ಗಾಳಿ-ಮಳೆ ಆರ್ಭಟ: ಹಲವೆಡೆ ಹಾನಿ, ವಿದ್ಯುತ್ ಕಂಬಗಳು ಧರೆಗೆ

KannadaprabhaNewsNetwork |  
Published : Jul 27, 2025, 12:03 AM IST
೨೬ಎಸ್.ಆರ್.ಎಸ್೯ಪೊಟೋ೧ (ನಗರದಂಚಿನ ಹುತ್ಗಾರನಲ್ಲಿ ಗಾಳಿಯ ಆರ್ಭಟಕ್ಕೆ ವಿದ್ಯುತ್ ಲೈನ್ ಮೇಲೆ ಬೃಹತ್ ಮರ ಬಿದ್ದಿರುವುದು.)೨೬ಎಸ್.ಆರ್.ಎಸ್೯ಪೊಟೋ೨ ((ನಗರದಂಚಿನ ಹುತ್ಗಾರನಲ್ಲಿ ವಿದ್ಯುತ್ ಕಂಬ ಹುಲೇಕಲ್ ರಸ್ತೆ ಕಡೆ ವಾಲಿರುವುದು.) | Kannada Prabha

ಸಾರಾಂಶ

ದೈನಂದಿನ ಕೆಲಸ ಮಾಡಲಾಗದೇ ಜನರು ಹೈರಾಣಾಗುವಂತಾಗಿದೆ.

ಶಿರಸಿ: ನಗರ ಹಾಗೂ ಗ್ರಾಮೀಣದಲ್ಲಿ ಮಳೆಯ ನಡುವೆ ಗಾಳಿಯ ಆರ್ಭಟ ಜೋರಾಗಿರುವುದರಿಂದ ರಸ್ತೆ ಹಾಗೂ ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿ ಬಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ದೈನಂದಿನ ಕೆಲಸ ಮಾಡಲಾಗದೇ ಜನರು ಹೈರಾಣಾಗುವಂತಾಗಿದೆ.ತಾಲೂಕಿನ ಬದನಗೋಡ ಗ್ರಾಪಂ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದಲ್ಲಿ ರೇಣುಖಾ ಲಕ್ಷ್ಮೀಣ ಭೋವಿವಡ್ಡರ ಮನೆಯ ಗೋಡೆ ಕುಸಿದು, ಇಸಳೂರು ಗ್ರಾಪಂ ವ್ಯಾಪ್ತಿಯ ದೇವನಿಲಯದ ಸಾವಿತ್ರಿ ಮೊಗೇರ ಎಂಬುವವರ ಮನೆಯ ಮೇಲ್ಛಾವಣಿ ಕುಸಿದು ಹಾನಿಯಾಗಿದೆ.

ನಗರದಂಚಿನ ಹುತ್ಗಾರನಲ್ಲಿ ಶನಿವಾರ ಮಧ್ಯಾಹ್ನ ಗಾಳಿಯ ಆರ್ಭಟಕ್ಕೆ ವಿದ್ಯುತ್ ಲೈನ್ ಮೇಲೆ ಬೃಹತ್ ಮರ ಬಿದ್ದು ಸುಮಾರು ೮ ಕಂಬಗಳು ಮುರಿದು ಬಿದ್ದಿದೆ. ಹುಲೇಕಲ್ ಮುಖ್ಯ ರಸ್ತೆಯ ಮೇಲೆ ಕಂಬಗಳು ಮುರಿದು ಬಿದ್ದಿರುವುದರಿಂದ ಕೆಲ ಸಮಯ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ನಂತರ ಹೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ, ಕಂಬ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಕಲ್ಪಿಸಿದರು.

ಇಲ್ಲಿನ ವಿವೇಕಾನಂದನಗರ, ಚಿಪಗಿಯ ಡ್ರೀಮ್ ಪಾರ್ಕ್, ಮರಾಠಿಕೊಪ್ಪದ ಸೇರಿದಂತೆ ಗ್ರಾಮೀಣ ಭಾಗಗಳಾದ ಹೆಗಡೆಕಟ್ಟಾ, ಕಾನಳ್ಳಿ, ದೇವನಳ್ಳಿ, ಮತ್ತಿಘಟ್ಟ ಭಾಗದ ಕೆಲವು ಕಡೆಗಳಲ್ಲಿ ಶನಿವಾರ ವಿದ್ಯುತ್ ಸಮಸ್ಯೆಯಿಂದ ಕತ್ತಲೆಯಲ್ಲಿ ದಿನ ದೂಡುವಂತಾಗಿ ಹೆಸ್ಕಾಂ ಅಸಮರ್ಪಕ ಕಾರ್ಯನಿರ್ವಹಣೆಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಮರದ ರೆಂಬೆ-ಕೊಂಬೆಗಳು ತಂತಿಗೆ ತಗುಲಿ ವಿದ್ಯುತ್ ವ್ಯತ್ಯಯ, ಆದರೆ ಹೆಸ್ಕಾಂ ಬಳಿ ಅದನ್ನು ಕತ್ತರಿಸಲು ಸಿಬ್ಬಂದಿಗಳಿಲ್ಲ. ಮರ ಕಡಿಯಲು ಅರಣ್ಯ ಇಲಾಖೆಯವರಿಂದ ಆಗುತ್ತಿಲ್ಲ. ಲೋಕೋಪಯೋಗಿ ಇಲಾಖೆಗೆ ಗೊತ್ತೇ ಆಗುವುದಿಲ್ಲ. ಇಲಾಖೆಗಳ ನಡುವೆ ಸಮನ್ವಯ ಕೊರತೆಯಿಂದ ಸಾರ್ವಜನಿಕರು ಸಮಸ್ಯೆಗೆ ಸಿಲುಕಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ದೂರು ಸ್ವೀಕರಿಸುವ ಸಿಬ್ಬಂದಿಗಳಿಗೆ ಸೌಜನ್ಯದ ಪಾಠ ಮಾಡಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಶಿರಸಿ ಹೆಸ್ಕಾಂ ವಿಭಾಗದಲ್ಲಿಕಳೆದ ೨ ದಿನದಲ್ಲಿ ಗಾಳಿಯ ಆರ್ಭಟಕ್ಕೆ ಮರಗಳೆಲ್ಲ ವಿದ್ಯುತ್ ಕಂಬ ಹಾಗೂ ತಂತಿ ಮೇಲೆ ಬಿದ್ದ ಪರಿಣಾಮ ಸುಮಾರು ೫೦ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ೨ ಪರಿವರ್ತಕಗಳು ಹಾಳಾಗಿದೆ. ಶಿರಸಿ ಹೆಸ್ಕಾಂ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಲೈನ್ ಹಾದುಹೋಗಿರುವುದರಿಂದ ಕಂಬ ಬದಲಾವಣೆ ಕಷ್ಟವಾಗುತ್ತದೆ. ಗಾಳಿ-ಮಳೆಯ ನಡುವೆಯೂ ಸಮರ್ಪಕ ವಿದ್ಯುತ್ ಪೂರೈಕೆಗೆ ಹೆಸ್ಕಾಂ ಅಧಿಕಾರಿಗಳು ಹಾಗೂ ಲೈನ್‌ಮೆನ್‌ಗಳು ಶ್ರಮಿಸುತ್ತಿದ್ದಾರೆ ಎಂದು ಹೆಸ್ಕಾಂ ಎಇಇ ನಾಗರಾಜ ಪಾಟೀಲ ತಿಳಿಸಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್