- ಯುವಜನರಿಗಾಗಿ ನಾಯಕತ್ವ- ಸಾಮಾಜಿಕ ನ್ಯಾಯ ಕಾರ್ಯಾಗಾರ
ದಾವಣಗೆರೆ: ಸಮಾಜದಲ್ಲಿ ಸಂಪನ್ಮೂಲಗಳು, ಅಧಿಕಾರ, ಶಿಕ್ಷಣ, ಉದ್ಯೋಗ ಮತ್ತು ಮೂಲಭೂತ ಅವಕಾಶಗಳು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಆಗ ಮಾತ್ರ ನಾವು ಪಡೆದ ಸ್ವಾತಂತ್ರ್ಯ ಯಶಸ್ವಿಯಾಗಲು ಸಾಧ್ಯ ಎಂದು ಹಿರಿಯ ವಕೀಲರು, ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಆಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಅಭಿಪ್ರಾಯಪಟ್ಟರು.
ನಗರದ ಕೊಂಡಜ್ಜಿ ರಸ್ತೆಯಲ್ಲಿರುವ ಡಾನ್‌ಬೋಸ್ಕೋ ಶಾಲೆಯಲ್ಲಿ ಭಾನುವಾರ ಆಕ್ಷನ್ ಇನಿಟಿಯೇವಿಟಿ ಫಾರ್ ಡೆವಲಪ್‌ಮೆಂಟ್ ಹಾಗೂ ಟೆರೆಡೇಸ್ ಹೋಮ್ ಜರ್ಮನಿ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಯುವಜನರಿಗಾಗಿ ನಾಯಕತ್ವ ಮತ್ತು ಸಾಮಾಜಿಕ ನ್ಯಾಯ ಕುರಿತ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಭಾರತದ ಸಂವಿಧಾನವು ಸಾಮಾಜಿಕ ನ್ಯಾಯದ ಮುಖ್ಯ ಆಧಾರಸ್ತಂಭವಾಗಿದೆ. ಇದು ಸಮಾನತೆಯ ಹಕ್ಕು ಮತ್ತು ಕಲ್ಯಾಣ ರಾಜ್ಯದ ಪರಿಕಲ್ಪನೆಯ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುತ್ತದೆ. ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಜಾತಿ, ಧರ್ಮ, ಲಿಂಗ ಹಾಗೂ ವರ್ಗದ ಅಸಮಾನತೆಗಳನ್ನು ಮೀರಿ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಪಡೆದುಕೊಳ್ಳಬೇಕು. ಜಾತಿ ಮತ್ತು ಲಿಂಗ ತಾರತಮ್ಯ, ನಿರುದ್ಯೋಗ ಮತ್ತು ಆರ್ಥಿಕ ಅಸಮಾನತೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಅಸಮಾನ ಲಭ್ಯತೆ, ಸಾಮಾಜಿಕ ಬಹಿಷ್ಕಾರ ಇವು ದೇಶದ ಇಂದಿನ ಸವಾಲುಗಳಾಗಿವೆ ಎಂದು ಹೇಳಿದರು.
- - -