ಕನ್ನಡಪ್ರಭ ವಾರ್ತೆ ಸರಗೂರುಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 1988-89ನೇ ಸಾಲಿನಲ್ಲಿ ಎಸೆಸ್ಸೆಲ್ಸಿ ಓದಿದ ವಿದ್ಯಾರ್ಥಿಗಳಿಂದ 35 ವರ್ಷಗಳ ನಂತರ ಗುರುವಂದನೆ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ಭಾನುವಾರ ಹಳೆಯ ವಿದ್ಯಾರ್ಥಿಗಳ ಸ್ನೇಹ ಬಳಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗುರುಗಳಿಗೆ ಪುಷ್ಪನಮನ ಸಲ್ಲಿಸಿ, ವೇದಿಕೆವೆರೆಗೂ ಭವ್ಯ ಸ್ವಾಗತ ನೀಡುವುದರ ಮೂಲಕ ವಿದ್ಯೆ ಕಲಿಸಿದ ಗುರುಗಳಿಗೆ ವಿದ್ಯಾರ್ಥಿಗಳು ಗೌರವ ಸಲ್ಲಿಸಿ ಬರಮಾಡಿಕೊಂಡರು. ನಂತರ ವಂದಿಸಿದರು.ತಾವು ಓದಿದ ಶಾಲೆಯ ದಿನಗಳನ್ನು ನೆನಪಿಸಿಕೊಂಡು ತಮ್ಮ ಉನ್ನತ ಶಿಕ್ಷಣ, ನೌಕರಿ ಪಡೆದ ಸಂಗತಿಗಳನ್ನು ಹಂಚಿಕೊಂಡರು.ಸಾನ್ನಿಧ್ಯ ವಹಿಸಿದ್ದ ಬಿಡುಗಲು ಪಡುವಲು ವಿರಕ್ತಮಠದ ಶ್ರೀ ಮಹದೇವಸ್ವಾಮೀಜಿ ಮಾತನಾಡಿ, ಪಾಠ ಹೇಳಿ, ಜ್ಞಾನಾರ್ಜನೆ ಮಾಡಿಸಿ, ಬದುಕಿಗೆ ಬೆಳಕಾದ ಪ್ರಾಥಮಿಕ, ಪ್ರೌಢಶಾಲಾ, ಪಿಯು ಶಿಕ್ಷಕರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಗುರುಗಳ ಸೇವೆಯನ್ನು ಸ್ಮರಿಸುವುದು ಮತ್ತು ಅವರಿಗೆ ಪ್ರತ್ಯಕ್ಷವಾಗಿ ಧನ್ಯತೆ ಸಮರ್ಪಣೆ ಮಾಡುವುದು ಸಾರ್ಥಕ ಕಾರ್ಯ. ಗುರುಗಳು ಕಲಿಸಿಕೊಟ್ಟ ದಾರಿಯಲ್ಲಿ ನಡೆದು ಜೀವನದಲ್ಲಿ ಸಾಧನೆ ಮಾಡಿದಾಗ ಮಾತ್ರ ಕಲಿಸಿದ ವಿದ್ಯೆ ಸಾರ್ಥಕವಾಗಲಿದೆ ಎಂದು ಹೇಳಿದರು.ಜಿಪಂ ಮಾಜಿ ಸದಸ್ಯ ಪಿ. ರವಿ ಮಾತನಾಡಿ, ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು 35 ವರ್ಷಗಳ ನಂತರ ಒಂದೆಡೆ ಸೇರಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಸಂತಸ ತಂದಿದೆ. ಪ್ರತಿಯೊಬ್ಬರೂ ಗುರು ಋಣ, ಪಿತೃ ಋಣವನ್ನು ಸಾಕಷ್ಟು ತೀರಿಸುವ ಕಾರ್ಯ ಮಾಡಬೇಕು. ಗುರುಗಳಿಂದ ಪಾಠ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿರುವುದು ಗುರುಗಳಿಗೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ ಎಂದು ಹೇಳಿದರು. ಗೌರವ ಸಮರ್ಪಣೆಪ್ರಾಥಮಿಕ, ಪ್ರೌಢಶಾಲಾ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಕಲಿಸಿದ ಸಿ.ಎಸ್. ಸುಧಾ, ಕೆ.ಎ. ಮಂಜುಳಾ, ಎಂ.ಎಸ್. ಮಂಗಳಗೌರಮ್ಮ, ಜಿ. ಗಿರಿಜಾ, ಗೀತಾರತ್ನ, ತಿಮ್ಮೆಗೌಡ, ಸಿ. ಜವರನಾಯಕ, ಪಿ. ಚಿಕ್ಕನಾಯಕ, ವಿ.ಜಿ. ಬಿದರಗುಂದಿ, ಎಂ. ನಾಗೇಂದ್ರ, ಎ. ಆನಂದಮೂರ್ತಿ, ಎ.ಎಲ್. ರಾಮನರಸಿಂಹ, ರಫಿಕ್ ಅಹಮದ್, ಸುಬ್ಬರಾಯಪ್ಪ, ಎಸ್.ಎನ್. ಸೋಮಣ್ಣ, ಎಚ್.ಎಲ್. ಮಹದೇವಪ್ಪ, ಸ.ಚ. ಮಹದೇವನಾಯಕ, ರಾಮಲಿಂಗಪ್ಪ, ಕೆ.ಟಿ. ಪ್ರಸನ್ನ, ರಾಮಚಂದ್ರ, ಗೋವಿಂದಯ್ಯ, ಜ್ಯೋತಿ ಅವರು ಶಿಕ್ಷಕರು, ಉಪನ್ಯಾಸಕರನ್ನು ಅಭಿನಂದಿಸಿ ನೆನಪಿನ ಕಾಣಿಕೆ ನೀಡಿದರು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗುರುಗಳು, ಅಂದು ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಲಾದ ಸಂಭಾಷಣೆ, ಪಾಠ ಕೇಳದ ವಿದ್ಯಾರ್ಥಿಗಳಿಗೆ ಬೈದುದನ್ನು ತಮ್ಮದೇ ಭಾಷೆಯಲ್ಲಿ ಹಂಚಿಕೊಂಡರು. 35 ವರ್ಷಗಳ ನಂತರ ಮಿಲನಗೊಂಡ ಸಹಪಾಠಿಗಳು ಹಳೆಯ ದಿನಗಳನ್ನು ಮೆಲುಕು ಹಾಕಿ ಸಂಭ್ರಮಿಸಿದ್ದು, ವಿಶೇಷವಾಗಿತ್ತು.ಹಳೆಯ ವಿದ್ಯಾರ್ಥಿಗಳಾದ ಜಿಪಂ ಮಾಜಿ ಸದಸ್ಯ ಪಿ. ರವಿ, ಬಾಬು, ಡಾ. ಸೋಮಣ್ಣ, ಡಾ.ಟಿ. ರವಿಕುಮಾರ್, ಕೃಷ್ಣಕುಮಾರ್, ಇದಾಯತ್ ಉಲ್ಲಾ , ಡಾ. ರಮೇಶ್, ಗೋವಿಂದರಾಜು, ರೇಖಾ, ರೇಣುಕಾ, ಚಂದ್ರಕುಮಾರ್, ಡಿವೈಎಸ್ಪಿ ರಾಜಣ್ಣ, ಬಿಇಒ ಮಹದೇವ್, ಮಹದೇವಶೆಟ್ಟಿ, ಪ್ರಸನ್ನ, ಎಸ್.ಆರ್. ಜಗದೀಶ್, ಕುಮಾರ್ ಸೇರಿದಂತೆ ಹಳೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇವರುಗಳ ಕುಟುಂಬದವರು ಸೇರಿದಂತೆ ಇನ್ನಿತರರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.ಈ ವೇಳೆ ಸೇರಿದ್ದ ಸ್ನೇಹಿತರುಗಳು ಹಳೆಯ ಶಾಲೆಗಳಲ್ಲಿ ಓದುತಿದ್ದ ತಮ್ಮ ತಮ್ಮ ಮೂವತ್ತು, ಮೂವತೈದು ವರ್ಷಗಳ ಹಿಂದೆ ಒಟ್ಟಾಗಿ ಜೊತೆಯಲ್ಲಿ ವ್ಯಾಸಂಗ ಮಾಡುತಿದ್ದ ನೆನಪುಗಳನ್ನು ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಪಡುವಲು ವಿರಕ್ತ ಮಠದ ಶ್ರೀ ಮಹದೇವ ಸ್ವಾಮಿಗಳು ಸಾನ್ನಿಧ್ಯ ವಹಿಸಬೇಕಾಗಿತ್ತು. ಆದರೆ ಈ ವೇಳೆ ಇವರು ನಮ್ಮ ಗುರುಗಳಾದ್ದರಿಂದ ನಾವು ಅವರಿಗೆ ಗೌರವ ಕೊಡುವುದು ಅವರ ಶಿಷ್ಯರಾದ ನಮ್ಮಗಳ ಕರ್ತವ್ಯ ಎಂದು ವೇದಿಕೆ ಮುಂಭಾಗ ಕುಳಿತಿದ್ದುದು ವಿಶೇಷವಾಗಿತ್ತು.