;Resize=(412,232))
ಬೆಂಗಳೂರು : ಕೋಳಿ ಆಹಾರದ ಬೆಲೆ ಹೆಚ್ಚಳ, ಆಷಾಢ ಮಾಸದಲ್ಲೂ ಅಧಿಕ ಬೇಡಿಕೆ, ಹೊರ ರಾಜ್ಯಗಳಿಗೆ ಹೆಚ್ಚಿನ ರವಾನೆ ಸೇರಿದಂತೆ ಹಲವು ಕಾರಣಗಳಿಂದಾಗಿ ನಗರದಲ್ಲಿ ಕೋಳಿ ಮತ್ತು ಮೊಟ್ಟೆಯ ಬೆಲೆ ದುಬಾರಿಯಾಗಿದೆ.
ಕೋಳಿಗೆ ನೀಡುವ ಆಹಾರದ ಬೆಲೆ ಅಧಿಕವಾಗಿರುವುದರಿಂದ ಸಾಕಾಣಿಕೆಗೆ ಒಂದಷ್ಟು ಹಿನ್ನಡೆ ಉಂಟಾಗಿದೆ. ಅಷ್ಟೇ ಅಲ್ಲ, ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಒಂದಷ್ಟು ಮಂದಿ ಮಾಂಸಾಹಾರವನ್ನು ಸೇವಿಸುವುದಿಲ್ಲ. ಈ ತಿಂಗಳಿನಲ್ಲಿ ಶುಭ ಕಾರ್ಯಗಳ ಸಂಖ್ಯೆಯೂ ಕಡಿಮೆ ಇರುವುದರಿಂದ ಮಾರಾಟಕ್ಕೆ ಬರುವ ಕೋಳಿಗಳ ಸಂಖ್ಯೆ ಕಡಿಮೆ ಇರುತ್ತದೆ. ಆದರೂ ಪ್ರಸ್ತುತ ಕೋಳಿಗೆ ಹೆಚ್ಚು ಬೇಡಿಕೆ ಉಂಟಾಗಿರುವುದರಿಂದ ಚಿಕನ್ ಬೆಲೆ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ.
ಮತ್ತೊಂದೆಡೆ, ಕರ್ನಾಟಕದ ಕೋಳಿ ಸಾಕಾಣಿಕೆದಾರರು ಕೇರಳ, ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಗೆ ಅಧಿಕ ಪ್ರಮಾಣದಲ್ಲಿ ಕೋಳಿಗಳನ್ನು ಮಾರಾಟ ಮಾಡುತ್ತಾರೆ. ಇದರಿಂದಾಗಿ ನಗರದಲ್ಲಿ ಕೋಳಿಗಳ ಸರಬರಾಜು ಕಡಿಮೆ ಆಗಿರುವುದೂ ಚಿಕನ್ ಮತ್ತು ಮೊಟ್ಟೆ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ನಗರದ ಚಿಕ್ಕ ಅಂಗಡಿಗಳಲ್ಲಿ ಒಂದು ಕೆಜಿ ವಿತೌಟ್ ಸ್ಕೀನ್ ಚಿಕನ್ 360 ರು. ಹಾಗೂ ವಿತ್ ಸ್ಕಿನ್ ಚಿಕನ್ 340 ರು.ಗೆ ಮಾರಾಟವಾಗುತ್ತಿದೆ. ಬಾಯ್ಲರ್ ಕೋಳಿ ಕೆಜಿಗೆ 220 ರಿಂದ 240 ರು.ಗೆ ಬಿಕರಿಯಾಗುತ್ತಿದೆ. ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್‌ನ ಬೆಂಗಳೂರು ವಲಯದ ಬುಧವಾರದ ದರ ಪಟ್ಟಿ ಪ್ರಕಾರ ಒಂದು ಕೆಜಿ ವಿತೌಟ್ ಸ್ಕೀನ್ ಚಿಕನ್ 345 ರು. ಹಾಗೂ ವಿತ್ ಸ್ಕಿನ್ ಚಿಕನ್ 325 ರು.ಇದೆ. ದರ ಹೆಚ್ಚಳದಿಂದ ಭವಿಷ್ಯದಲ್ಲಿ ಚಿಕನ್ ಖಾದ್ಯಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆಯೂ ಇದೆ.
ಮೊಟ್ಟೆ ಬೆಲೆಯೂ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. ಸಗಟು ಮಾರುಕಟ್ಟೆಯಲ್ಲಿ ಜನವರಿಯಲ್ಲಿ 6.30 ರು. ಇದ್ದ ಒಂದು ಮೊಟ್ಟೆ ದರ ಈಗ 7.15 ರುಪಾಯಿಯಾಗಿದೆ. ಚಿಲ್ಲರೆ ವಹಿವಾಟಿನಲ್ಲಿ ಒಂದು ಮೊಟ್ಟೆ 8.30 ರಿಂದ 9 ರು.ಗೆ ಬಿಕರಿಯಾಗುತ್ತಿದೆ. ಮೊಟ್ಟೆಯಿಂದ ತಯಾರಿಸಿದ ಪರ್ದಾಥಗಳೂ ದರ ಹೆಚ್ಚಳದಿಂದ ದುಬಾರಿಯಾಗುವ ಸಾಧ್ಯತೆ ಕಂಡುಬಂದಿದೆ.
ಮೊಟ್ಟೆಯಲ್ಲಿ ಪ್ರೋಟೀನ್ ಅಂಶ ಹೆಚ್ಚಳವಾಗಿದ್ದು ಜನರಲ್ಲಿ ಈ ಬಗ್ಗೆ ಅರಿವು ಮೂಡುತ್ತಿರುವುದರಿಂದ ಸೇವನೆ ಪ್ರಮಾಣ ಅಧಿಕವಾಗುತ್ತಿದೆ. ಇದರಿಂದಾಗಿ ಮೊಟ್ಟೆ ಬೆಲೆ ಅಧಿಕವಾಗಿದೆ ಎಂದು ಹೆಬ್ಬಾಳ ಪಶು ವೈದ್ಯಕೀಯ ಮಹಾವಿದ್ಯಾಲಯದ ಕುಕ್ಕುಟ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಇಂದ್ರೇಶ್ ಸ್ಪಷ್ಟಪಡಿಸಿದ್ದಾರೆ. ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಮೊಟ್ಟೆ ಸೇವನೆ ಅಧಿಕವಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ಆಷಾಢ ಮಾಸವಾದರೂ ಚಿಕನ್‌ಗೆ ಬೇಡಿಕೆ ಹೆಚ್ಚಾಗಿರುವುದು, ಕೋಳಿ ಆಹಾರದ ಬೆಲೆ ಅಧಿಕವಾಗಿರುವುದು, ಹೊರ ರಾಜ್ಯಗಳಿಗೆ ಹೆಚ್ಚಾಗಿ ಕೋಳಿ ಮಾರಾಟ ಮಾಡುತ್ತಿರುವುದು ಚಿಕನ್ ಬೆಲೆ ಅಧಿಕವಾಗಲು ಕಾರಣವಾಗಿದೆ ಎಂದು ವಿವರಿಸಿದರು.
ಸಗಟು ವಹಿವಾಟಿನ ವಿವರ
ತಿಂಗಳುಮೊಟ್ಟೆ ದರ(ರು.ನಲ್ಲಿ)
ಜನವರಿ6.30
ಫೆಬ್ರವರಿ5.65
ಮಾರ್ಚ್4.71
ಏಪ್ರಿಲ್5.27
ಮೇ5.98
ಜೂನ್6.71
ಜುಲೈ7.15