ಸಿದ್ದಾಪುರ: ವ್ಯಕ್ತಿಯನ್ನು ಲೌಕಿಕ ಬಂಧನದಿಂದ ಬಿಡುಗಡೆಗೊಳಿಸುವುದು ನಿಜವಾದ ಕಲೆ. ಜೀವನದ ಕಷ್ಟಗಳನ್ನು ಪರಿಹರಿಸಿಕೊಳ್ಳುವ ವಿದ್ಯೆ ಕಲಿತಾಗ ನಾವು ಸುಸಂಸ್ಕೃತರಾಗುತ್ತೇವೆ ಎಂದು ಲಂಡನ್ ಭಾರತೀಯ ವಿದ್ಯಾಭವನದ ನಿರ್ದೇಶಕ ಡಾ. ಮತ್ತೂರು ನಂದಕುಮಾರ ಹೇಳಿದರು.
ಈ ಸಂದರ್ಭದಲ್ಲಿ ಯಕ್ಷಗಾನದ ಪ್ರಸಿದ್ಧ ಕಲಾವಿದ ವಿನಾಯಕ ಹೆಗಡೆ ಕಲಗದ್ದೆ ಅವರನ್ನು ಯಕ್ಷನಾಟ್ಯ ಅಭಿನವಾಂತ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿನಾಯಕ ಹೆಗಡೆ ಕಲಗದ್ದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ರಾಮಾಯಣ, ಮಹಾಭಾರತದಂಥ ಪುರಾಣಗಳನ್ನು ತಲುಪಿಸಿದ್ದು ಯಕ್ಷಗಾನ. ಭಾಷೆ, ಪ್ರಾಂತ್ಯದ ಹಂಗಿಲ್ಲದ ಯಕ್ಷಗಾನ ವಿಶ್ವಗಾನವಾಗುವ ಅರ್ಹತೆ ಹೊಂದಿರುವಂಥದ್ದು. ನಿಜವಾದ, ಶುದ್ಧವಾದ ಸಂಸ್ಕೃತಿಯ ಯಕ್ಷಗಾನ ಕನ್ನಡ ಭಾಷೆಯನ್ನು ಉಳಿಸಿಕೊಂಡುಬಂದಿರುವಂಥದ್ದು. ಯಕ್ಷಗಾನಕ್ಕೆ ಗೌರವ ತಂದವರಲ್ಲಿ ಕೆರೆಮನೆ ಕುಟುಂಬದ ಕಾರ್ಯ ಮಹತ್ವದ್ದು. ನನ್ನ ಗುರುಗಳಾದ ಶಂಭು ಹೆಗಡೆ ಅವರ ಮಾರ್ಗದರ್ಶನ, ಮಹಾಗಣಪತಿಯ ಆಶೀರ್ವಾದದಿಂದ ೮ ಬಾರಿ ಶಸ್ತ್ರಚಿಕಿತ್ಸೆಯಾದರೂ ಈ ವರೆಗೂ ಯಕ್ಷಗಾನದಲ್ಲಿ ತೊಡಗಿದ್ದೇನೆ. ಗುರು ಶಂಭು ಹೆಗಡೆ ಅವರ ಕಲೆಗೆ ಅಪಮಾನವಾಗದ ಹಾಗೇ ನೋಡಿಕೊಳ್ಳಿ ಎನ್ನುವ ಮಾತನ್ನು ಶಕ್ತಿಮೀರಿ ಪಾಲಿಸಿಕೊಂಡು ಬರುತ್ತಿದ್ದೇನೆ ಎಂದರು.ಇನ್ನೊರ್ವ ಮುಖ್ಯ ಅತಿಥಿ ಬೆಂಗಳೂರಿನ ಹೆಬ್ರಾನ್‌ನ ಕಾ.ನಿ. ನಿರ್ದೇಶಕ ಪ್ರೀನಂದ್ ಪ್ರೇಮಚಂದ್ರನ್ ಜನ್ಮದಿನವನ್ನು ಈ ರೀತಿ ವಿಶಿಷ್ಟವಾಗಿ ಆಚರಿಸಬಹುದು ಎನ್ನುವುದಕ್ಕೆ ಈ ಕಾರ್ಯಕ್ರಮ ನಿದರ್ಶನ ಎಂದರು.
ಸುಮಾನಸ ಸಂಸ್ಥೆಯ ಸಂಚಾಲಕ ಡಾ. ವಿಘ್ನೇಶ ಭಟ್ ಸ್ವಾಗತಿಸಿದರು. ಇನ್ನೋರ್ವ ಸಂಚಾಲಕಿ ಡಾ. ಸುಮಿತ್ರಾ ಭಟ್ ವಂದಿಸಿದರು. ವಸುಧಾ ಕರಣಿಕ್ ನಿರೂಪಿಸಿದರು.