ಬಸವರಾಜ ಹಿರೇಮಠ
ಮಳೆಗಾಲದ ಹಿನ್ನೆಲೆಯಲ್ಲಿ ವಾಹನಗಳು ಸಂಚರಿಸಿ ರಸ್ತೆಗಳು ಬೆಚ್ಚಗೆ, ಹಿತವಾಗಿರುವ ಕಾರಣ ರಸ್ತೆ ಬದಿಗೆ ಸಾಕಷ್ಟು ಜಾಗವಿದ್ದರೂ ರಸ್ತೆಯಲ್ಲಿಯೇ ಬೀದಿ ದನಗಳು ಮಲಗಿ ವಿಶ್ರಾಂತಿ ಪಡೆಯುತ್ತಿವೆ. ಬೀದಿ ದನಗಳನ್ನು ಹಿಡಿದು ಗೋಶಾಲೆಗೆ ಕಳುಹಿಸಲಾಗಿದೆ ಎಂದೆಲ್ಲಾ ಜಿಲ್ಲಾಡಳಿತ ಹೇಳಿದರೂ, ನಗರದ ಪ್ರಮುಖ ಸ್ಥಳಗಳಲ್ಲಿ ದನಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ವಾಹನ ಸವಾರರು ಏನೆಲ್ಲ ಶಬ್ದ ಮಾಡಿದರೂ ಅಲುಗಾಡದೇ ಬಾಯಾಡಿಸುತ್ತಾ ದನಕರುಗಳು ತಮ್ಮ ಲೋಕದಲ್ಲಿರುತ್ತವೆ.
ಎಲ್ಲೆಲ್ಲಿ ದನಗಳ ವಿಶ್ರಾಂತಿ: ಪ್ರಮುಖವಾಗಿ ಸಾಧನಕೇರಿಯಿಂದ ಕೆಲಗೇರಿ ರಸ್ತೆ, ಮಾಳಮಡ್ಡಿ ಸುಶ್ರುತ್ ನರ್ಸಿಂಗ್ ಹೋಂ ಬಳಿ, ವನವಾಸಿ ರಾಮ ಮಂದಿರ, ಚಿರಾಯು ಆಸ್ಪತ್ರೆ ಹಾಗೂ ಇತರೆ ಸ್ಥಳಗಳಲ್ಲಿ ದನಕರುಗಳು ವಾಹನಗಳಿಗೆ ವೇಗ ನಿಯಂತ್ರಕಗಳಾಗಿ ಕಾರ್ಯನಿರ್ವಹಿಸುತ್ತಿವೆ. ವಿವೇಕಾನಂದ ವೃತ್ತದ ಬಳಿಯ ಸುಭಾಸ್ ರಸ್ತೆ, ಗಾಂಧಿ ಚೌಕ್, ಕೆಸಿಸಿ ಬ್ಯಾಂಕ್ ವೃತ್ತ ಮತ್ತು ಇತರ ಪ್ರಮುಖ ವೃತ್ತಗಳಲ್ಲೂ ಬೀದಿದನಗಳು ನಿತ್ಯ ಹಾಜರಿ ಹಾಕುತ್ತವೆ. ಇವುಗಳಿಗೆ ಮಾಲೀಕರಿದ್ದು ಎಚ್ಚರಿಕೆ ನೀಡಿದರೂ ಯಾವ ಪ್ರಯೋಜನವಾಗಿಲ್ಲ.ಅಪಘಾತ ಸಂಭವ: ರೈಲು ಹಿಡಿಯಲು ರೈಲ್ವೆ ನಿಲ್ದಾಣಕ್ಕೆ ಧಾವಿಸುವವರು, ಬಸ್ ನಿಲ್ದಾಣಕ್ಕೆ ಹೋಗುವರು, ಅವಸರದಲ್ಲಿ ನೌಕರಿಗೆ ಹೋಗುವವರು ರಸ್ತೆಯಲ್ಲಿ ಬೀದಿ ದನಗಳ ಉಪಟಳದಿಂದ ಸಾಕಷ್ಟು ತೊಂದರೆ ಎದುರಿಸಿದ್ದಾರೆ. 2024ರ ಅಕ್ಟೋಬರ್ 20 ರಂದು ಸಂಪಿಗೆನಗರದ ಹಂಚಿನಮಣಿ ಕುಟುಂಬದ ಐವರು ರೈಲು ಹತ್ತಲು ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಬೆಳಗಿನ ಜಾವ 4.40 ರ ಸುಮಾರಿಗೆ ಅತಿ ವೇಗವಾಗಿ ಬಂದ ಟ್ರಕ್ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಆರು ವರ್ಷದ ಬಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ರಸ್ತೆ ಮಧ್ಯದಲ್ಲಿ ಕುಳಿತಿದ್ದ ಬಿಡಾಡಿ ದನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದ ಟ್ರಕ್ ಚಾಲಕ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದ್ದು ಇನ್ನೂ ಜನರ ಮನದಿಂದ ಮಾಸಿಲ್ಲ. ಇನ್ನು, ರಸ್ತೆಯಲ್ಲಿ ಮಲಗಿರುವ ದನಕರುಗಳಿಂದ ಬೈಕ್‌ನಿಂದ ಹತ್ತಾರು ಜನರ ಬಿದ್ದು ಗಾಯಗೊಂಡಿದ್ದು ಗೊತ್ತಿರುವ ಸಂಗತಿ. ಬರೀ ಮನುಷ್ಯರಿಗೆ ಮಾತ್ರವಲ್ಲದೇ ಅಪಘಾತದಿಂದ ದನಕರುಗಳಿಗೂ ಗಾಯಗಳಾಗಿರುವ ಉದಾಹರಣೆಗಳಿವೆ.
ನಾಯಿ ಕಾಟವೂ ಇದೆ: ಧಾರವಾಡ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೊಂಡ ನಂತರ ಫ್ಲಾಟ್‌ಫಾರ್ಮನಲ್ಲಿ ನಾಯಿಗಳ ಕಾಟ ತೀವ್ರವಾಗಿದೆ. ನಿಲ್ದಾಣದಲ್ಲಿ ಜನರು ಊಟ ಮಾಡಿ ಅವುಗಳಿಗೆ ಊಟ ಹಾಕುತ್ತಿದ್ದು, ನಾಯಿಗಳ ಗುಂಪು ಅಲ್ಲಿಯೇ ಆಶ್ರಯ ಪಡೆಯುತ್ತಿದ್ದು, ಪ್ರಯಾಣಿಕರನ್ನು ಭಯ ಪಡಿಸುತ್ತಿವೆ. ಪೊಲೀಸ್ ಮತ್ತು ಮಹಾನಗರ ಪಾಲಿಕೆ ಸಮನ್ವಯದ ಕೊರತೆಯಿಂದಾಗಿ ಬಿಡಾಡಿ ದನ ಹಾಗೂ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಹಾನಗರ ಪಾಲಿಕೆ ಈ ಸಮಸ್ಯೆಗೆ ಕಣ್ಣು ಮುಚ್ಚಿಕೊಂಡಿದೆ ಮತ್ತು ದನಗಳ ಮಾಲೀಕರಿಗೆ ಎಚ್ಚರಿಕೆ ನೀಡುವಲ್ಲಿ ವಿಫಲವಾಗಿದ್ದು ಸ್ಪಷ್ಟ ಎಂದು ಮಾಳಮಡ್ಡಿ ನಿವಾಸಿ ಗಂಗಾಧರ ಕುಲಕರ್ಣಿ ''''ಕನ್ನಡಪ್ರಭ''''ದ ಎದುರು ಅಳಲು ತೋಡಿಕೊಂಡರು.