ರಾಮನಗರ ಜಿಲ್ಲೆಯ ಹೆಸರು ಇನ್ಮುಂದೆ ‘ಬೆಂಗಳೂರು ದಕ್ಷಿಣ’ : ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

KannadaprabhaNewsNetwork |  
Published : Jul 27, 2024, 01:47 AM ISTUpdated : Jul 27, 2024, 07:54 AM IST
ರಾಮನಗರ ಜಿಲ್ಲೆ | Kannada Prabha

ಸಾರಾಂಶ

ರಾಮನಗರ ಜಿಲ್ಲೆಯ ಹೆಸರನ್ನು ‘ಬೆಂಗಳೂರು ದಕ್ಷಿಣ’ ಎಂದು ಬದಲಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

 ಬೆಂಗಳೂರು : ರಾಮನಗರ ಜಿಲ್ಲೆಯ ಹೆಸರನ್ನು ‘ಬೆಂಗಳೂರು ದಕ್ಷಿಣ’ ಎಂದು ಬದಲಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಂದಾಯ ಇಲಾಖೆಯ ಪ್ರಸ್ತಾವನೆಗೆ ಸಂಪುಟ ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ನೀಡಲಾಗಿದೆ.

ರಾಮನಗರ ಜಿಲ್ಲೆ ಜನಪ್ರತಿನಿಧಿಗಳ ಬೇಡಿಕೆ, ಸಾರ್ವಜನಿಕರ ಅಭಿಪ್ರಾಯ ಆಧಾರದ ಮೇಲೆ ಬ್ರ್ಯಾಂಡ್‌ ಬೆಂಗಳೂರಿನ ಲಾಭಗಳನ್ನು ಪಡೆಯಲು ಅನುವಾಗುವಂತೆ ಜಿಲ್ಲೆಯ ಹೆಸರು ಬದಲಿಸಲು ನಿರ್ಧರಿಸಲಾಗಿದ್ದು, ಸದ್ಯದಲ್ಲೇ ಕಂದಾಯ ಇಲಾಖೆಯು ಹೆಸರು ಬದಲಾಯಿಸಿ ಅಧಿಸೂಚನೆ ಹೊರಡಿಸಲಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್‌, ‘ರಾಮನಗರ ವ್ಯಾಪ್ತಿಯ ತಾಲೂಕುಗಳು ಈ ಮೊದಲು ಬೆಂಗಳೂರಿನ ವ್ಯಾಪ್ತಿಯಲ್ಲೇ ಇದ್ದವು. ಹೀಗಾಗಿ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಹೂಡಿಕೆ ಹೆಚ್ಚಳ, ಆಸ್ತಿ ಮೌಲ್ಯ ಹೆಚ್ಚಳ, ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ಅನುಕೂಲಗಳು ಆಗಲಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಇರುವ ಬ್ರ್ಯಾಂಡ್‌ನ ಲಾಭವು ದೊರೆಯಲಿದೆ’ಎಂದು ಸ್ಪಷ್ಟಪಡಿಸಿದರು.

17 ವರ್ಷಗಳಲ್ಲೇ ಹೆಸರು ಬದಲು:

ರಾಮನಗರವು ಟಿಪ್ಪು ಸುಲ್ತಾನ್‌ ಅವಧಿಯಲ್ಲಿ ಶಮ್ಶೆರಾಬಾದ್‌ ಎಂದು ಕರೆಸಿಕೊಳ್ಳುತ್ತಿತ್ತು. ಬಳಿಕ ಬ್ರಿಟೀಷ್‌ ಆಳ್ವಿಕೆಯ ಸರ್‌ ಬ್ಯಾರಿ ಕ್ಲೋಸ್‌ ಅವಧಿಯಲ್ಲಿ (1756-1857) ಕ್ಲೋಸ್‌ಪೇಟ್ ಎಂದು ನಾಮಕರಣ ಮಾಡಲಾಗಿತ್ತು. ಬಳಿಕ ಕೆಂಗಲ್‌ ಹನುಮಂತಯ್ಯ ಅವರು ಮುಖ್ಯಮಂತ್ರಿಯಾದಾಗ ನಗರದ ಹೆಸರನ್ನು ‘ರಾಮನಗರ’ ಎಂದು ಮರುನಾಮಕರಣ ಮಾಡಿದ್ದರು.

ಎಚ್.ಡಿ. ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ 2007ರಲ್ಲಿ ರಾಮನಗರ ತಾಲೂಕು ಜತೆಗೆ ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ತಾಲೂಕು ಸೇರಿಸಿ ರಾಮನಗರ ಎಂಬುದನ್ನು ಹೊಸ ಜಿಲ್ಲೆಯಾಗಿ ರಚಿಸಿದ್ದರು.ಇದೀಗ ಹದಿನೇಳು ವರ್ಷಗಳ ಬಳಿಕ ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಿಸಲು ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ.

ವರ್ಷದ ಹಿಂದೆಯೇ ಹೇಳಿದ್ದ ಡಿಕೆಶಿ:

2023ರ ಜುಲೈ ತಿಂಗಳಲ್ಲೇ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಿಸುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದರು.

2023ರ ಜುಲೈ ತಿಂಗಳಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಿಲ್ಲೆಯ ಶಾಸಕರ ಜತೆಗೂಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಅವರು ರಾಮನಗರ ಜಿಲ್ಲೆ ಹೆಸರು ಬದಲಿಸಲು ಮನವಿ ಸಲ್ಲಿಸಿದ್ದರು.ಮನವಿ ಪತ್ರದಲ್ಲಿ ಹಾರೋಹಳ್ಳಿ, ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರ ತಾಲೂಕುಗಳನ್ನು ಸೇರಿಸಿ ಹಾಲಿ ಇರುವ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಬದಲಿಸಲು ಮನವಿ ಮಾಡಿದ್ದರು.ಈ ವೇಳೆ ಎಚ್.ಡಿ. ಕುಮಾರಸ್ವಾಮಿ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ‘ಒಂದೊಮ್ಮೆ ಕಾಂಗ್ರೆಸ್ ಸರ್ಕಾರ ಹೆಸರು ಬದಲಿಸಿದರೂ ನಾವು ಅಧಿಕಾರಕ್ಕೆ ಬಂದ ಮೇಲೆ ಮತ್ತೆ ರಾಮನಗರ’ ಎಂದೇ ಹೆಸರಿಡುವುದಾಗಿ ತಿಳಿಸಿದ್ದರು. ಹೀಗಾಗಿ ಸಚಿವ ಸಂಪುಟದ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ.

ವಿಶೇಷ ಪ್ಯಾಕೇಜ್‌ ಇಲ್ಲ

ರಾಮನಗರ ಜಿಲ್ಲೆ ಹೆಸರು ಬದಲಿಸುವ ಬಗ್ಗೆ ಮಾತ್ರ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ರಾಮನಗರ ಅಭಿವೃದ್ಧಿಗೆ ವಿಶೇಷ ಹಣಕಾಸು ಪ್ಯಾಕೇಜ್‌ ನೀಡುವುದು ಸೇರಿದಂತೆ ಬೇರೆ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಸಚಿವ ಎಚ್.ಕೆ. ಪಾಟೀಲ್‌ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ