ಸಂಡೂರು: ಜೆಎಸ್‌ಡಬ್ಲು ಫೌಂಡೇಶನ್ ವತಿಯಿಂದ ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿರುವ ಓಪಿಜೆ ಕೇಂದ್ರದಲ್ಲಿ ಗ್ರಾಮೀಣ ಯುವಕ-ಯುವತಿಯರ ಸಬಲೀಕರಣಕ್ಕಾಗಿ ಹಮ್ಮಿಕೊಂಡಿರುವ ಉದ್ಯಮ ಸಂಬಂಧಿತ ತರಬೇತಿ ಕಾರ್ಯಕ್ರಮಕ್ಕೆ ಭಾನುವಾರ ಜೆಎಸ್‌ಡಬ್ಲು ಫೌಂಡೇಶನ್ ಅಧ್ಯಕ್ಷೆ ಸಂಗೀತಾ ಜಿಂದಾಲ್ ಚಾಲನೆ ನೀಡಿದರು.
ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಎಸ್‌ಡಬ್ಲು ಫೌಂಡೇಶನ್ ಅಧ್ಯಕ್ಷೆ ಸಂಗೀತಾ ಜಿಂದಾಲ್, ಗ್ರಾಮೀಣ ಯುವಕ-ಯುವತಿಯರಿಗೆ ಉದ್ಯಮ ಸಂಬಂಧಿತ ಕೌಶಲ್ಯಗಳಾದ ಹೊಲಿಗೆ ತರಬೇತಿ, ಮೊಬೈಲ್ ರಿಪೇರಿ ಹಾಗೂ ವಾಹನ ಚಾಲನೆ ತರಬೇತಿ ನೀಡಲಾಗುವುದು. ಯುವಕ ಯುವತಿಯರು ಇಂತಹ ಕೌಶಲ್ಯಗಳನ್ನು ಕಲಿತು ಉದ್ಯೋಗ ಕಂಡುಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.ಜೆಎಸ್‌ಡಬ್ಲು ಫೌಂಡೇಶನ್ ಸಿಇಒ ಪವಿತ್ರಕುಮಾರ್ ಮಾತನಾಡಿ, ಈ ಕೌಶಲ್ಯ ತರಬೇತಿಗಳು ಆಧುನಿಕತೆಯಿಂದ ಕೂಡಿದ್ದು, ನುರಿತ ತಜ್ಞರಿಂದ ತರಬೇತಿ ನೀಡಲಾಗುವುದು. ತರಬೇತಿಯ ನಂತರ ಪ್ರಮಾಣ ಪತ್ರಗಳನ್ನು ನೀಡಲಾಗುವುದಲ್ಲದೆ, ಉದ್ಯೋಗವನ್ನು ಕಲ್ಪಿಸುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಜೆಎಸ್‌ಡಬ್ಲು ಫೌಂಡೇಶನ್ ಸಿಎಸ್‌ಆರ್ ಯೋಜನೆಯ ದಕ್ಷಿಣ ಭಾರತದ ಮುಖ್ಯಸ್ಥರಾದ ಪೆದ್ದಣ್ಣ ಬೀಡಲಾ ತರಬೇತಿ ಕುರಿತು ತಿಳಿಸಿ, ಮೊಬೈಲ್ ರಿಪೇರಿ ತರಬೇತಿಯು 45 ದಿನ, ವಾಹನ ಚಾಲನಾ ತರಬೇತಿ 2 ತಿಂಗಳು ಹಾಗೂ ಹೊಲಿಗೆ ತರಬೇತಿ 3 ತಿಂಗಳ ಅವಧಿಯದಾಗಿದ್ದು, ಆಸಕ್ತ ಯುವಕ ಯುವತಿಯರು ನೇರವಾಗಿ ಓಪಿಜೆ ಕೇಂದ್ರಕ್ಕೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬಹುದು. ಈಗಾಗಲೆ ತರಬೇತಿ ಆರಂಭಿಸಲಾಗಿದೆ. ಈ ತರಬೇತಿ ಸಂಪೂರ್ಣ ಉಚಿತವಾಗಿದ್ದು, ತರಬೇತಿಯ ನಂತರ ಸರ್ಟಿಫಿಕೇಟ್, ವಾಹನ ಚಾಲನಾ ಲೈಸನ್ಸ್ ಒದಗಿಸಿಕೊಡಲಾಗುವುದು ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಹೆಡ್ ಹೆಲ್ಡ್ ಹೈ ಸಂಸ್ಥೆಯ ಪ್ರತಿನಿಧಿ ಮುರಳಿರಾವ್, ಡಿಬಿ ಸ್ಕಿಲ್ಸ್ ಸಂಸ್ಥೆಯ ಗೋಪಾಲ್ ಮಣಿ, ಜೆಎಸ್‌ಡಬ್ಲು ಹಿರಿಯ ನಾಯಕತ್ವ ತಂಡದ ಮಯೂರೇಶ್ ಬಾಪಟ್, ಕಾರ್ತಿಕೇಯ ಮಿಶ್ರಾ, ಸುನಿಲ್ ರಾಲ್ಫ್, ಚಂದ್ರನ್, ಮಹೇಶ್ ಶೆಟ್ಟಿ, ಶ್ರೇಷ್ಠ, ಸುರೇಶ ಮೇಟಿ ಮತ್ತು 150ಕ್ಕೂ ಹೆಚ್ಚು ಅಧಿಕ ಅಭ್ಯಾರ್ಥಿಗಳು ಹಾಗೂ ಸಿಎಸ್‌ಆರ್ ಸಿಬ್ಬಂದಿ ಉಪಸ್ಥಿತರಿದ್ದರು.
ಜೆಎಸ್‌ಡಬ್ಲು ಫೌಂಡೇಶನ್ ಅಧ್ಯಕ್ಷೆ ಸಂಗೀತಾ ಜಿಂದಾಲ್ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿನ ಓಪಿಜೆ ಕೇಂದ್ರದಲ್ಲಿ ಗ್ರಾಮೀಣ ಯುವಕ-ಯುವತಿಯರಿಗೆ ಹಮ್ಮಿಕೊಂಡಿರುವ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.