ಶಿರಸಿ: ಕಮತಗಿಯ ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘದಿಂದ ರಾಜ್ಯದ ಸುಪ್ರಸಿದ್ಧ ಮಾರಿಕಾಂಬಾ ಜಾತ್ರೆಯ ಪ್ರಯುಕ್ತ ನಗರದ ವಿಕಾಸಾಶ್ರಮ ಮೈದಾನದಲ್ಲಿ ದಿ. ಮಹೇಶ ಕಲ್ಲೋಳ ವಿರಚಿತ ಗಂಡನಿಗೆ ತಕ್ಕ ಹೆಂಡತಿ ನಾಟಕ ಪ್ರದರ್ಶನ ಮಾ. ೨೦ರಿಂದ ಆರಂಭವಾಗಲಿದೆ ಎಂದು ಸಂಘದ ಮಾಲೀಕ ಪಾಪು ಕಲ್ಲೋಳ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಮತಗಿಯ ನಾಟಕ ಸಂಘವು ೫೦- ೬೦ ವರ್ಷದ ಇತಿಹಾಸ ಹೊಂದಿದೆ. ನಂತರ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ನಂತರ ನಾನು ನಾಟಕ ಸಂಸ್ಥೆಯ ಮಾಲೀಕತ್ವ ಪಡೆದು ಪುನರ್ ಆರಂಭಿಸಿದ್ದೇನೆ. ಇದೀಗ ನಾಲ್ಕು ವರ್ಷಗಳಿಂದ ರಾಜ್ಯಾದ್ಯಂತ ನಾಟಕ ಪ್ರದರ್ಶನವನ್ನು ನೀಡಿ ಹೆಗ್ಗಳಿಕೆ ಪಾತ್ರವಾಗಿದೆ. ಶಿರಸಿಯಲ್ಲಿ ಮೊದಲ ಪ್ರದರ್ಶನವಾದ "ಗಂಡನಿಗೆ ತಕ್ಕ ಹೆಂಡತಿ " ಅರ್ಥಾಥ್ ಹೊತ್ತು ನೋಡಿ ಹೊಡ್ತಾ ಹಾಕು ಎಂಬ ನಾಟಕ ಮಹಾಲಿಂಗಪುರ, ಬೆಂಗಳೂರು, ಗೋಕಾಕ, ಕುಮಟಾ, ಬೆಳಗಾವಿ, ಗೋಡಚಿ, ಬನಶಂಕರಿ, ಮೈಲಾರ ಸೇರಿದಂತೆ ಅನೇಕ ಊರುಗಳಲ್ಲಿ ಸಾವಿರಾರು ಪ್ರದರ್ಶನ ಕಂಡು ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದರು.ಹಿರಿಯ ಕಲಾವಿದ ಶರತ್ ಕುಂಬ್ಳೆ ಮಾತನಾಡಿ, ನ್ಯಾಯ, ನೀತಿಗಾಗಿ ಪ್ರಾಣವನ್ನೇ ಕೊಡುವ ತಂದೆ- ತಾಯಿ ತಮ್ಮ ಮಕ್ಕಳನ್ನು ಯಾವ ರೀತಿ ಬೆಳೆಸಬೇಕು. ಮಕ್ಕಳು ತಪ್ಪು ಮಾಡಿದಾಗ ಯಾವ ರೀತಿ ಅವರನ್ನು ಶಿಕ್ಷಿಸಬೇಕು ಎಂದು ಸಮಾಜಕ್ಕೆ ತೋರಿಸಿ ಕೊಡುವುದೇ ಈ ನಾಟಕದ ಮೂಲ ಸಂದೇಶವಾಗಿದೆ. ನಾಟಕದಲ್ಲಿ ಮುಖ್ಯ ಪಾತ್ರಧಾರಿಯಲ್ಲಿ ಪಾಪು ಕಲ್ಲೂರು, ಚಲನಚಿತ್ರ ನಟಿ ಕನಕಲಕ್ಷ್ಮೀ ನಾಯ್ಕ, ಸಂಕೇತ ಮಂಗಳೂರು, ಬಿ.ಆರ್. ನಾಯ್ಕ ಶಿರಸಿ, ಶರತ ಕುಂಬ್ಳೆ, ಮೇಘರಾಜ ಜಾಲಿಹಾಳ, ಅರುಣ ಮುದೋಳ ಕಥ ಹಂದರದಲ್ಲಿ ಅಭಿನಯಿಸಿದರೆ, ರಿಯಾಜ ಕರ್ಜಗಿ, ಆನಂದ ಪತ್ತಾರ, ಮೇಘನಾ ದಾವಣಗೆರೆ, ಬಿಲಾಲ್ ಜಮಖಂಡಿ ಹಾಸ್ಯಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಇನ್ನೂ ಅನೇಕ ಸಾಮಾಜಿಕ ಹಾಸ್ಯಭರಿತ ನಾಟಕಗಳ ಪ್ರದರ್ಶನ ನಡೆಸುತ್ತೇವೆ. ಕುಟುಂಬ ಸಮೇತರಾಗಿ ಆಗಮಿಸಿ, ನಾಟಕ ಕಲೆ ಮತ್ತು ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಸಂಚಾಲಕ ರಿಯಾಜ್ ಕರ್ಜಗಿ, ಕಾರ್ಯದರ್ಶಿ ಮೇಘರಾಜ ಪರಮೇಶ್ವರ ಇದ್ದರು.