ಬಂಟ್ವಾಳದ ಈ ಶಾಲೇಲಿ ಮಕ್ಕಳ ಸುರಕ್ಷತೆಗೆ ಆರ್‌ಎಫ್‌ಐಡಿ ಟ್ಯಾಗ್‌!

KannadaprabhaNewsNetwork |  
Published : Jul 07, 2026, 02:00 AM IST
School

ಸಾರಾಂಶ

ಬಂಟ್ವಾಳ ತಾಲೂಕು ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ರಾಜ್ಯದಲ್ಲೇ ಮೊದಲ ಬಾರಿಗೆ ಸಮಗ್ರ ಆರ್‌ಎಫ್‌ಐಡಿ (ರೇಡಿಯೋ ಫ್ರೀಕ್ವನ್ಸಿ ಐಡೆಂಟಿಫಿಕೇಶನ್) ಆಧಾರಿತ ಡಿಜಿಟಲ್ ವಿದ್ಯಾರ್ಥಿ ಸುರಕ್ಷತಾ ವ್ಯವಸ್ಥೆ ಜಾರಿಗೊಳಿಸಿದೆ.

ಮೌನೇಶ್ ವಿಶ್ವಕರ್ಮ

  ಬಂಟ್ವಾಳ :  ಬಂಟ್ವಾಳ ತಾಲೂಕು ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ರಾಜ್ಯದಲ್ಲೇ ಮೊದಲ ಬಾರಿಗೆ ಸಮಗ್ರ ಆರ್‌ಎಫ್‌ಐಡಿ (ರೇಡಿಯೋ ಫ್ರೀಕ್ವನ್ಸಿ ಐಡೆಂಟಿಫಿಕೇಶನ್) ಆಧಾರಿತ ಡಿಜಿಟಲ್ ವಿದ್ಯಾರ್ಥಿ ಸುರಕ್ಷತಾ ವ್ಯವಸ್ಥೆ ಜಾರಿಗೊಳಿಸಿದೆ. ಶಾಲೆಯ ಪ್ರತಿ ವಿದ್ಯಾರ್ಥಿಗೂ ಡಿಜಿಟಲ್ ಆರ್‌ಎಫ್ಐಡಿ ಗುರುತು ಚೀಟಿ ನೀಡಲಾಗಿದ್ದು, ವಿದ್ಯಾರ್ಥಿಗಳು ಶಾಲಾ ಪ್ರವೇಶದ್ವಾರದಲ್ಲಿರುವ ಆರ್‌ಎಫ್‌ಐಡಿ ಟರ್ನ್‌ಸ್ಟೈಲ್ ಗೇಟ್ ಮೂಲಕ ಒಳಪ್ರವೇಶಿಸುವಾಗ ಹಾಗೂ ಸಂಜೆ ಹೊರಬರುವಾಗ ತಮ್ಮ ಕಾರ್ಡ್ ಸ್ಕ್ಯಾನ್ ಮಾಡಬೇಕಾಗುತ್ತದೆ. ಸ್ಕ್ಯಾನ್ ಆದ ಕ್ಷಣದಲ್ಲೇ ಸಂಬಂಧಿಸಿದ ಪೋಷಕರ ಮೊಬೈಲ್‌ಗೆ ಎಸ್‌ಎಂಎಸ್ ಮತ್ತು ನೋಟಿಫಿಕೇಶನ್ ತಲುಪುತ್ತದೆ. ಇದರಿಂದ ತಮ್ಮ ಮಗು ಸುರಕ್ಷಿತವಾಗಿ ಶಾಲೆಗೆ ತಲುಪಿರುವುದು ಹಾಗೂ ನಿರ್ಗಮಿಸಿರುವುದು ಕ್ಷಣಾರ್ಧದಲ್ಲೇ ತಿಳಿಯುತ್ತದೆ.

 ಬಸ್ಸಿನಲ್ಲಿಯೂ ಡಿಜಿಟಲ್ ವ್ಯವಸ್ಥೆ:

ಶಾಲಾ ಸಾರಿಗೆ ವ್ಯವಸ್ಥೆಯನ್ನೂ ಸಂಪೂರ್ಣ ಡಿಜಿಟಲ್ ಮಾದರಿಗೆ ಪರಿವರ್ತಿಸಲಾಗಿದೆ. ವಿದ್ಯಾರ್ಥಿಗಳು ಶಾಲಾ ಬಸ್ ಏರುವಾಗ ಮತ್ತು ಇಳಿಯುವಾಗ ಬಸ್‌ನಲ್ಲಿರುವ ಆರ್‌ಎಫ್‌ಐಡಿ ರೀಡರ್‌ನಲ್ಲಿ ಕಾರ್ಡ್ ಸ್ಕ್ಯಾನ್ ಕಡ್ಡಾಯ. ಇದರಿಂದ ಯಾವ ವಿದ್ಯಾರ್ಥಿ ಯಾವ ಸಮಯದಲ್ಲಿ ಯಾವ ಬಸ್‌ನಲ್ಲಿ ಪ್ರಯಾಣಿಸಿದ್ದಾನೆ ಎಂಬ ಮಾಹಿತಿ ಸ್ವಯಂಚಾಲಿತವಾಗಿ ದಾಖಲಾಗುತ್ತದೆ. ಶಾಲೆಯಲ್ಲಿ 11 ನಿಯಮಿತ ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಬಸ್‌ನಲ್ಲಿ ತಾಂತ್ರಿಕ ದೋಷ ಉಂಟಾದರೆ ಒಂದು ಹೆಚ್ಚುವರಿ (ಬ್ಯಾಕ್‌ಅಪ್) ಬಸ್ ಸದಾ ಸನ್ನದ್ಧವಾಗಿರಿಸಲಾಗಿದೆ. ಪ್ರತಿಯೊಂದು ಶಾಲಾ ಬಸ್‌ನಲ್ಲಿ ಸಿಸಿ ಕ್ಯಾಮೆರಾ, ಲೈವ್ ಜಿಪಿಎಸ್‌ ಟ್ರ್ಯಾಕಿಂಗ್, ಸ್ಪೀಡ್ ಗವರ್ನರ್ ವ್ಯವಸ್ಥೆ ಕಡ್ಡಾಯ. ಪೋಷಕರು ವಿಶೇಷ ಮೊಬೈಲ್ ಆ್ಯಪ್ ಮೂಲಕ ಬಸ್‌ನ ನೈಜ ಸ್ಥಳ ವೀಕ್ಷಿಸಿ, ಬಸ್ ಯಾವ ಸ್ಥಳದಲ್ಲಿದೆ ಹಾಗೂ ಎಷ್ಟು ಹೊತ್ತಿಗೆ ತಲುಪಲಿದೆ ಎಂಬ ಮಾಹಿತಿ ತಿಳಿದುಕೊಳ್ಳಬಹುದಾಗಿದೆ. ಇಷ್ಟೆಲ್ಲ ವ್ಯವಸ್ಥೆಗಳನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪ್ರಹ್ಲಾದ ಜೆ ಶೆಟ್ಟಿ ಮಾರ್ಗದರ್ಶನದಲ್ಲಿ, ಆಡಳಿತ ಮಂಡಳಿ ಕಾರ್ಯದರ್ಶಿ ಮಹೇಶ್ ಜೆ. ಶೆಟ್ಟಿ ಪರಿಕಲ್ಪನೆ ಮತ್ತು ಮುತುವರ್ಜಿಯಲ್ಲಿ ಜಾರಿಗೊಳಿಸಲಾಗಿದೆ. ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ಸುರಕ್ಷಿತವಾಗಿ ತಲುಪುವವರೆಗೂ ಅವರ ಸುರಕ್ಷತೆಯ ಜವಾಬ್ದಾರಿ ಶಾಲಾ ಆಡಳಿತ ಮಂಡಳಿಯ ಮೇಲಿದೆ ಎಂಬ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿರುವುದು ಗಮನಾರ್ಹ. ಈ ಹಿನ್ನೆಲೆಯಲ್ಲಿ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯು ಈ ರೀತಿಯ ಸಮಗ್ರ ಡಿಜಿಟಲ್ ಸುರಕ್ಷತಾ ವ್ಯವಸ್ಥೆ ಮೊದಲೇ ಅಳವಡಿಸಿಕೊಂಡಿರುವುದು ಅದರ ದೂರದೃಷ್ಟಿಯ ಆಡಳಿತವನ್ನು ಪ್ರತಿಬಿಂಬಿಸುತ್ತದೆ.

 ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಆಡಳಿತ ಮಂಡಳಿ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಂಡಿದ್ದೇವೆ. ನಮ್ಮ ಈ ವ್ಯವಸ್ಥೆ ಬಗ್ಗೆ ಪೋಷಕರಿಂದಲೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

-ಸುದೀಪ್ ಕುಮಾರ್ ಶೆಟ್ಟಿ, ಅಧ್ಯಕ್ಷರು ಶಾಲೆಯ ಶಿಕ್ಷಕ-ರಕ್ಷಕ ಸಂಘ.

 ವಿದ್ಯಾರ್ಥಿಗಳ ಸುರಕ್ಷತೆ ಮೊದಲ ಆದ್ಯತೆಯಾಗಿ ಪರಿಗಣಿಸಿ ಈ ತಂತ್ರಜ್ಞಾನ ಅಳವಡಿಸಲಾಗಿದೆ.

-ಮಹೇಶ್ ಶೆಟ್ಟಿ ಜೆ., ಕಾರ್ಯದರ್ಶಿ, ಬಾಲವಿಕಾಸ ಟ್ರಸ್ಟ್ ಮಾಣಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನೈಸ್‌ ರಸ್ತೆಯಲ್ಲಿ ಟೋಲ್‌ ಕಟ್ಟಬೇಡಿ: ಕುಮಾರಸ್ವಾಮಿ
ಕೆಪಿಎಸ್ಸಿ ನೇಮಕ ಹಗರಣ : ಮತ್ತೆ ಸಾಹುಕಾರ್‌ ಸಸ್ಪೆಂಡ್‌ಗೆ ಸಚಿವ ಸಂಪುಟ ಶಿಫಾರಸು