ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯ

KannadaprabhaNewsNetwork |  
Published : Oct 20, 2024, 02:01 AM IST
55 | Kannada Prabha

ಸಾರಾಂಶ

ಅಕ್ರಮ ಚಟುವಟಿಕೆ ಮತ್ತು ಕಾನೂನು ಬಾಹಿರ ಕೆಲಸ ನಡೆದಾಗ ನಮಗೆ ನಾಗರೀಕರು ಮಾಹಿತಿ ನೀಡಿದರೆ ಅಂತಹವರ ಹೆಸರನ್ನು ಗೌಪ್ಯವಾಗಿಟ್ಟು ಅಗತ್ಯ ಕ್ರಮ ಕೈಗೊಳ್ಳಲಾಗುವುದು

ಕನ್ನಡಪ್ರಭ ವಾರ್ತೆ ಕೆ.ಆರ್. ನಗರಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಮತ್ತು ಮಾಧ್ಯಮದವರು ಅಗತ್ಯ ಸಹಕಾರ ನೀಡಬೇಕು ಎಂದು ಪಟ್ಟಣ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಎಸ್. ಶಿವಪ್ರಕಾಶ್ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ನಡೆದ ಮಾಧ್ಯಮ ಸ್ನೇಹಿತರ ಪರಿಚಯ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ವಾಹನ ಸವಾರರು ಕಡ್ಡಾಯವಾಗಿ ಅಗತ್ಯ ದಾಖಲೆ ಹೊಂದುವುದರೊಂದಿಗೆ ತಮಗೆ ಮತ್ತು ವಾಹನಗಳಿಗೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ತಾಲೂಕಿನಾದ್ಯಂತ ಯಾವುದೇ ಸ್ಥಳದಲ್ಲಿ ಅಕ್ರಮ ಚಟುವಟಿಕೆ ಮತ್ತು ಕಾನೂನು ಬಾಹಿರ ಕೆಲಸ ನಡೆದಾಗ ನಮಗೆ ನಾಗರೀಕರು ಮಾಹಿತಿ ನೀಡಿದರೆ ಅಂತಹವರ ಹೆಸರನ್ನು ಗೌಪ್ಯವಾಗಿಟ್ಟು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರದಲ್ಲಿ ಯಾವುದೇ ಅಂಜಿಕೆ ಮತ್ತು ಭಯ ಬೇಡ ಎಂದರು.ಸಾರಿಗೆ ನಿಯಮಗಳನ್ನು ಪಾಲಿಸಿ ಅಪರಾಧ ಮತ್ತು ಅಪಘಾತ ಮುಕ್ತ ಸಮಾಜ ನಿರ್ಮಾಣ ಮಾಡಲು ನಮ್ಮೊಂದಿಗೆ ಸಹಕಾರ ನೀಡಬೇಕು. ಹಂತ ಹಂತವಾಗಿ ಪಟ್ಟಣದಲ್ಲಿ ಸಂಚಾರ ನಿಯಮ ಪಾಲನೆ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ನುಡಿದರು.ಈಗಾಗಲೇ ಇಲಾಖೆ ವತಿಯಿಂದ ಹಗಲು ಸೇರಿದಂತೆ ಪಟ್ಟಣದಾದ್ಯಂತ ರಾತ್ರಿ ಗಸ್ತನ್ನು ಬಿಗಿಗೊಳಿಸಿದ್ದು, ಕಳ್ಳತನ ಸೇರಿದಂತೆ ಇತರ ನಿಯಮ ಬಾಹಿರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು ನಾಗರೀಕರ ಸುರಕ್ಷತೆಗೆ ಕ್ರಮ ಕೈಗೊಳ್ಳುತ್ತೇವೆ. ಪಟ್ಟಣದಲ್ಲಿ ವಾಸಿಸುವ ನಾಗರೀಕರು ಹೊರ ಊರುಗಳಿಗೆ ಹೊಗುವ ಸಮಯ ಎದುರಾದಾಗ ಠಾಣೆಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದರು.ಕೃಷ್ಣರಾಜೇಂದ್ರ ಕ್ರೀಡಾಂಗಣ, ಪುರಸಭೆ ಬಯಲು ರಂಗ ಮಂದಿರ ಮಹಾತ್ಮಗಾಂಧಿ ಉದ್ಯಾನವನ ಸೇರಿದಂತೆ ಇತರೆಡೆಗಳಲ್ಲಿ ಹಗಲು ಹೊತ್ತಿನಲ್ಲಿ ಮದ್ಯಪಾನ ಮಾಡಿ ಪುಂಡರು ನಾಗರೀಕರಿಗೆ ತೊಂದರೆ ನೀಡುತ್ತಿರುವ ಬಗ್ಗೆ ವ್ಯಾಪಕ ದೂರು ಕೇಳಿ ಬಂದಿದ್ದು ಇದನ್ನು ಹತ್ತಿಕ್ಕಲು ವಿಶೇಷ ಪೊಲೀಸ್ ತಂಡ ರಚಿಸಿ ದಿಢೀರ್ ದಾಳಿ ನಡೆಸುವುದಾಗಿ ಮಾಹಿತಿ ನೀಡಿದರು.ಪಟ್ಟಣದ ಕೆಲವು ಮದ್ಯದಂಗಡಿಯ ಮುಂದೆ ಮುಂಜಾನೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಕೇಳಿ ಬಂದಿದ್ದು ನಾಳೆಯಿಂದಲೇ ದಿಢೀರ್ ದಾಳಿ ನಡೆಸಿ ಅದಕ್ಕೆ ಕಡಿವಾಣ ಹಾಕಲಾಗುವುದು. ಯಾವುದೇ ಸಮಸ್ಯೆಗಳಿದ್ದರೂ ನಾಗರೀಕರು ನೇರವಾಗಿ ನನ್ನನ್ನು ಭೇಟಿಯಾಗಬೇಕು ಎಂದು ಅವರು ಕೋರಿದರು.ಉಪ ನಿರೀಕ್ಷಕ ಸ್ವಾಮಿಗೌಡ, ಎಎಸ್ಐಗಳಾದ ಸುಬ್ರಮಣ್ಯ, ದೇವರಾಜು, ಶ್ರೀನಿವಾಸ್, ಮುಖ್ಯ ಪೇದೆಗಳಾದ ಪರಶುರಾಂ, ನಂಜುಂಡಸ್ವಾಮಿ, ಅನಿಲ್, ಸಂಜಯ್, ಹರೀಶ್ ಮತ್ತು ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ