ತಲಕಾವೇರಿಯಿಂದ ಕಾಶಿ, ಅಯೋಧ್ಯೆಗೆ ಕಾವೇರಿ ತೀರ್ಥ!

KannadaprabhaNewsNetwork | Published : Oct 21, 2024 12:43 AM

ಸಾರಾಂಶ

ಪವಿತ್ರ ಕಾವೇರಿ ತೀರ್ಥ ಇದೀಗ ಕಾಶಿ ವಿಶ್ವನಾಥನ ಸನ್ನಿಧಿ ತಲುಪಿದೆ. ಕೊಡಗಿನ ಭಕ್ತರ ಮೂಲಕ ವಿಶ್ವನಾಥನಿಗೆ ಅಭಿಷೇಕಗೊಂಡಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ತಲಕಾವೇರಿ, ಕಾಶಿ ಹಾಗೂ ಅಯೋಧ್ಯೆಗೆ ಎಲ್ಲಿಯ ನಂಟು, ಯಾವ ಯಾವ ಕಾಲಕ್ಕೆ ಏನೇನು ಆಗಬೇಕು ಅದು ಆಗುತ್ತದೆ ಎನ್ನುವುದು ದೈವ ಇಚ್ಚೆ. ದೈವ ಸಂಕಲ್ಪ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ ಎನ್ನುವುದು ಕೂಡ ದೈವ ಸಂಕಲ್ಪ ಎನ್ನಬಹುದು.

ಕಾವೇರಿ ಮಾತೆಯ ಉಗಮಸ್ಥಾನ ತಲಕಾವೇರಿಯಿಂದ ಪವಿತ್ರ ಕಾವೇರಿ ತೀರ್ಥ ಇದೀಗ ಕಾಶಿ ವಿಶ್ವನಾಥನ ಸನ್ನಿಧಿ ತಲುಪಿದ್ದು, ಕೊಡಗಿನ ಭಕ್ತರ ಮೂಲಕ ಕಾಶಿ ವಿಶ್ವನಾಥನಿಗೆ ಅಭಿಷೇಕಗೊಂಡಿದೆ.

ಈ ಮೂಲಕ ಕಾವೇರಿಯ ತೀರ್ಥ ಕಾಶಿ ವಿಶ್ವನಾಥನಿಗೂ ತಲುಪಿದ್ದು ಸೋಮವಾರ ಅಯೋಧ್ಯೆಯ ಬಾಲರಾಮನಿಗೆ ತಲುಪಲಿದೆ.

ಕೊಡವ ರೈಡರ್ಸ್ ಕ್ಲಬ್ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಈ ಎರಡು ಸಂಸ್ಥೆಗಳು ಪ್ರತಿವರ್ಷ ತುಲಾ ಸಂಕ್ರಮಣದಂದು ಪೊನ್ನಂಪೇಟೆಯಿಂದ ಭಾಗಮಂಡಲಕ್ಕೆ ಮೂರುನಾಲ್ಕು ಬಸ್ಸಿನಲ್ಲಿ ತೆರಳಿ ನಂತರ ಭಾಗಮಂಡಲದಿಂದ ಕಾಲ್ನಡಿಗೆಯಲ್ಲಿ ತೆರಳಿ ಕಾವೇರಿ ಮಾತೆಯ ಸೇವೆ ಮಾಡುತ್ತಾ ಬರುತ್ತಿದೆ. ಈ ವರ್ಷ ತಲಕಾವೇರಿ ತೀರ್ಥೋದ್ಭವಕ್ಕೆ ಹೊರಟ ಕೊಡವ ರೈಡರ್ಸ್ ಕ್ಲಬ್ ಸಂಸ್ಥಾಪಕ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಸಂಘಟನಾ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಅಲೋಚನೆ ಬೇರೆಯದೇ ಆಗಿತ್ತು.

ಕೊಡವ ಜನಾಂಗದ ಒಳಿತಿಗಾಗಿ ತಲಕಾವೇರಿಯಿಂದ ಕಾಶಿ ವಿಶ್ವನಾಥನ ಸನ್ನಿಧಿಗೆ ಕಾವೇರಿ ತೀರ್ಥವನ್ನು ಬೈಕ್ ಮೂಲಕ ಕೊಂಡೊಯ್ದು ವಿಶ್ವನಾಥನಿಗೆ ಅರ್ಪಿಸಬೇಕು ಎಂಬ ಮಹದಾಸೆ ಹೊಂದಿದ್ದರು. ಕೊನೆಯ ಘಳಿಗೆಯಲ್ಲಿ ದ್ವಿಚಕ್ರದಲ್ಲಿ ತೆರಳುವ ಅಲೋಚನೆ ಕೈಬಿಟ್ಟು ಸಂಸಾರ ಸಮೇತರಾಗಿ ಬೆಂಗಳೂರಿನಿಂದ ವಿಮಾನ ಮೂಲಕ ಕಾಶಿಗೆ ತೆರಳಿ, ಕೊಡಗು ಜಿಲ್ಲೆಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಚಕ್ಕೇರ ಮನು ಅವರ ಮೂಲಕ ಅಲ್ಲಿನ ಆರ್ ಎಸ್ಎಸ್ ಪ್ರಮುಖರಾದ ರಮೇಶ್ ಕುಮಾರ್ ಹಾಗೂ ದೀನ್ ದಯಾಳ್ ಪಾಂಡೆ ಅವರನ್ನು ಸಂಪರ್ಕ ಮಾಡಿದರು.

ಅವರ ಸಹಾಯದಿಂದ ಅಜ್ಜಿಕುಟ್ಟೀರ ಪ್ರಥ್ವಿ ಹಾಗೂ ಸಂಸಾರ ತಮ್ಮ ಸಾಂಪ್ರದಾಯಿಕ ಕೊಡವ ಉಡುಪಿನೊಂದಿಗೆ ಕಾವೇರಿ ತೀರ್ಥವನ್ನು ನೇರವಾಗಿ ಕಾಶಿ ವಿಶ್ವನಾಥನಿಗೆ ಅಭಿಷೇಕ ಮಾಡುವ ಮೂಲಕ ಕೊಡವ ಜನಾಂಗದ ಒಗ್ಗಟ್ಟು, ಕೊಡವ ಯುವಕ ಯುವತಿಯರ ದುರ್ಮರಣ ತಡೆ, ಮದುವೆಯ ವಯಸ್ಸಾಗಿ ಮದುವೆಯಾಗದೆ ಉಳಿದಿರುವ ಕೊಡವ ಯುವಕ ಯುವತಿಯರಿಗೆ ಮದುವೆಯ ಯೋಗ, ಮಕ್ಕಳಾಗದವರಿಗೆ ಮಕ್ಕಳ ಭಾಗ್ಯ ಸೇರಿದಂತೆ ಮದುವೆಯಾಗಿ ದೂರಾಗುತ್ತಿರುವ ಸತಿಪತಿಗಳನ್ನು ಒಟ್ಟಿಗೆ ಸೇರಿಸುವ ಶಕ್ತಿ ನೀಡು ಎಂದು ಕಾಶಿ ವಿಶ್ವನಾಥನಲ್ಲಿ ಬೇಡಿಕೊಳ್ಳಲಾಯಿತು ಎಂದು ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು.

ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿಯೇ ಕಾಶಿ ವಿಶ್ವನಾಥನಿಗೆ ಅಭಿಷೇಕ ಸಲ್ಲಿಸಿದ ಸಂದರ್ಭದಲ್ಲಿ ಪತ್ನಿ ಗಾನ ಸುಬ್ಬಯ್ಯ, ಇವರ ತಂದೆ ಹಾಗೂ ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ತಾಯಿ ಕಸ್ತೂರಿ ಮಾದಯ್ಯ ಹಾಗೂ ಅತ್ತೆ ಮಾಚಿಮಂಡ ಯಶೋದ ತಿಮ್ಮಯ್ಯ, ಮಕ್ಕಳಾದ ಶಾಶ್ವತ್ ಹಾಗೂ ಸಾಹಿತ್ಯ ಜೊತೆಗಿದ್ದರು. ಸೋಮವಾರ ಅಯೋಧ್ಯೆಗೆ ತೆರಳಿ ಬಾಲ ರಾಮನಿಗೆ ಕಾವೇರಿ ತೀರ್ಥವನ್ನು ತಲುಪಿಸುವ ಇಂಗಿತ ವ್ಯಕ್ತಪಡಿಸಿದ್ದರು.

Share this article