಿಗೆ ನಿಮ್ಮ ಕುಟುಂಬದ ಜೊತೆ ನೆಮ್ಮದಿ ಬದುಕು ನಡೆಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕುಡಿತ ಚಟದಿಂದ ವ್ಯಕ್ತಿಗಳನ್ನು ಮುಕ್ತಗೊಳಿಸಿ ಸಮಾಜದ ಮುಖ್ಯವಾಹಿನಿಗೆ ಕರೆ ತರಲು ಶ್ರಮಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಕಾರ್ಯಕ್ಕೆ ಪ್ರತಿಯೊಬ್ಬರು ಬೆಂಬಲವಾಗಿ ನಿಲ್ಲಬೇಕು ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ತಾಲೂಕು ಸಂಸ್ಥೆ ವತಿಯಿಂದ ನಡೆದ 1887ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಶಿಬಿರದಲ್ಲಿ 65 ಜನರು ವ್ಯಸನ ಮುಕ್ತರಾಗಿ ನವ ಜೀವನಕ್ಕೆ ಕಾಲಿಟ್ಟಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಒಂದು ಕುಟುಂಬದ ಸದಸ್ಯ ಕುಡಿತ ಚಟಕ್ಕೆ ಒಳಗಾಗಿದ್ದರೆ ಆತನನ್ನು ಕುಡಿತದಿಂದ ಮುಕ್ತಗೊಳಿಸಿದರೆ ಆ ಕುಟುಂಬ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಈ ಕಾರ್ಯದಲ್ಲಿಧರ್ಮಸ್ಥಳ ಸಂಸ್ಥೆ ಸಿಬ್ಬಂಧಿಗಳ ಅಪಾರ ಶ್ರಮವಿದೆ. ಪೂಜ್ಯ ಹೆಗ್ಗಡೆ ಯವರ ಆಶೀರ್ವಾದವಿದೆ. ಕುಡಿತ ಬಿಟ್ಟು ನವ ಜೀವನಕ್ಕೆ ಕಾಲಿಟ್ಟಿರುವವರು ಧೃಡ ಸಂಕಲ್ಪದೊಂದಿಗೆ ನಿಮ್ಮ ಕುಟುಂಬದ ಜೊತೆ ನೆಮ್ಮದಿ ಬದುಕು ನಡೆಸಬೇಕು ಎಂದು ಸಲಹೆ ನೀಡಿದರು.

ಯೋಜನೆ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಮಾತನಾಡಿ, ಶಿಬಿರದ ಪ್ರಯೋಜನ ಕ್ಷಣಿಕವಾಗದೆ ನಿರಂತರವಾಗಿರಬೇಕು. ನಿಮ್ಮ ದುಡಿಮೆಯ ಫಲ ನಿಮ್ಮ ಮತ್ತು ನಿಮ್ಮ ಕುಟುಂಬಕ್ಕೆ ನೇರವಾಗಿ ಸಿಗಬೇಕು ಅದು ಹೆಂಡದ ಅಂಗಡಿಗೆ ಹೋಗಬಾರದು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಆರ್.ಟಿ.ಓ ಮಲ್ಲಿಕಾರ್ಜುನ ಮಾತನಾಡಿ, ಶಿಬಿರದಲ್ಲಿದ್ದ ಪ್ರತಿಯೊಬ್ಬರು ಇಲ್ಲಿನ

ನಿಯಮಗಳನ್ನು ಮುಂದೆಯೂ ಪಾಲಿಸುವ ಮೂಲಕ ಕುಟುಂಬದ ಕಣ್ಣಾಗುವಂತೆ ಮನವಿ ಮಾಡಿದರು.

ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷ ಬಿ.ಆರ್.ಶ್ಯಾಮ್ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಚನ್ನರಾಯಪಟ್ಟಣ ಜಿಲ್ಲಾ ಯೋಜನಾ ನಿರ್ದೇಶಕ ಕೇಶವ ದೇವಾಂಗ, ತಾಲೂಕು ಯೋಜನಾಧಿಕಾರಿ ತಿಲಕ್ ರಾಜ್, ಜಿಲ್ಲಾ ಜನಜಾಗೃತಿ ಅಧ್ಯಕ್ಷ ಜಯರಾಮ್ ತೋಟಿ ಸದಸ್ಯರಾದ ಪ್ರಸನ್ನ, ಪದ್ಮಾ ಚೋಕನಹಳ್ಳಿ ಪ್ರಕಾಶ್, ಅರುಣ್ ಕುಮಾರ್, ಮೇಲ್ವಿಚಾರಕರಾದ ಪ್ರಕಾಶ್ ಆಚಾರ್ಯ, ಶಿಬಿರಾಧಿಕಾರಿ ಕುಮಾರ್, ಜನಜಾಗೃತಿ ವಿಭಾಗದ ಯೋಜನಾಧಿಕಾರಿ ಮಾಧವನಾಯಕ್, ಹಿರಿಯ ಪತ್ರಕರ್ತ ಕೆ.ಆರ್.ನೀಲಕಂಠ, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Share this article