18 ರಿಂದ ಟೆಕ್‌ ಸಮ್ಮಿಟ್‌ : ಲೋಗೋ ಬಿಡುಗಡೆ

KannadaprabhaNewsNetwork |  
Published : Nov 04, 2025, 12:30 AM IST
Priynak Kharge

ಸಾರಾಂಶ

 2025ರ ಬೆಂಗಳೂರು ಟೆಕ್‌ ಸಮ್ಮಿಟ್‌ (ಬಿಟಿಎಸ್‌) ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಕರ್ನಾಟಕವನ್ನು ಭಾರತದ ಡೀಪ್ ಟೆಕ್ ರಾಜಧಾನಿಯಾಗಿಸುವ ಗುರಿಯೊಂದಿಗೆ ಮುಂದಿನ ಹತ್ತು ವರ್ಷಗಳಲ್ಲಿ ಈ ಕ್ಷೇತ್ರಕ್ಕೆ ಶಕ್ತಿ ತುಂಬಲು ₹600 ಕೋಟಿ ಹೂಡಿಕೆಯ ಬದ್ಧತೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ.

 ಬೆಂಗಳೂರು :  ಬಹುನಿರೀಕ್ಷಿತ 2025ರ ಬೆಂಗಳೂರು ಟೆಕ್‌ ಸಮ್ಮಿಟ್‌ (ಬಿಟಿಎಸ್‌) ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಕರ್ನಾಟಕವನ್ನು ಭಾರತದ ಡೀಪ್ ಟೆಕ್ ರಾಜಧಾನಿಯಾಗಿಸುವ ಗುರಿಯೊಂದಿಗೆ ಮುಂದಿನ ಹತ್ತು ವರ್ಷಗಳಲ್ಲಿ ಈ ಕ್ಷೇತ್ರಕ್ಕೆ ಶಕ್ತಿ ತುಂಬಲು ₹600 ಕೋಟಿ ಹೂಡಿಕೆಯ ಬದ್ಧತೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ.

ವಿಧಾನಸೌಧದಲ್ಲಿ ಸೋಮವಾರ ಬಿಟಿಎಸ್‌ ಲೋಗೋ ಬಿಡಗುಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ನಗರದ ಹೊರವಲಯದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ನ.18ರಿಂದ 20ರವರೆಗೆ ಬೆಂಗಳೂರು ಟೆಕ್‌ ಸಮ್ಮಿಟ್‌ ನಡೆಯಲಿದೆ. ಈ ಸಮಯದಲ್ಲಿ ಪ್ರಸ್ತುತ ದೇಶದ ಐಟಿ-ಬಿಟಿ ರಾಜಧಾನಿ ಆಗಿರುವ ಕರ್ನಾಟಕವನ್ನು ಭಾರತದ ಡೀಪ್ ಟೆಕ್ ರಾಜಧಾನಿಯನ್ನಾಗಿಸುವ ಗುರಿ ಸರ್ಕಾರದ್ದು. ಇದಕ್ಕಾಗಿ ಮುಂದಿನ ದಶಕದಲ್ಲಿ ಡೀಪ್ ಟೆಕ್ ಕ್ಷೇತ್ರದ ಬೆಳವಣಿಗೆಗೆ ಶಕ್ತಿ ತುಂಬಲು ₹600 ಕೋಟಿ ಹೂಡಿಕೆಗೆ ಸರ್ಕಾರ ಯೋಜಿಸಿದೆ. ಜತೆಗೆ ಡೀಪ್ ಟೆಕ್ ಮತ್ತು ಎಐ ಸ್ಟಾರ್ಟ್‌ಅಪ್‌ಗಳಿಗೆ ಮೀಸಲಾಗಿ ₹1,000 ಕೋಟಿವರೆಗಿನ ಜಂಟಿ ನಿಧಿ ರಚಿಸಲು ವಿಚಾರವಾಗಿ ಪ್ರಮುಖ ಬಂಡವಾಳ ಸಂಸ್ಥೆಗಳೊಂದಿಗೆ ಚರ್ಚೆ ನಡೆದಿದೆ ಎಂದು ತಿಳಿಸಿದರು.

ಎಐ ಮತ್ತು ಫ್ರಂಟಿಯರ್‌ ತಂತ್ರಜ್ಞಾನಗಳ ಮೇಲೆ ವಿಶೇಷ ಗಮನ

₹600 ಕೋಟಿ ಹೂಡಿಕೆ ಪೈಕಿ ಎಐ ಮತ್ತು ಫ್ರಂಟಿಯರ್‌ ತಂತ್ರಜ್ಞಾನಗಳ ಮೇಲೆ ವಿಶೇಷ ಗಮನ ಹರಿಸಿ ಡೀಪ್‌ಟೆಕ್ ಎಲಿವೇಟ್ ಫಂಡ್‌ಗಾಗಿ ₹150 ಕೋಟಿ, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿಯಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಎಲಿವೇಟ್ ಬಿಯಾಂಡ್ ಬೆಂಗಳೂರು ನಿಧಿ ಅಡಿ ₹80 ಕೋಟಿ, ಡೀಪ್‌ಟೆಕ್ ಮತ್ತು ಎಐ ಸ್ಟಾರ್ಟ್‌ಅಪ್‌ಗಳಲ್ಲಿ ಈಕ್ವಿಟಿ ಆಧಾರಿತವಾಗಿ ₹50 ಲಕ್ಷದಿಂದ ₹2 ಕೋಟಿವರೆಗೆ ಹೂಡಿಕೆಗಳಿಗಾಗಿ ಕಿಟ್‌ವಿನ್‌ (ಕೆಐಟಿವಿಐಎನ್‌) ನಿಧಿ ಮೂಲಕ ₹75 ಕೋಟಿ, ಐಐಟಿ ಮತ್ತು ಐಐಐಟಿ ಧಾರವಾಡ ಮತ್ತು ಕಲಬುರಗಿಯಲ್ಲಿ ಹೊಸ ಇನ್‌ಕ್ಯುಬೇಟರ್‌ಗಳು ಮತ್ತು ಆಕ್ಸಿಲರೇಟರ್‌ಗಳಿಗೆ 48 ಕೋಟಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಪಾರ ಇನ್‌ಕ್ಯುಬೇಟರ್‌ಗಳಿಗೆ ₹110 ಕೋಟಿ ಬಳಕೆ ಮಾಡಲಾಗುವುದು. ಈ ಸಂಬಂಧ ಈಗಾಗಲೇ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದ 11 ಸಂಸ್ಥೆಗಳಲ್ಲಿ ಆರಂಭಿಕ ನಾವೀನ್ಯತೆ ಮತ್ತು ಉದ್ಯಮಶೀಲತೆ ಪೋಷಿಸಲಾಗುವುದು ಎಂದರು.

ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಕಂಪನಿಗಳು ಭಾಗಿ

ಬೆಂಗಳೂರು ಟೆಕ್‌ ಸಮ್ಮಿಟ್‌ ಹಾಲಿ ನವೋದ್ಯಮಗಳಿಗೆ ಮಾತ್ರವಲ್ಲದೆ, ಭವಿಷ್ಯದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಲು ಆವಿಷ್ಕಾರಗಳಲ್ಲಿ ತೊಡಗಿರುವವರಿಗೂ ವೇದಿಕೆ ಕಲ್ಪಿಸುವ ಮಹತ್ವಾಕಾಂಕ್ಷಿ ಆವೃತ್ತಿಯಾಗಿದೆ. ಈ ನಿಟ್ಟಿನಲ್ಲಿ ‘ಫ್ಯೂಚರ್‌ ಮೇಕರ್ಸ್‌ ಕಾಂಕ್ಲೇವ್‌’ ಎಂಬ ಉಪಕ್ರಮದಲ್ಲಿ ಈ ಬಾರಿಯ ಟೆಕ್‌ ಸಮಾವೇಶ ನಡೆಸಲಾಗುತ್ತಿದೆ. ಕರ್ನಾಟಕ ಮಾತ್ರವಲ್ಲದೆ ಇಡೀ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದ 10 ಸಾವಿರ ನವೋದ್ಯಮಗಳು ಭಾಗವಹಿಸಲಿವೆ. ಜಾಗತಿಕ ಭಾಷಣಕಾರರು, ಉದ್ಯಮಿಗಳು ಮತ್ತು ಪ್ರಮುಖ ಬಂಡವಾಳಶಾಹಿಗಳು ತಂತ್ರಜ್ಞಾನ, ನೀತಿ ಮತ್ತು ನಾವೀನ್ಯತೆ ಕುರಿತು ಮಾತುಕತೆ ನಡೆಸಲಿದ್ದಾರೆ. ಮೊದಲ ಬಾರಿಗೆ ಅಂತರ್ ರಾಷ್ಟ್ರೀಯ ಭಾಗವಹಿಸುವಿಕೆ ಒಳಗೊಂಡಿದೆ. ಜಾಗತಿಕ ಸ್ಟಾರ್ಟ್‌ಅಪ್‌ಗಳು ಭಾರತದಲ್ಲಿ ತಮ್ಮ ನಾವೀನ್ಯತೆಗಳನ್ನು ಪ್ರದರ್ಶಿಸುತ್ತವೆ. ಭಾರತೀಯ ಸ್ಟಾರ್ಟ್‌ಅಪ್‌ಗಳು ಜಾಗತಿಕ ಮಾರುಕಟ್ಟೆಗಳಿಗೆ ತಮ್ಮ ತಂತ್ರಜ್ಞಾನಗಳನ್ನು ಪ್ರಸ್ತುತಪಡಿಸುತ್ತವೆ. ರಾಜ್ಯದ ಎಲ್ಲ ವಲಯಗಳಲ್ಲಿ ನವೋದ್ಯಮಗಳಿಗೆ ಪ್ರೋತ್ಸಾಹ ನಿಡುವುದು ಇದರ ಉದ್ದೇಶ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹50 ಸಾವಿರ!
ನೀರಿನ ಬಿಲ್‌ ಬಾಕಿದಾರರಿಗೆ ಶುಭ ಸುದ್ದಿ : ಬಡ್ಡಿ, ದಂಡ ಪೂರ್ಣ ಮನ್ನಾ।