ಹರಪನಹಳ್ಳಿ: ವಸ್ತುನಿಷ್ಠ ಹಾಗೂ ಮೌಲ್ಯಾಧಾರಿತ ಸುದ್ದಿಗೆ ಹೆಚ್ಚಿನ ಗಮನವನ್ನು ಪತ್ರಕರ್ತರು ನೀಡಬೇಕು ಎಂದು ಇಲ್ಲಿಯ ತೆಗ್ಗಿನಮಠದ ಷ.ಬ್ರ. ವರಸದ್ಯೋಜಾತ ಸ್ವಾಮೀಜಿ ಹೇಳಿದರು.
ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣ, ದೃಶ್ಯ ಮಾದ್ಯಮಗಳು ಎಷ್ಟೆ ಮುಂದುವರಿದರೂ ಮುದ್ರಣ ಮಾಧ್ಯಮ ತಮ್ಮ ಮೌಲ್ಯ ಉಳಿಸಿಕೊಂಡು ಹೋಗುತ್ತಿದೆ. ಪತ್ರಿಕೆಗಳನ್ನು ನಿರಂತರವಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಕಂದಾಯ ಉಪವಿಭಾಗಾಧಿಕಾರಿ ಚಿದಾನಂದಗುರುಸ್ವಾಮಿ ಮಾತನಾಡಿ, ಅನೇಕ ಸವಾಲುಗಳ ಮಧ್ಯೆ ಪತ್ರಿಕಾ ನೈಪುಣ್ಯತೆ ಎತ್ತಿ ಹಿಡಿಯುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಪ್ರಸ್ತುತ ಪತ್ರಿಕೆಗಳ ಮೂಲಕ ಸಮಾಜದ ಆಗು ಹೋಗುಗಳನ್ನು ತಿಳಿಯಬಹುದಾಗಿದೆ ಎಂದರು.ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾತನಾಡಿ, ಮೊಬೈಲ್, ಟಿವಿಗಳಿಂದ ಪತ್ರಿಕೆ ಓದುವವರ ಸಂಖ್ಯೆ ಕ್ಷೀಣಿಸುತ್ತಲಿದೆ. ಪತ್ರಿಕೆಗಳು ಇರುವುದರಿಂದ ಕೆಟ್ಟ ಕಾರ್ಯಗಳು ಕಡಿಮೆ ಇವೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಪತ್ರಕರ್ತರು ಇಂದು ಅಭದ್ರತೆಯಲ್ಲಿ ಜೀವನ ಕಳೆಯುತ್ತಿದ್ದಾರೆ. ಅವರ ಜೀವನ ನಿರ್ವಹಣೆ ಕಷ್ಟದಾಯಕವಾಗಿದೆ. ನಿಜವಾದ ಅರ್ಹ ಪತ್ರಕರ್ತರಿಗೆ ಸೌಲಭ್ಯಗಳು ಸಿಗಬೇಕು ಎಂದು ಹೇಳಿದರು.ತೆಗ್ಗಿಮಠದ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ ಮಾತನಾಡಿ, ದೇಶದ ಪ್ರಗತಿಗೆ ಪತ್ರಿಕಾ ಮಾಧ್ಯಮ ಶ್ರಮಿಸುತ್ತಲಿದೆ. ಸಮಾಜದ ಅಂಕು-ಡೊಂಕು ತಿದ್ದುವ ಕಾರ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಲೇಪಾಕ್ಷಪ್ಪ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಚಂದ್ರಪ್ಪ ತಳವಾರ ಅಧ್ಯಕ್ಷತೆ ವಹಿಸಿದ್ದರು.ಇಲ್ಲಿಂದ ಬಡ್ತಿ ಹೊಂದಿ ಹೊಸಪೇಟೆ ನಗರಸಭೆಗೆ ಪೌರಾಯುಕ್ತರಾಗಿ ವರ್ಗಾವಣೆಗೊಂಡಿರುವ ಎರಗುಡಿ ಶಿವಕುಮಾರ ಹಾಗೂ ಎಸ್‌ಎಸ್‌ಎಲ್‌ಸಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ನಿವೇಶನ ನೀಡಬೇಕು ಎಂದು ಶಾಸಕರನ್ನು ಕೋರಿದರು.ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಲಕ್ಷ್ಮಣ, ರಾಜ್ಯ ಸಮಿತಿ ಸದಸ್ಯ ವೆಂಕೋಬನಾಯಕ, ಖಜಾಂಚಿ ವೆಂಕಟೇಶ, ಸಿಪಿಐ ಮಹಾಂತೇಶ ಸಜ್ಜನ, ಎಸ್‌ಟಿ ನಿಗಮದ ಅಧಿಕಾರಿ ಇಬ್ರಾಹಿಂ, ತಾಪಂ ಮಾಜಿ ಸದಸ್ಯರಾದ ಮೈದೂರು ರಾಮಣ್ಣ, ಹುಲ್ಲಿಕಟ್ಟಿ ಚಂದ್ರಪ್ಪ, ಮುಖಂಡರಾದ ಮುತ್ತಿಗೆ ಜಂಬಣ್ಣ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶೇಖರಗೌಡ ಪಾಟೀಲ್, ಪುರಸಭಾ ಸದಸ್ಯರಾದ ಹುದ್ದಾರ ಗಣೇಶ, ಲಾಟಿದಾದಾಪೀರ, ರೊಕ್ಕಪ್ಪ, ಚಿಕ್ಕೇರಿ ಬಸಪ್ಪ, ಮತ್ತೂರು ಬಸವರಾಜ, ತಾಲೂಕು ಕಾರ್ಯದರ್ಶಿ ದೇವೇಂದ್ರಪ್ಪ, ಖಜಾಂಚಿ ಸುರೇಶ ಮಂಡಕ್ಕಿ, ಜಿಲ್ಲಾ ಪದಾಧಿಕಾರಿಗಳಾದ ಟಿ.ಬಿ. ರಾಜು, ನಾಗರಾಜನಾಯ್ಕ , ಬಿ. ರಾಮಪ್ರಸಾದ್ ಗಾಂಧಿ, ಕರಿಬಸಪ್ಪ ಪಿ., ದುರ್ಗೇಶ, ಮಾದವರಾವ್, ಮಂಜು, ಕುಬೇರಪ್ಪ ಇತರರು ಉಪಸ್ಥಿತರಿದ್ದರು.