ಕೊಪ್ಪಳದಿಂದ ಮೈಸೂರಿಗೆ: ದಸರಾ ಪರಂಪರೆಯ ಮಹಾ ಪಯಣ

KannadaprabhaNewsNetwork |  
Published : Oct 10, 2026, 02:45 AM IST
ಚಿತ್ರ 9ಬಿಡಿಆರ್50 | Kannada Prabha

ಸಾರಾಂಶ

ವಿಶ್ವವಿಖ್ಯಾತ ಮೈಸೂರು ದಸರಾವನ್ನು ಕೊಪ್ಪಳದ ಸಂಸ್ಥಾನ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸುತ್ತಿರುವುದು, ಹೇಮಗುಡ್ಡದಿಂದ ಮೈಸೂರಿನ ಅರಮನೆ ಅಂಗಳದವರೆಗೆ ಹಬ್ಬಿರುವ ದಸರಾ ಪರಂಪರೆಯ ಐತಿಹಾಸಿಕ ನಂಟಿನ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಕುಮಾರರಾಮನ ಕಾಲದಿಂದ ವಿಜಯನಗರ ಸಾಮ್ರಾಜ್ಯದ ಮಹಾನವಮಿ ಉತ್ಸವದ ಮೂಲಕ ಮೈಸೂರು ಒಡೆಯರ ದಸರಾವರೆಗೆ ಈ ಪರಂಪರೆ ಬೆಳೆದುಬಂದಿದೆ ಎಂಬ ಸ್ಥಳೀಯ ಇತಿಹಾಸ ಮತ್ತು ಜನಪದ ಕಥನಗಳು ಕುತೂಹಲ ಮೂಡಿಸಿವೆ.

ಸೋಮರಡ್ಡಿ ಅಳವಂಡಿ

ವಿಶ್ವವಿಖ್ಯಾತ ಮೈಸೂರು ದಸರಾವನ್ನು ಕೊಪ್ಪಳದ ಸಂಸ್ಥಾನ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸುತ್ತಿರುವುದು, ಹೇಮಗುಡ್ಡದಿಂದ ಮೈಸೂರಿನ ಅರಮನೆ ಅಂಗಳದವರೆಗೆ ಹಬ್ಬಿರುವ ದಸರಾ ಪರಂಪರೆಯ ಐತಿಹಾಸಿಕ ನಂಟಿನ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಕುಮಾರರಾಮನ ಕಾಲದಿಂದ ವಿಜಯನಗರ ಸಾಮ್ರಾಜ್ಯದ ಮಹಾನವಮಿ ಉತ್ಸವದ ಮೂಲಕ ಮೈಸೂರು ಒಡೆಯರ ದಸರಾವರೆಗೆ ಈ ಪರಂಪರೆ ಬೆಳೆದುಬಂದಿದೆ ಎಂಬ ಸ್ಥಳೀಯ ಇತಿಹಾಸ ಮತ್ತು ಜನಪದ ಕಥನಗಳು ಕುತೂಹಲ ಮೂಡಿಸಿವೆ.ಕುಮಾರರಾಮನ ಕಾಲದ ದಸರಾ13ನೇ ಶತಮಾನದಲ್ಲಿ ಕೊಪ್ಪಳ ಜಿಲ್ಲೆಯ ಆನೆಗೊಂದಿ ಮತ್ತು ಕುಮ್ಮಟದುರ್ಗ ಪ್ರದೇಶಗಳಲ್ಲಿ ಆಳ್ವಿಕೆ ನಡೆಸಿದ ಕಂಪಿಲರಾಯನ ಮಗ ಕುಮಾರರಾಮ, ತನ್ನ ಅಜ್ಜ ಸಿಂಗನಾಯಕನ ಕಾಲದ ಅಂಬಾರಿ ಮತ್ತು ರತ್ನಖಚಿತ ಸಿಂಹಾಸನವನ್ನು ಕುಮ್ಮಟದುರ್ಗಕ್ಕೆ ತಂದು, ಹೇಮಗುಡ್ಡದಲ್ಲಿ ದುರ್ಗಾಪರಮೇಶ್ವರಿಯನ್ನು ಪ್ರತಿಷ್ಠಾಪಿಸಿ ದಸರಾ ಆಚರಣೆಗೆ ಚಾಲನೆ ನೀಡಿದನೆಂಬ ಪ್ರತೀತಿ ಇದೆ.ತುಂಗಭದ್ರಾ ನದಿಯಿಂದ ಕಾಲುವೆಗಳನ್ನು ನಿರ್ಮಿಸಿ ಕೃಷಿಗೆ ಉತ್ತೇಜನ ನೀಡಿದ, ದೆಹಲಿ ಸುಲ್ತಾನರ ವಿರುದ್ಧ ಹೋರಾಡಿದ ಕುಮಾರರಾಮನ ಕಾಲದಲ್ಲಿ ರಾಜ್ಯ ಸಮೃದ್ಧವಾಗಿತ್ತು ಎಂಬುದು ಸ್ಥಳೀಯ ಪರಂಪರೆಯಲ್ಲಿನ ಉಲ್ಲೇಖ. ಸ್ತ್ರೀಯರೊಂದಿಗೆ ಯುದ್ಧ ಮಾಡಬಾರದೆಂದು ಶಪಥ ಮಾಡಿದ್ದ ಕುಮಾರರಾಮನನ್ನು, ಈ ಸಂಗತಿಯನ್ನು ಅರಿತಿದ್ದ ಮಹಮ್ಮದ್ ಬಿನ್ ತುಘಲಕ್ ಮಾತಂಗಿಯನ್ನು ಮುಂದಿಟ್ಟುಕೊಂಡು ಸೋಲಿಸಿದನೆಂಬ ಕಥನವೂ ಜನಪದದಲ್ಲಿ ಪ್ರಚಲಿತದಲ್ಲಿದೆ.ವಿಜಯನಗರದ ಮಹಾನವಮಿ ವೈಭವಕುಮಾರರಾಮನ ಸಾಮ್ರಾಜ್ಯದ ಪತನದ ಬಳಿಕ ಹಕ್ಕ-ಬುಕ್ಕರು ಅಂಬಾರಿ ಮತ್ತು ಸಿಂಹಾಸನವನ್ನು ಗುಪ್ತವಾಗಿ ಹೂತಿಟ್ಟರು. ನಂತರ ಅವುಗಳನ್ನು ಹೊರತೆಗೆದು ಆನೆಗೊಂದಿಗೆ ಸಾಗಿಸಿ, 1336ರಲ್ಲಿ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದರು ಎಂಬ ಪ್ರತೀತಿ ಇದೆ. ಯುದ್ಧಕ್ಕೆ ತೆರಳುವ ಮುನ್ನ ಮತ್ತು ವಿಜಯದ ಬಳಿಕ ದುರ್ಗಾಪರಮೇಶ್ವರಿಯ ಆರಾಧನೆ ನಡೆಸುವ ಸಂಪ್ರದಾಯವೂ ಈ ಪರಂಪರೆಯ ಭಾಗವಾಗಿತ್ತು ಎನ್ನಲಾಗುತ್ತದೆ.ವಿಜಯನಗರ ಸಾಮ್ರಾಜ್ಯದಲ್ಲಿ ದಸರಾ ಆಚರಣೆ ರಾಜವೈಭವದ ಸಂಕೇತವಾಗಿ ಬೆಳೆದಿತು. ವಿಶೇಷವಾಗಿ ಶ್ರೀಕೃಷ್ಣದೇವರಾಯನ ಕಾಲದಲ್ಲಿ ಹಂಪಿಯ ಮಹಾನವಮಿ ದಿಬ್ಬದಲ್ಲಿ ಒಂಬತ್ತು ದಿನಗಳ ಕಾಲ ದೇವಿಯ ಆರಾಧನೆ, ಅಂಬಾರಿ ಮೆರವಣಿಗೆ, ರಾಜದರ್ಬಾರ್ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿದ್ದವು. ರತ್ನಖಚಿತ ಸಿಂಹಾಸನದಲ್ಲಿ ಕುಳಿತು ರಾಜರು ದರ್ಬಾರ್ ನಡೆಸುತ್ತಿದ್ದರು. ಸಾಮ್ರಾಜ್ಯದ ವಿವಿಧ ಭಾಗಗಳ ಜನರಷ್ಟೇ ಅಲ್ಲದೆ, ವಿದೇಶಿ ಪ್ರವಾಸಿಗರೂ ಈ ಉತ್ಸವದಲ್ಲಿ ಭಾಗವಹಿಸಿದ್ದರೆಂಬ ಉಲ್ಲೇಖಗಳು ಐತಿಹಾಸಿಕ ದಾಖಲೆಗಳಲ್ಲಿವೆ.ಮೈಸೂರಿಗೆ ಬಂದ ದಸರಾ ಪರಂಪರೆ1565ರ ತಾಳಿಕೋಟೆ ಯುದ್ಧದ ಬಳಿಕ ವಿಜಯನಗರ ಸಾಮ್ರಾಜ್ಯ ದುರ್ಬಲಗೊಂಡಿತು. ಅಳಿಯ ರಾಮರಾಯನ ಸಾವಿನ ನಂತರ ರಾಜಧಾನಿ ಪೆನುಕೊಂಡ ಸೇರಿದಂತೆ ವಿವಿಧ ಪ್ರದೇಶಗಳಿಗೆ ಸ್ಥಳಾಂತರಗೊಂಡಿತು. ಈ ರಾಜಕೀಯ ಬದಲಾವಣೆಗಳ ನಡುವೆ ಅರಮನೆಯ ಸಂಪ್ರದಾಯಗಳು ಮತ್ತು ಧಾರ್ಮಿಕ ಆಚರಣೆಗಳು ಬೇರೆ ಪ್ರದೇಶಗಳಿಗೆ ಹರಡಿದವು.ವಿಜಯನಗರದ ಅಂಬಾರಿ ಮತ್ತು ಸಿಂಹಾಸನಗಳು ಶ್ರೀರಂಗಪಟ್ಟಣದ ಮೂಲಕ ಮೈಸೂರಿಗೆ ಬಂದವು ಎಂಬ ಪ್ರತೀತಿಯಿದೆ. 1610ರಲ್ಲಿ ರಾಜಾ ಒಡೆಯರು ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆಗೆ ವಿಶೇಷ ವೈಭವ ನೀಡಿದರು. ಬಳಿಕ ಮೈಸೂರು ಒಡೆಯರ ಆಳ್ವಿಕೆಯಲ್ಲಿ ದಸರಾ ಅರಮನೆಯ ಪ್ರಮುಖ ಉತ್ಸವವಾಗಿ ಬೆಳೆದು ವಿಶ್ವವಿಖ್ಯಾತಿ ಪಡೆಯಿತು. ರಾಜಾಡಳಿತ ಅಂತ್ಯಗೊಂಡ ನಂತರವೂ ಒಡೆಯರ ಕುಟುಂಬದ ಸಾಂಕೇತಿಕ ರಾಜದರ್ಬಾರ್ ಸೇರಿದಂತೆ ಸಂಪ್ರದಾಯಗಳು ಮುಂದುವರಿದಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಸಹಕಾರದೊಂದಿಗೆ ಉತ್ಸವ ಮತ್ತಷ್ಟು ವಿಸ್ತಾರಗೊಂಡಿದೆ. ದಸರಾ ಆಚರಣೆಯ ಕಲಾಪ್ರಕಾರಗಳಿಗೆ ಸಂಬಂಧಿಸಿದಂತೆ 2008ರಲ್ಲಿ ಯುನೆಸ್ಕೋ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಮಾನ್ಯತೆ ನೀಡಿದೆ ಎಂಬ ಉಲ್ಲೇಖವೂ ಕಂಡುಬರುತ್ತದೆ.ಹೇಮಗುಡ್ಡದಿಂದ ಮೈಸೂರಿನವರೆಗೆ ಅಂಬಾರಿ ಮತ್ತು ಸಿಂಹಾಸನಗಳ ಪರಂಪರೆ ಸಾಗಿಬಂದಿದೆ ಎಂಬ ಕಥನಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಸಂಶೋಧನೆ ಅಗತ್ಯವಿದೆ. ಶಾಸನಗಳು, ಜನಪದ ಕಥನಗಳು ಮತ್ತು ಲಭ್ಯವಿರುವ ಐತಿಹಾಸಿಕ ದಾಖಲೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿದರೆ ಕೊಪ್ಪಳದ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಮತ್ತಷ್ಟು ಸ್ಪಷ್ಟಪಡಿಸಬಹುದು. ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ದಸರಾ ಉದ್ಘಾಟಿಸುತ್ತಿರುವ ಈ ಸಂದರ್ಭದಲ್ಲಿ ಆ ಇತಿಹಾಸದ ಹುಡುಕಾಟಕ್ಕೆ ಪ್ರಸ್ತುತತೆ ದೊರೆತಿದೆ

ಬಾಕ್ಸ್: ಮೈಸೂರು ದಸರಾ ಉದ್ಘಾಟಿಸಲಿರುವ ಗವಿಸಿದ್ದೇಶ್ವರ ಶ್ರೀಗಳುಕೊಪ್ಪಳದ ಸಂಸ್ಥಾನ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಅಕ್ಟೋಬರ್ 11ರಂದು ನಾಡದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಮೈಸೂರು ದಸರಾವನ್ನು ಉದ್ಘಾಟಿಸಲಿದ್ದಾರೆ.1977ರಲ್ಲಿ ಕಲಬುರಗಿ ಜಿಲ್ಲೆಯ ಹಾಗರಗುಂಡಗಿ ಗ್ರಾಮದಲ್ಲಿ ಜನಿಸಿದ ಶ್ರೀಗಳ ಪೂರ್ವಾಶ್ರಮದ ಹೆಸರು ಪರ್ವತಯ್ಯ ಹಿರೇಮಠ. ಕುಟುಂಬದ ಆರ್ಥಿಕ ಸಂಕಷ್ಟದಿಂದ ಶಿಕ್ಷಣಕ್ಕೆ ಅಡಚಣೆಯಾದಾಗ ವಿಜಯಪುರದ ತಮದಡ್ಡಿ ಮಠದ ಶ್ರೀ ಶಿವಶಂಕರ ಸ್ವಾಮೀಜಿಗಳ ನೆರವಿನಿಂದ ಕೊಪ್ಪಳದ ಗವಿಮಠಕ್ಕೆ ಬಂದರು. ಅಂದಿನ ಪೀಠಾಧಿಪತಿ ಶ್ರೀ ಶಿವಶಾಂತವೀರ ಮಹಾಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಶಿಕ್ಷಣ ಮತ್ತು ಮಠದ ಸೇವೆಯಲ್ಲಿ ತೊಡಗಿಸಿಕೊಂಡರು.ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅವರು, ಪುಣೆ ಮತ್ತು ತಿರುಪತಿಯಲ್ಲಿ ತತ್ವಶಾಸ್ತ್ರ, ಸಂಸ್ಕೃತ ಹಾಗೂ ಆಂಗ್ಲ ಭಾಷೆಗಳಲ್ಲಿ ಉನ್ನತ ಅಧ್ಯಯನ ನಡೆಸಿದರು. ಶ್ರೀ ಶಿವಶಾಂತವೀರ ಮಹಾಸ್ವಾಮೀಜಿಗಳ ಇಚ್ಛೆಯಂತೆ 2002ರ ಡಿಸೆಂಬರ್ 13ರಂದು ಪೀಠಾಧಿಕಾರ ಸ್ವೀಕರಿಸಿದರು.ಗವಿಮಠದ ಜಾತ್ರೆಯನ್ನು ಧಾರ್ಮಿಕ ಆಚರಣೆಯ ಜೊತೆಗೆ ಸಾಂಸ್ಕೃತಿಕ, ಕ್ರೀಡಾ ಮತ್ತು ಸಾಮಾಜಿಕ ಜಾಗೃತಿಯ ವೇದಿಕೆಯನ್ನಾಗಿ ರೂಪಿಸಿದ್ದಾರೆ. ಲಕ್ಷಾಂತರ ಭಕ್ತರಿಗೆ ಮಹಾದಾಸೋಹದ ವ್ಯವಸ್ಥೆ ಕಲ್ಪಿಸಿ ಅನ್ನದಾಸೋಹದ ಪರಂಪರೆಯನ್ನು ವಿಸ್ತರಿಸಿದ್ದಾರೆ. ಗಿಡ ನೆಡುವ ಅಭಿಯಾನ, ಹಿರೇಹಳ್ಳದ ಪುನಶ್ಚೇತನ, ಜಲಸಂರಕ್ಷಣೆ ಮತ್ತು ಜಲದೀಕ್ಷೆಯ ಮೂಲಕ ಪರಿಸರ ಜಾಗೃತಿಗೂ ಒತ್ತು ನೀಡಿದ್ದಾರೆ.ಮಹಿಳಾ ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ವಿಶೇಷ ಚೇತನರ ಕಲ್ಯಾಣ, ಬಾಲ್ಯವಿವಾಹ ವಿರೋಧಿ ಜಾಗೃತಿ ಹಾಗೂ ಯುವಜನರ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಿದ್ದು, ಇತ್ತೀಚೆಗೆ ಕೊಪ್ಪಳ ತಾಲೂಕಿನ ಕೋಳೂರು ಗ್ರಾಮದ ಬಳಿ ವಿದ್ಯಾರ್ಥಿನಿಯರಿಗಾಗಿ ಉಚಿತ ಹೈಟೆಕ್ ವಸತಿ ಕಾಲೇಜನ್ನೂ ಸ್ಥಾಪಿಸಿದ್ದಾರೆ.ದಾಸೋಹ, ಶಿಕ್ಷಣ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸೇವೆಗಳ ಮೂಲಕ ಗುರುತಿಸಿಕೊಂಡಿರುವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಮೈಸೂರು ದಸರಾ ಉದ್ಘಾಟಿಸುತ್ತಿರುವುದು ಕೊಪ್ಪಳ ಜಿಲ್ಲೆಯ ಪಾಲಿಗೆ ವಿಶೇಷ ಗೌರವದ ಸಂದರ್ಭವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳೆ ಮೈಸೂರು ಭಾಗಕ್ಕೆ ನಾಲ್ವಡಿ ಹೆಸರಿಡಿ
ಎಸ್ಐಆರ್ ರದ್ದುಪಡಿಸಲು, ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ