ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ ಅವಿಸ್ಮರಣೀಯ

KannadaprabhaNewsNetwork |  
Published : Jul 27, 2025, 12:03 AM IST
ಸ್ವಾತಂತ್ರö್ಯ ಹೋರಾಟಗಾರರ ನೆನಪಿನ ಕಾರ್ಯಕ್ರಮವನ್ನು ತಹಶೀಲ್ದಾರ ಡಾ. ಚಿಕ್ಕಪ್ಪ ನಾಯಕ ಉದ್ಘಾಟಿಸಿದರು. | Kannada Prabha

ಸಾರಾಂಶ

ಸ್ವಾತಂತ್ರ್ಯ ಹೋರಾಟದ ಭೂಪಟದಲ್ಲಿ ಈ ತಾಲೂಕು ಚಿರಸ್ಥಾಯಿಯಾಗಿ ನಿಂತಿದೆ

ಅಂಕೋಲಾ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ ಅವಿಸ್ಮರಣೀಯ ಎಂದು ತಹಶೀಲ್ದಾರ ಡಾ. ಚಿಕ್ಕಪ್ಪ ನಾಯಕ ಹೇಳಿದರು.

ಅವರು ಸ್ವಾತಂತ್ರ್ಯ ಸಂಗ್ರಾಮ ಭವನ ಆವರಣದಲ್ಲಿ ಆಯೋಜಿಸಿದ ಸ್ವಾತಂತ್ರ್ಯ ಹೋರಾಟಗಾರರ ನೆನಪಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ಅಂದಿನ ಹಿರಿಯರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಸ್ವಾತಂತ್ರ್ಯ ಹೋರಾಟದ ಕಾರಣಕ್ಕಾಗಿಯೇ ಅಂಕೋಲೆಗೆ ಕರ್ನಾಟಕದ ಬಾರ್ಡೋಲಿ ಎಂದು ಹೆಸರು ಬರಲು ಸಾಧ್ಯವಾಗಿದೆ. ಸ್ವಾತಂತ್ರ್ಯ ಹೋರಾಟದ ಭೂಪಟದಲ್ಲಿ ಈ ತಾಲೂಕು ಚಿರಸ್ಥಾಯಿಯಾಗಿ ನಿಂತಿದೆ ಎಂದರು.

ಹಿರಿಯ ಚಿಂತಕ ಕಾಳಪ್ಪ ನಾಯಕ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರನ್ನು ಮುಂದಿನ ಪೀಳಿಗೆಯವರು ನೆನಪಿಸಿಕೊಳ್ಳಲು ಹಾಗೂ ಹೋರಾಟಗಾರರ ಹೆಸರನ್ನು ಶಾಶ್ವತವಾಗಿರುವಂತೆ ನಾಮಫಲಕ ನಿರ್ಮಿಸಿದ್ದಾರೆ. ಅವರ ಕಾರ್ಯ ಅತ್ಯಂತ ಸ್ತುತ್ಯಾರ್ಹ. ಅಂದಿನ ಇಲ್ಲಿಯ ಹಿರಿಯರು ಸ್ವಾತಂತ್ರ್ಯಕ್ಕಾಗಿ ಹೋರಾಡದಿದ್ದರೆ ಈ ಭಾಗಕ್ಕೆ ಬಾರ್ಡೋಲಿ ಎಂದು ಹೆಸರು ಬರಲು ಸಾಧ್ಯವೇ ಇರಲಿಲ್ಲ. ಅಂತಹ ಎಲ್ಲ ಹೋರಾಟಗಾರರ ಮಾಹಿತಿ ಮುಂದಿನ ಪೀಳಿಗೆಗೆ ಸಿಗಬೇಕು. ಹಾಗಾಗಿ ಬಾಕಿ ಉಳಿದ ಹೋರಾಟಗಾರರ ಹೆಸರುಗಳನ್ನು ಪರಿಶೀಲಿಸಿ ನಾಮಫಲಕ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಾಲಾ ತಪಾಸಣಾಧಿಕಾರಿ ಕಾಳಪ್ಪ ನಾಯಕ ಮಾತನಾಡಿ, ಈಗಾಗಲೇ ಸ್ವಾತಂತ್ರ್ಯ ಹೋರಾಟಗಾರರ 116 ಹೆಸರುಗಳನ್ನು ಪ್ರಕಟಿಸಿದ್ದು ಉಳಿದಿರುವ ಹೋರಾಟಗಾರರ ಹೆಸರುಗಳ ಫಲಕವನ್ನು ತಯಾರಿಸುವ ಬಗ್ಗೆ ಜಿಲ್ಲಾಡಳಿತ ಅದೇಶ ನೀಡಿದರೆ ನಾಮಫಲಕ ತಯಾರಿಸಲಾಗುವುದು. ಈ ಕಾರ್ಯಕ್ಕಾಗಿ ಕಳೆದ 20 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇನೆ. ಸ್ವಾತಂತ್ರ್ಯ ಹೋರಾಟಗಾರರ ನೆನಪು ಸದಾ ಸ್ಮರಿಸುವಂತಾಗಬೇಕು. ಈ ಕಾರಣಕ್ಕಾಗಿ ತನ್ನ ಸ್ವಂತ ಖರ್ಚಿನಿಂದ ಈ ಫಲಕಗಳನ್ನು ತಯಾರಿಸುತ್ತಿದ್ದೇನೆ ಎಂದರು.

ವಿಶ್ರಾಂತ ಪ್ರಾಚಾರ್ಯ ಪ್ರೊ.ಮೋಹನ ಎಸ್. ಹಬ್ಬು, ಗಾಂವಕರ ಮೆಮೋರಿಯಲ್ ಫೌಂಡೇಶನ್ ಅಧ್ಯಕ್ಷ ದೇವಾನಂದ ಗಾಂವಕರ ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಲೇಖಕ ವಿಠ್ಠಲ ಗಾಂವಕರ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ ಕಚೇರಿಯ ಭಾವನಾ ಗಾಂವಕರ, ಜಿ.ಆರ್. ನಾಯಕ ವಂದಿಗೆ, ಪಪ್ಪು ಸೈಯದ್, ರಾಜೇಶ ನಾಯಕ ಹಳ್ಳದಾಚೆ, ಪತ್ರಕರ್ತ ಮೋಹನ ದುರ್ಗೇಕರ, ಪ್ರವೀಣ ನಾಯಕ, ನಾಗರಾಜ ಭೋವಿ ಮುಂತಾದವರಿದ್ದರು.

ಕಾರ್ಯಕ್ರಮದ ಸಂಘಟಕ ಕೆ.ರಮೇಶ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್