ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಬಿಟ್ಟಿದ್ದು ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಗೆ ಮತ್ತೆ ಮುಳುಗಡೆಯ ಭೀತಿ ಎದುರಾಗಿದೆ. ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಿದ್ದರಿಂದ ನದಿಗೆ ಶನಿವಾರ 1 ಲಕ್ಷ ಕ್ಯುಸೆಕ್‌ನಷ್ಟು ನೀರು ಹರಿ ಬಿಡಲಾಗಿದೆ.
ಇನ್ನು ಸೇತುವೆ ಮಟ್ಟಕ್ಕೆ ನೀರು ಹರಿದು ಬರುತ್ತಿದ್ದು, ಸೇತುವೆ ಕೆಳಭಾಗಕ್ಕೆ ನದಿ ನೀರು ತಾಕುತ್ತಿದೆ. ನದಿಗೆ ಮತ್ತಷ್ಟು ನೀರು ಹರಿಬಿಡುವ ಸಾಧ್ಯತೆಯಿದ್ದು, ಯಾವ ಕ್ಷಣದಲ್ಲಾದರೂ ಸೇತುವೆ ಮುಳುಗಡೆಯಾಗಬಹುದು. ಇನ್ನು ನದಿ ಪಾತ್ರ ಜನತೆಗೆ ತಮ್ಮ ಮನೆಗಳು ಮುಳುಗುವ ಆತಂಕ ಒಂದೆಡೆ ಆದರೆ ಇನ್ನೊಂದೆಡೆ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಭತ್ತದ ಸಸಿ ಮಡಿಗಳು ಹಾಳಾಗುವ ಭಯದಲ್ಲಿ ಕಂಪ್ಲಿ ಭಾಗದ ರೈತರಿದ್ದಾರೆ.ಯಾವುದೇ ರೀತಿಯ ಅಪಾಯಗಳು ಜರುಗದಂತೆ ಕ್ರಮ ವಹಿಸಲು ತಾಲೂಕು ಆಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಸೇತುವೆಯ ಬಳಿ ಪೊಲೀಸ್ ಇಲಾಖೆ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ.
ಸಂಚಾರ ಸ್ಥಗಿತಗೊಳ್ಳುವ ಆತಂಕ: ಈ ಸೇತುವೆ ಮಾರ್ಗವಾಗಿ ಗಂಗಾವತಿ ತಲುಪಲು ಕೇವಲ 10 ಕಿಮೀ ಪ್ರಯಾಣಿಸಬೇಕು. ಒಂದು ವೇಳೆ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆಯಾದರೆ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳ್ಳಲಿದ್ದು, ಕಂಪ್ಲಿ ಸೇರಿದಂತೆ ಈ ಭಾಗದ ವಿದ್ಯಾರ್ಥಿಗಳು, ನೌಕರರು, ಕಾರ್ಮಿಕರು ಸೇರಿ ಸಾರ್ವಜನಿಕರು ಸುತ್ತು ಹಾಕಿಕೊಂಡು ಕಡೆ ಬಾಗಿಲು ಸೇತುವೆ ಮಾರ್ಗವಾಗಿ 30 ಕಿಮೀ ಪ್ರಯಾಣಿಸಿ ಗಂಗಾವತಿ ಸೇರುವ ಸಮಸ್ಯೆ ಎದುರಾಗಲಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಹಾಗೂ ನಿತ್ಯ ಓಡಾಡುವ ಸಾರ್ವಜನಿಕರಿಗೆ ಸಾರಿಗೆ ಬಸ್‌ನ ಸಮಸ್ಯೆಯಾಗುವ ಸಾಧ್ಯತೆಯೂ ಇದೆ.ತುಂಗಭದ್ರಾ ಜಲಾಶಯಕ್ಕೆ ಕಳೆದ ಎರಡು ದಿನಗಳಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಶನಿವಾರ ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣವನ್ನು ಕ್ರಮೇಣ ಹೆಚ್ಚಿಸಲಾಯಿತು. ಸಂಜೆ ವೇಳೆಗೆ 98 ಸಾವಿರ ಕ್ಯುಸೆಕ್ ಹೊರಹರಿವು ದಾಖಲಾಯಿತು. ಡ್ಯಾಂನಿಂದ ಶನಿವಾರ ಬೆಳಗ್ಗೆ 11 ಗಂಟೆ ವೇಳೆಗೆ 21 ಕ್ರಸ್ಟ್ ಗೇಟ್ ಗಳನ್ನು 2.5 ಅಡಿ ಎತ್ತರಿಸಿ 61 ಸಾವಿರ ಸೇರಿದಂತೆ ಒಟ್ಟು 65 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಸಲಾಯಿತು. ಇದು ಸಂಜೆ 5 ಗಂಟೆಗೆ ಬೃಹತ್ ಪ್ರಮಾಣಕ್ಕೇರಿತ್ತು.