ನಗರಕ್ಕೆಎಂಡಿಎ ಸಾವಿರಾರು ಕೋಟಿ ಹಗರಣವನ್ನು ಸಿಬಿಐ ತನಿಖೆ ಆಗ್ರಹ

KannadaprabhaNewsNetwork | Published : Jul 6, 2024 12:50 AM

ಸಾರಾಂಶ

ಮೈಸೂರಿನ ಬಡ ಜನರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ಅನಾನುಕೂಲಸ್ಥರಿಗೆ ಕೈಗೆಟುವ ದರದಲ್ಲಿ ನಿವೇಶನಗಳು ಸಿಗಲೆಂದು ನಾಲ್ವಡಿ ಕೃಷ್ಣರಾಜ ಒಡೆಯರು ಎಂಡಿಎ ಸ್ಥಾಪಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಎಂಡಿಎ) ನಡೆದಿರುವ ಸಾವಿರಾರು ಕೋಟಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆಯವರು ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟಿಸಿದರು.

ಮೈಸೂರಿನ ಬಡ ಜನರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ಅನಾನುಕೂಲಸ್ಥರಿಗೆ ಕೈಗೆಟುವ ದರದಲ್ಲಿ ನಿವೇಶನಗಳು ಸಿಗಲೆಂದು ನಾಲ್ವಡಿ ಕೃಷ್ಣರಾಜ ಒಡೆಯರು ಎಂಡಿಎ ಸ್ಥಾಪಿಸಿದರು. ಆದರೆ, ಈಗ ಎಂಡಿಎ ರಿಯಲ್ ಎಸ್ಟೇಟ್ ಮಾಫಿಯಾಗಳ ಹಿಡಿತದಲ್ಲಿದೆ. ಶೇ.90 ಭಾಗದ ಎಂಡಿಎ ನಿವೇಶನಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳೇ ಕಬಳಿಸಿದ್ದಾರೆ. ಸಾರ್ವಜನಿಕರು ಹಲವಾರು ವರ್ಷಗಳಿಂದ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದರೂ ನಿವೇಶನ ಸಿಕ್ಕಿಲ್ಲ. ಬದಲಿಗೆ ನಿವೇಶನಗಳು ಬಲಾಢ್ಯರ ಪಾಲಾಗುತ್ತಿವೆ ಎಂದು ಅವರು ಆರೋಪಿಸಿದರು.

ಈ ಹಿಂದೆ ಎಂಡಿಎ ಆಯುಕ್ತರಾಗಿದ್ದ ದಿನೇಶ್ ಕುಮಾರ್ ಅವರನ್ನು 2- 3 ಬಾರಿ ವರ್ಗಾಯಿಸಿದ್ದರೂ ಎಂಡಿಎಯಲ್ಲಿ ಲೂಟಿ ಮಾಡಲು ಇಲ್ಲಿಯೇ ಉಳಿದಿದ್ದರು. ಜೊತೆಗೆ ಜಿಲ್ಲಾಧಿಕಾರಿ 15 ಬಾರಿ ಹಗರಣದ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದರೂ ಸರಿಯಾಗಿ ಸ್ಪಂದಿಸಲಿಲ್ಲ. ಇದರ ಪರಿಣಾಮ ಬಹುದೊಡ್ಡ ಹಗರಣ ನಡೆದಿದೆ ಎಂದು ಅವರು ದೂರಿದರು.

ಸಾವಿರಾರು ಕೋಟಿ ಹಗರಣ ನಡೆದಿದ್ದರೂ ಆಯುಕ್ತ ದಿನೇಶ್ ಕುಮಾರ್ ಮೇಲೆ ಕ್ರಮ ಕೈಗೊಳ್ಳದೆ, ಬಂಧಿಸಿ ವಿಚಾರಣೆಗೊಳಪಡಿಸದೆ, ಏನೂ ಆಗಿಲ್ಲ ಎಂಬಂತೆ ಸುಲಭವಾಗಿ ಬೇರೆಡೆಗೆ ವರ್ಗಾವಣೆ ಮಾಡಿರುವುದು ಅಕ್ಷಮ್ಯ ಅಪರಾಧ. ಇದು ಸರ್ಕಾರದ ವೈಫಲ್ಯ ಹಾಗೂ ಸರ್ಕಾರವೇ ನೇರವಾಗಿ ಭಾಗಿಯಾಗಿರುವುದನ್ನು ಎತ್ತಿ ತೋರಿಸುತ್ತದೆ. ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರವೇ ಯತ್ನಿಸುತ್ತಿದೆ. ಹೀಗಾಗಿ, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮುಖಂಡರಾದ ಪ್ರಭುಶಂಕರ್, ಕೃಷ್ಣಪ್ಪ, ಸುರೇಶ್, ಪ್ರಜೀಶ್, ಶಿವಲಿಂಗಯ್ಯ, ಶಾಂತರಾಜೇ ಅರಸ್, ನೇಹಾ, ಮಂಜುಳಾ, ಕೃಷ್ಣೇಗೌಡ, ಶಿವಕುಮಾರ್, ನಾಗಣ್ಣ, ಕುಮಾರ್ ಗೌಡ, ಭಾಗ್ಯಮ್ಮ, ನಾರಾಯಣಗೌಡ, ಅನಿಲ್, ಹರೀಶ್, ರಾಮಕೃಷ್ಣೇಗೌಡ, ಗಿರೀಶ್, ಸೋಮಶೇಖರ್, ಪರಿಸರ ಚಂದ್ರು, ರಾಧಾಕೃಷ್ಣ, ಮಹದೇವಸ್ವಾಮಿ, ನಂದಕುಮಾರ್, ಅಕ್ಬರ್ ಮೊದಲಾದವರು ಇದ್ದರು.

Share this article