ಕನಕಗಿರಿ:
ಸಭೆ ಉದ್ದೇಶಿಸಿ ಪಿಐ ಫೈಜುಲ್ಲಾ ಮಾತನಾಡಿ, ಹಲವು ದಶಕಗಳಿಂದ ಇದ್ದ ಸರ್ವೇ ನಂ.೩೭೦ರ ಭೂಮಿಯ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ತಾಲೂಕಾಡಳಿತದಿಂದ ಹಲವು ಬಾರಿ ಸಭೆ ನಡೆಸಲಾಗಿತ್ತು. ಅದಾದ ಬಳಿಕ ಎರಡು ಕೋಮಿನವರು ಕೂಡಿಕೊಂಡು ಸೌಹಾರ್ದತೆಯಿಂದ ವಿವಾದ ಬಗೆಹರಿಸಿಕೊಂಡಿದ್ದರು. ಯಾರದೋ ಕೃತ್ಯದಿಂದ ಇದೀಗ ವಕ್ಫ್ ಮಂಡಳಿಯಿಂದ ನೋಟಿಸ್ ಬಂದಿರುವುದು ಬೇಸರ ತರಿಸಿದೆ. ನೋಟಿಸ್‌ನಿಂದ ಯಾವುದೇ ಸಮಸ್ಯೆಯಿಲ್ಲ. ಹೀಗಾಗಿ ನೋಟಿಸ್ ಪಡೆದವರು ಭಯಪಡುವ ಅಗತ್ಯವಿಲ್ಲ ಎಂದರು.
ಬಗೆಹರಿದ ಸಮಸ್ಯೆಯನ್ನು ಪುನಃ ಗದ್ದಲ ಏಳುವಂತೆ ಮಾಡಿರುವುದು ಜೇನುಗೂಡಿಗೆ ಕಲ್ಲು ಎಸೆದಂತಾಗಿದೆ. ಅದಕ್ಕಾಗಿ ಮುಸ್ಲಿಂ ಮುಖಂಡರು ಪಟ್ಟಣದ ಸೌಹಾರ್ದತೆಗಾಗಿ ವಕ್ಫ್ ಅಧಿಕಾರಿಗಳಿಗೆ ಸ್ಥಳೀಯವಾಗಿ ಇರುವುದನ್ನು ಮನವರಿಕೆ ಮಾಡಬೇಕು ಎಂದು ಮನವಿ ಮಾಡಿದರು.ವಕ್ಫ್ ಬೋರ್ಡ್ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿದ ಪಿಐ, ಸೋಮವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕೊಪ್ಪಳದ ಡಿಸಿ ಕಚೇರಿಯಲ್ಲಿ ಸಭೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಅಶಾಂತಿಗೆ ಮುಂದಾಗಬೇಡಿ ಎಂದು ತಿಳಿಸಿದರು.
ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಅಯ್ಯನಗೌಡರೆಡ್ಡಿ ಅಳ್ಳಳ್ಳಿ ಮಾತನಾಡಿ, ಸಮಸ್ಯೆ ಬಗೆಹರಿವವರೆಗೆ ಎರಡು ಸ್ಥಳಗಳಲ್ಲಿ ಶವಸಂಸ್ಕಾರ ಮಾಡಬಾರದು ಎಂದು ಒತ್ತಾಯಿಸಿದರು.ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಮಂಗಳವಾರದ ವರೆಗೆ ಅವಕಾಶ ನೀಡುತ್ತಿದ್ದು, ಅಷ್ಟರಲ್ಲಿಯೇ ಬಗೆಹರಿಸಬೇಕು. ಇಲ್ಲದಿದ್ದರೆ ಎರಡು ಕಡೆಗಳಲ್ಲಿ ಶವ ಸಂಸ್ಕಾರ ನಿಲ್ಲಿಸಲಾಗುವುದು ಎಂದು ತಿಳಿಸಿದರು.
ಗ್ಯಾರಂಟಿ ಸಮಿತಿ ಅಧ್ಯಕ್ಷ ಹಜರತ್ ಹುಸೇನ್ ಮಾತನಾಡಿ, ನಮ್ಮಿಂದ ಈ ಸಮಸ್ಯೆಯಾಗಿಲ್ಲ. ಸಭೆಗೆ ಕೇವಲ ನಾಲ್ಕು ಜನ ಮಾತ್ರ ಬಂದಿದ್ದು, ಸಮಾಜದವರ ಸಭೆ ನಡೆಸಿ ವಕ್ಫ್ ಬೋರ್ಡ್‌ಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.ಈ ವೇಳೆ ಪಪಂ ಸದಸ್ಯ ಅನಿಲ ಬಿಜ್ಜಳ, ಪ್ರಮುಖರಾದ ಮಹಾಂತೇಶ ಸಜ್ಜನ, ದೊಡ್ಡ ಬಸವರೆಡ್ಡಿ ಸಾನಬಾಳ, ಹನುಮೇಶ, ವಿನೋದ ಮರಾಠಿ, ಸಂಪತ್ ಹೋಟೆಲ್, ನಾಗರಾಜ, ಖಾದರಭಾಷಾ ಇತರರಿದ್ದರು.