ಕನ್ನಡಪ್ರಭ ವಾರ್ತೆ ಮೂಲ್ಕಿ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ದಿ.ಡಾ. ಸಂಜೀವನಾಥ ಐಕಳರ ಪರಿಶ್ರಮದ ಕಿನ್ನಿಗೋಳಿಯ ತಾಳಿಪಾಡಿ ಗ್ರಾಮದ ಪುನರೂರು ಭಾರತ್ ಮಾತಾ ಹಿರಿಯ ಪ್ರಾಥಮಿಕ ಶಾಲೆಗೆ ಸುಮಾರು 75 ವರ್ಷಗಳ ಇತಿಹಾಸವಿದೆ. ಶಾಲಾ ಆಡಳಿತ ಮಂಡಳಿಯು ಏಕಾಏಕಿ ಶಾಲೆಯನ್ನು ಮುಚ್ಚಲು ಮುಂದಾಗಿದ್ದು ಶಾಲಾ ಪೋಷಕ ಸಮಿತಿಯ ಅಧ್ಯಕ್ಷರು ಸಹಿತ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಪೋಷಕ ಸಮಿತಿಯ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ ಮಾಧ್ಯಮದೊಂದಿಗೆ ಮಾತನಾಡಿ, ದೇಶಭಕ್ತ ಸದಾಶಿವ ರಾವ್ ಸ್ಮಾರಕ ಸೇವಾಶ್ರಮದ ಆಡಳಿತಕ್ಕೆ ಒಳಪಟ್ಟ ಭಾರತಮಾತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ 60 ಮಕ್ಕಳು ಒಂದರಿಂದ 7ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಏಕಾಏಕಿ ಶಾಲಾ ಆಡಳಿತ ಮಂಡಳಿಯ ನಿರ್ಣಯದಿಂದ ಶಾಲೆ ಮುಚ್ಚುವ ಸ್ಥಿತಿಯಲ್ಲಿದೆ. ಶಾಲೆಯಲ್ಲಿ ಗ್ರಾಮೀಣ ಪ್ರದೇಶದ ಅತಿ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿಯ ಮಕ್ಕಳು ಹೆಚ್ಚಾಗಿ ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ದೇಶಭಕ್ತರ ಹೆಸರಿನಲ್ಲಿ ಅಭಿವೃದ್ಧಿ ಹೊಂದಿದ ಶಾಲೆ ಸ್ವಾತಂತ್ರ್ಯ ಹೋರಾಟಗಾರ ಸಮಾಜ ಸೇವಕ ಮತ್ತು ಚಿಂತಕ ಮಾಜಿ ಶಾಸಕ ದಿ.ಡಾ. ಸಂಜೀವನಾಥ ಐಕಳ ಅವರ ಪರಿಶ್ರಮ ಸೇವಾ ಮನೋಭಾವನೆಯಿಂದ ಬೆಳೆದಿದ್ದು, ಶಾಲೆಯ್ನು ಮುಚ್ಚಬಾರದು. ಶಾಲೆಯಲ್ಲಿ ಏಕ ಮಾತ್ರ ಶಿಕ್ಷಕಿ ಇದ್ದು ನಾಲ್ಕು ಗೌರವ ಶಿಕ್ಷಕಿಯರನ್ನು ಶಾಲಾ ಆಡಳಿತ ಮಂಡಳಿಯ ಒಪ್ಪಿಗೆ ಮೇರೆಗೆ ದಾನಿಗಳ ಸಹಕಾರದಿಂದ ನೇಮಿಸಲಾಗಿದ್ದು, ಶಾಲೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಕೂಡಲೇ ಶಾಲಾ ಆಡಳಿತ ವರ್ಗ ಸರ್ಕಾರದ ವರ್ಗಾವಣೆ ನಿಯಮದಂತೆ ಅನುದಾನಿತ ಶಾಲಾ ಹೆಚ್ಚುವರಿ ಶಿಕ್ಷಕರೊಬ್ಬರನ್ನು ನೇಮಿಸುವಂತೆ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿ ಶಾಲೆಯನ್ನು ಮುಂದುವರಿಸಲು ಮುಂದಾಗಬೇಕು ಎಂದು ಪೋಷಕ ಸಮಿತಿಯ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ ತಿಳಿಸಿದ್ದಾರೆ. ಸಮಿತಿಯ ಸದಸ್ಯರಾದ ಸತೀಶ್ ಭಟ್, ರಮ್ ಲತ್ ಕೆರೆಕಾಡು ರವರು ಈ ಬಗ್ಗೆ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ಹೇಳಿದರು.