ಸಂಚಾರಿ ಇ-ಚಲನ್ ದಾಖಲಾದ ಪ್ರಕರಣಗಳಿಗೆ ಶೇ.50 ರಿಯಾಯಿತಿ

KannadaprabhaNewsNetwork |  
Published : Jun 09, 2026, 01:15 AM IST
9 | Kannada Prabha

ಸಾರಾಂಶ

ಶೇ.50 ರಷ್ಟು ರಿಯಾಯಿತಿಯನ್ನು ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ನೀಡಲಾಗಿದ್ದು, ಸಾರ್ವಜನಿಕರು ಜೂನ್ 21 ರಿಂದ ಜುಲೈ 10 ರವರೆಗೆ ಹಣ ಪಾವತಿಸಬಹುದಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯದಲ್ಲಿ ಮೇ 2026ರ ಮೊದಲು ಪೊಲೀಸ್ ಇಲಾಖೆಯಲ್ಲಿ ದಾಖಲಾಗಿರುವ ಸಂಚಾರಿ ಇ-ಚಲನ್ ಪ್ರಕರಣಗಳು ಹಾಗೂ ಸಾರಿಗೆ ಇಲಾಖೆಯಲ್ಲಿ 1991 ರಿಂದ 2022ರ ಅವಧಿಯಲ್ಲಿ ಪ್ರಕರಣ ದಾಖಲಾಗಿರುವ ಪ್ರಕರಣಗಳ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಉಷಾರಾಣಿ ತಿಳಿಸಿದರು.ಜಯನಗರದ ಹೊಸ ನ್ಯಾಯಾಲಯ ಸಂಕೀರ್ಣದ ವಿಡಿಯೋ ಕಾನ್ಫರೆನ್ಸ್ ಹಾಲ್ ನಲ್ಲಿ ಸೋಮವಾರ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.50 ರಷ್ಟು ರಿಯಾಯಿತಿಯನ್ನು ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ನೀಡಲಾಗಿದ್ದು, ಸಾರ್ವಜನಿಕರು ಜೂನ್ 21 ರಿಂದ ಜುಲೈ 10 ರವರೆಗೆ ಹಣ ಪಾವತಿಸಬಹುದಾಗಿದೆ ಎಂದರು.ಮೈಸೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ 1,04,18,480 ಪ್ರಕರಣ- 458,04,01,700 ರೂ. ದಂಡ ಪಾವತಿಗೆ ಬಾಕಿ ಇರುತ್ತದೆ ಹಾಗೂ ಮೈಸೂರು ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 36,73,737 ಪ್ರಕರಣಗಳಿದ್ದು ದಂಡ ಪಾವತಿಗೆ 184,05,74,500 ರೂ. ಬಾಕಿ ಇರುತ್ತದೆ. ಒಟ್ಟಾರೆ ಜಿಲ್ಲೆಯಲ್ಲಿ 1,40,92,217 ಪ್ರಕರಣಗಳು 642, 09,76,200 ರೂ. ದಂಡ ವಸೂಲಿಗೆ ಬಾಕಿ ಇದೆ ಎಂದು ಅವರು ವಿವರಿಸಿದರು.ಪ್ರಾದೇಶಿಕ ಸಾರಿಗೆ ಇಲಾಖೆ ಪೂರ್ವದಲ್ಲಿ 792 ಪ್ರಕರಣಗಳು- 24,12,000 ರೂ. ದಂಡ, ಹುಣಸೂರು ವಿಭಾಗದಲ್ಲಿ 864 ಪ್ರಕರಣಗಳು 30,99,400 ರೂ. ದಂಡ ಸೇರಿದಂತೆ ಒಟ್ಟು 1656 ಪ್ರಕರಣಗಳಲ್ಲಿ 55,11,400 ರೂ. ದಂಡ ವಸೂಲಿಗೆ ಬಾಕಿ ಇದೆ ಎಂದರು.ಸಾರ್ವಜನಿಕರಿಗೆ ರಿಯಾಯಿತಿಯ ಬಗ್ಗೆ ಹಚ್ಚಿನ ಮಾಹಿತಿ ನೀಡಲು ಯೋಜನೆ ರೂಪಿಸಿ ಜೂನ್ 21 ರಿಂದ ಜುಲೈ 10 ರವರೆಗೆ ದಂಡವನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಿ. ಹಳೆ ಮತ್ತು ಹೊಸ ನ್ಯಾಯಾಲಯದ ಸಂಕೀರ್ಣಗಳಲ್ಲಿ ದಂಡ ಸಂಗ್ರಹಿಸಲು ಬೂತ್‌ತೆರೆಯುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, 2025ನೇ ಸಾಲಿನಲ್ಲಿ ನೀಡಿದ ರಿಯಾಯಿತಿ ಸಂದರ್ಭದಲ್ಲಿ 1,43,00,000 ರೂ. ಹಾಗೂ 43,80,000 ರೂ. ದಂಡ ಸಂಗ್ರಹಿಸಲಾಗಿದೆ. ಈ ಬಾರಿ ಬೀಟ್ ಪೊಲೀಸ್ ಹಾಗೂ ಸಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿ ದಂಡ ಸಂಗ್ರಹಿಸಲು ಕ್ರಮ ವಹಿಸಲಾಗುವುದು ಎಂದರು.ನಗರ ಸಂಚಾರ ಮತ್ತು ಅಪರಾಧ ಡಿಸಿಪಿ ಕೆ.ಎಸ್. ಸುಂದರ್ ರಾಜ್ ಮಾತನಾಡಿ, ನಗರದಲ್ಲಿ 18 ಪೊಲೀಸ್ ಠಾಣೆ ಹಾಗೂ 5 ಸಂಚಾರ ಪೊಲೀಸ್ ಠಾಣೆಗಳಲ್ಲಿ ದಂಡ ಸಂಗ್ರಹಿಸಲು ಕ್ರಮ ವಹಿಸಲಾಗುವುದು. ಅವಶ್ಯವಿದ್ದಲ್ಲಿ ಹೆಚ್ಚುವರಿ ಬೂತ್ ಗಳನ್ನು ತೆರೆದು ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಾಗರಾಜ ಸಿದ್ದಪ್ಪ ಅಂಕನದೊಡ್ಡಿ, ವಕೀಲರ ಸಂಘದ ಅಧ್ಯಕ್ಷ ಎಸ್. ಲೋಕೇಶ್, ನಗರ ಸಂಚಾರ ಉಪ ವಿಭಾಗದ ಎಸಿಪಿ ಶಿವಶಂಕರ್, ಹೆಚ್ಚುವರಿ ಎಸ್ಪಿ ಸಿ. ಮಲ್ಲಿಕ್ ಮೊದಲಾದವರು ಇದ್ದರು.----ಬಾಕ್ಸ್... ಸುಪ್ರೀಂಕೋರ್ಟ್ ನಿಂದ ವಿಶೇಷ ಲೋಕ್ ಅದಾಲತ್ಸುಪ್ರೀಂಕೋರ್ಟ್ ವಿಶೇಷ ಲೋಕ್ ಅದಾಲತ್ ಅನ್ನು ಆಗಸ್ಟ್ 21 ರಿಂದ 23 ರವರೆಗೆ ನಡೆಸಲು ಉದ್ದೇಶಿಸಿದ್ದು, ಪಕ್ಷಕಾರರುಗಳಿಗೆ ಎದುರುದಾರರ ಜೊತೆ ಪೂರ್ವಭಾವಿ ಲೋಕ್ ಅದಾಲತ್ ಅನ್ನು ನಡೆಸಲು ವಿಡಿಯೋ ಕಾನ್ಸರೆನ್ಸ್ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಧೀಶರಾದ ಉಷಾರಾಣಿ ತಿಳಿಸಿದರು.ಎಲ್ಲಾ ಪಕ್ಷಕಾರರು ನೇರವಾಗಿ ಅಥವಾ ವರ್ಚೂವಲ್ ಮೂಲಕ ಸುಪ್ರೀಂಕೋರ್ಟ್ ನಡೆಸುವ ಪೂರ್ವಭಾವಿ ಲೋಕ್ ಅದಾಲತ್‌ ನಲ್ಲಿ ಭಾಗವಹಿಸಲು ಅನುಕೂಲ ಮಾಡಲಾಗಿದೆ. ಈ ವಿಶೇಷ ಲೋಕ ಅದಾಲತ್‌ ನಲ್ಲಿ ರಾಜೀ ಸಂಧಾನಕ್ಕೆ ಗುರುತಿಸಲಾದ ಪ್ರಕರಣಗಳ ಪಟ್ಟಿಯನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವೆಬ್‌ ಸೈಟ್‌ ನಲ್ಲಿ ವರದಿಯಾಗಿರುತ್ತದೆ ಎಂದರು. ಎಲ್ಲಾ ಪಕ್ಷಕಾರರುಗಳು ತಮ್ಮ ವಾಸಸ್ಥಳಗಳ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳಲ್ಲಿ ತೆರೆಯಲಾಗಿರುವ ವಿಡಿಯೋ ಕಾನ್ಸರೆನ್ಸ್ ಕೇಂದ್ರಗಳಿಗೆ ಭೇಟಿ ಕೊಟ್ಟು ಆಗಸ್ಟ್ 21 ರಿಂದ 23 ರವರೆಗೆ ನಡೆಯುವ ವಿಶೇಷ ಲೋಕ್ ಅದಾಲತ್‌ ನಲ್ಲಿ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಅವರು ಹೇಳಿದರು.ಈ ಕುರಿತು ಗೂಗಲ್ ಫಾರ್ಮ ಲಭ್ಯವಿದ್ದು, ಅದನ್ನು ಜುಲೈ 31 ಒಳಗಾಗಿ ಸಂಬಂಧಪಟ್ಟ ವಕೀಲರು ಅಥವಾ ಪಕ್ಷಗಾರರು ಗೂಗಲ್ ಫಾರಂ ಭರ್ತಿ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 15100 ಮತ್ತು WWW.kslsa.kar.nic. ವೆಬ್ ಸೈಟ್ ಅಥವಾ ಆಯಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಮತ್ತು ತಾಲೂಕು ಕಾನೂನು ಸೇವಾ ಸಮಿತಿಗಳ ಸದಸ್ಯ ಕಾರ್ಯದರ್ಶಿಯವರನ್ನು ಸಂಪರ್ಕಿಸಬಹುದೆಂದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತ್ಯಾಧುನಿಕ ಜಿಲ್ಲಾಸ್ಪತ್ರೆ 18 ತಿಂಗಳಲ್ಲಿ ಸೇವೆಗೆ ಲಭ್ಯ
2028ಕ್ಕೆ ಶಿಡ್ಲಘಟ್ಟದಲ್ಲಿ ಬಿಜೆಪಿ ಅಭ್ಯರ್ಥಿಯೇ ಎಂಎಲ್‌ಎ: ಸೀಕಲ್