ಜ.೧೯ರಿಂದ ರಾಮ ಮಂದಿರದಲ್ಲಿ ದೇವತಾ ಕಾರ್ಯಕ್ರಮ ಆಯೋಜನೆ

KannadaprabhaNewsNetwork | Published : Jan 17, 2024 1:45 AM

ಸಾರಾಂಶ

ಉದಯಗಿರಿ ಶ್ರೀರಾಮಸೇವಾ ಸಮಿತಿ ವತಿಯಿಂದ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ಅಯೋಧ್ಯಾ ಶ್ರೀರಾಮಚಂದ್ರ ದೇವರ ಪ್ರತಿಷ್ಠಾಪನಾ ಪರ್ವದಿನದಂದು ಶ್ರೀಮಹಾಗಣಪತಿ, ಶ್ರೀಧಾನ್ಯಲಕ್ಷ್ಮೀ, ಶ್ರೀ ಲಕ್ಷ್ಮಣ ಹನುಮಂತ, ಶ್ರೀಸೀತಾರಾಮ ಚಂದ್ರದೇವರ ಬಿಂಬ ಪ್ರತಿಷ್ಠಾಪನೆ, ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ ಆಯೋಜನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಲೇಬರ್ ಕಾಲೋನಿ ಬಡಾವಣೆಯಲ್ಲಿರುವ ಉದಯಗಿರಿ ಶ್ರೀರಾಮಸೇವಾ ಸಮಿತಿ ವತಿಯಿಂದ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ಅಯೋಧ್ಯಾ ಶ್ರೀರಾಮಚಂದ್ರ ದೇವರ ಪ್ರತಿಷ್ಠಾಪನಾ ಪರ್ವದಿನದಂದು ಶ್ರೀಮಹಾಗಣಪತಿ, ಶ್ರೀಧಾನ್ಯಲಕ್ಷ್ಮೀ, ಶ್ರೀ ಲಕ್ಷ್ಮಣ ಹನುಮಂತ ಸಮೇತ ಶ್ರೀಸೀತಾರಾಮ ಚಂದ್ರದೇವರ ಬಿಂಬ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ ನಡೆಯಲಿದೆ ಎಂದು ನಗರಸಭಾ ಸದಸ್ಯ ನಾಗೇಶ್ ತಿಳಿಸಿದರು.

ಜ.೧೯ರಿಂದ ಪ್ರಾರಂಭಗೊಂಡು ಜ.೨೨ ರವರೆಗೆ ಪರ್ಯಂತ ಶ್ರೀಮಹಾಗಣಪತಿ, ಶ್ರೀಧಾನ್ಯಲಕ್ಷ್ಮಿ, ಶ್ರೀ ಲಕ್ಷ್ಮಣ, ಹನುಮತ್ಸಮೇತ ಶ್ರೀ ಸೀತಾ ರಾಮಚಂದ್ರ ದೇವರ ಪ್ರತಿಷ್ಠಾಪನೆ, ಅಷ್ಠಬಂಧ ಬ್ರಹ್ಮ ಕಲಶ ಮಹೋತ್ಸವ ವೇದಮೂರ್ತಿ ಗಣಪತಿಭಟ್ ನೇತೃತ್ವದಲ್ಲಿ ವಿಧಿ-ವಿಧಾನಗಳೊಂದಿಗೆ ನೆರವೇರಿಸಲಾಗುವುದು ಎಂದರು.

ಜ.೧೯ರ ಬೆಳಗ್ಗೆ ೯.೩೦ ರಿಂದ ಆಲಯ ಪರಿಗ್ರಹ, ಸಾಮೂಹಿಕ ದೇವತಾ ಪ್ರಾರ್ಥನೆ ಗುರು- ಗಣಪತಿ ಪೂಜೆ, ಋತ್ವಿಗ್‌ವರ್ಣನೆ, ಪಂಚಗವ್ಯ ಹವನ, ನಾಗದೇವರ ಸನ್ನಿಯಲ್ಲಿ ನವ ಕಳಶಾಭಿಷೇಕ, ಆಶ್ಲೇಷಬಲಿ ಪೂಜೆ. ಮಧ್ಯಾಹ್ನ ೧೨ ಕ್ಕೆ ಮಹಾ ಮಂಗಳಾರತಿ ತೀರ್ಥಪ್ರಸಾದ ವಿನಿಯೋಗ. ಸಂಜೆ ೫.೩೦ ರಿಂದ ವಾಸ್ತು ರಾಕ್ಷೋಘ್ನ ಹೋಮ, ವಾಸ್ತುಬಲಿ, ದಿಕ್ಪಾಲಕಬಲಿ, ವರಾಹ ಹರಿವಿಠ್ಠಲ ದಾಸರಿಂದ ಹನುಮದ್ವಿಲಾಸ ಪ್ರವಚನ ರಾತ್ರಿ ೮ ಗಂಟೆಗೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.

ಜ.೨೦ರಂದು ಬೆಳಗ್ಗೆ ೧೦.೩೦ಕ್ಕೆ ನಡೆಯಲಿರುವ ದಶಮಿ, ಮಂಟಪ ಸಂಸ್ಕಾರ, ಅಂಕುರರೋಪಣ, ಅಥರ್ವಶೀರ್ಷ ಮಹಾಗಣಪತಿ ಹೋಮ, ದುರ್ಗಾ ಹೋಮಗಳಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಹಲವು ಗಣ್ಯರು ಭಾಗವಹಿಸುವರು. ಸಂಜೆ ೫-೩೦ ರಿಂದ ಉದಕಶಾಂತಿ ರಾಕ್ಷೋಘ್ನ ಪಾರಾಯಣ. ರಾತ್ರಿ ೮ ಗಂಟೆಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.

ಜ.೨೧ರಂದು ಬೆಳಗ್ಗೆ ೧೦ರಿಂದ ವ್ಯಾಸರಾಜಮಠದ ಶ್ರೀ ಕೃಷ್ಣ ಭಜನಾ ಮಂಡಳಿಯಿಂದ ಸಂಕೀರ್ತನಾ ಕಾರ್ಯಕ್ರಮ. ೧೧.೩೦ ರಿಂದ ಶ್ರೀ ಸಮೀರಾಚಾರ್ ಇವರಿಂದ ಶ್ರೀ ರಾಮದೇವರ ವ್ಯಕ್ತಿತ್ವ ಪ್ರವಚನ ಸಂಜೆ ೫.೩೦ ರಿಂದ ಬಿಂಬಾಧಿವಾಸ, ಚಕ್ರಾಮಂಡಲ ಪೂಜೆ ಕಳಶ ಸ್ಥಾಪನೆ, ಮಹಾ ಮಂಗಳಾರತಿ ನಡೆಯಲಿದೆ ಎಂದರು.

ಜ.೨೨ರಂದು ಬೆಳಗ್ಗೆ ೫-೩೦ ರಿಂದ ಅಧಿವಾಸ ಹೋಮ, ಪ್ರತಿಷ್ಠಾಪನಾಂಗ ಹೋಮ, ೧೦-೩೦ ಕ್ಕೆ ಸಪರಿವಾರ ಸಮೇತ ಶ್ರೀ ರಾಮದೇವರ ಪ್ರತಿಷ್ಠಾಪನೆ ನೇರವೇರಿಸಲಾಗುತ್ತದೆ. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಸಂಸದೆ ಸುಮಲತಾ ಅಂಬರೀಷ್, ಜಿಲ್ಲೆಯ ಶಾಸಕರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಬಳಿಕ ಶ್ರೀರಾಮತಾರಕ ಹೋಮ, ಗುರು ಪ್ರಸಾದಾಚಾರ್ ಇವರಿಂದ ಅಯೋಧ್ಯಾ ಕ್ಷೇತ್ರ ಮಹಾತ್ಮೆ ಪ್ರವಚನ, ಫಲಪಂಚಾಮೃತ ಸಹಿತ ಮಹಾಕುಂಬಾಭಿಷೇಕ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.

ಸಮಿತಿಯ ಮಾದಯ್ಯ, ತಿಮ್ಮಯ್ಯ, ನಂಜುಂಡಸ್ವಾಮಿ, ಚಂದ್ರಶೇಖರ್, ರಮೇಶ್, ಮನು ಗೋಷ್ಠಿಯಲ್ಲಿದ್ದರು.

Share this article