ಕನ್ನಡಪ್ರಭ ವಾರ್ತೆ ಮೈಸೂರು
ನಗರದ ನಂಜನಗೂಡು ರಸ್ತೆಯಲ್ಲಿರುವ ಆಶ್ರಮದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ರಾಜ್ಯ ಮಾತ್ರವಲ್ಲದೆ ದೇಶ, ವಿಶ್ವಕ್ಕೆ ಒಳ್ಳೆಯದಾಗಲಿ ಎಂಬ ಸದುದ್ದೇಶದಿಂದ ವನದುರ್ಗಾ ವೃಕ್ಷಶಾಂತಿ ಮಹಾಯಜ್ಞ, ಸಹಸ್ರ ಚಂಡೀಯಾಗ ನಡೆಸಲಾಗುತ್ತಿದೆ. ಇದು ವಿಶಿಷ್ಟ ಮಾತ್ರವಲ್ಲದೆ ವಿಶ್ವದಲ್ಲೇ ಮೊದಲನೆಯದು ಎಂದರು.
ಹಿಂದೆ ತ್ರೇತಾಯುಗದಲ್ಲಿ ಮಹಾಯಜ್ಞ ಮಾಡಿದ್ದರು. ಅಂದು ಕಾಡಿನಲ್ಲಿ ಬೇಕಾದಷ್ಟು ವೃಕ್ಷಗಳಿದ್ದವು. ಇಂದು 10 ಸಾವಿರ ವೃಕ್ಷಗಳು ಒಂದೇ ಕಡೆ ಇರುವುದು ಕಷ್ಟ. ಅದಕ್ಕಾಗಿ ಥೈಲ್ಯಾಂಡ್, ಜಪಾನ್ ಸೇರಿದಂತೆ ವಿವಿಧೆಡೆಗಳಿಂದ ಬೋನ್ಸಾಯ್, ಕಿಸ್ಕಿಂದ ವೃಕ್ಷ ತರಿಸಿ ಒಂದೊಂದಕ್ಕೂ ಸಹಸ್ರನಾಮ ಬರೆದು ಯಾಗ ಮಾಡಲಾಗುತ್ತಿದೆ. ಪರಿಸರ ಸಮತೋಲನದ ಸೂಚಕವಾಗಿ 8 ಸಾವಿರ ಬೋನ್ಸಾಯ್ ವೃಕ್ಷಗಳನ್ನು ಪೂಜಿಸಿ ಸಮರ್ಪಿಸಲಾಗುವುದು ಎಂದು ಅವರು ಹೇಳಿದರು.ಇಂದಿನ ಮಕ್ಕಳಿಗೆ ವೃಕ್ಷಗಳ ಬಗ್ಗೆ ಜ್ಞಾನವೇ ಇರುವುದಿಲ್ಲ. ಅದಕ್ಕಾಗಿ ಮಕ್ಕಳಲ್ಲಿ ವೃಕ್ಷಗಳ ಬಗ್ಗೆ ಅರಿವು ಮೂಡಿಸಲು ವಸ್ತುಪ್ರದರ್ಶನ ಆಯೋಜಿಸಲಾಗಿದೆ. ಇಲ್ಲಿ ನೂರು, ಇನ್ನೂರು ವರ್ಷಗಳ ವೃಕ್ಷಗಳಿವೆ. ಯಾಗದ ಬಳಿಕ ವೃಕ್ಷಗಳು ಹಾಳಾಗದಿರಲಿ ಎಂಬ ಕಾರಣಕ್ಕೆ ಆಂಧ್ರ, ತೆಲಂಗಾಣ, ಕರ್ನಾಟಕ, ತಮಿಳುನಾಡಿನಲ್ಲಿ ಜಮೀನು ಖರೀದಿಸಿ ಶಾಶ್ವತವಾಗಿ ವೃಕ್ಷಗಳನ್ನು ಬೆಳೆಸಲಾಗುತ್ತಿದೆ ಎಂದರು.
ಆರ್ ಸಿಬಿ ತಂಡವು ಐಪಿಎಲ್ ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ ಸುದ್ದಿ ಕೇಳಿ ನೋವಾಯಿತು. ತುಳಿದಾಡಿ ಪ್ರಾಣ ಕೊಡುವುದು ಏನಿದೆ. ಆಕಾಶ ನೋಡಲು ನೂಕು ನುಕ್ಕಲು ಯಾಕೆ. ಅಲ್ಲಿ ಹೋಗಿ ಆಟಗಾರರನ್ನು ನೋಡಲು ಆಗುತ್ತದಾ? ಇಲ್ಲಿ ಯಾರನ್ನೋ ದೂರುವ ಬದಲು ನಮ್ಮ ತಪ್ಪು, ಜವಾಬ್ದಾರಿಯನ್ನೂ ಅರಿತುಕೊಳ್ಳಬೇಕು. ನಮ್ಮ ಜೀವ, ಜೀವನಕ್ಕೆ ನಾವೇ ಜವಾಬ್ದಾರರು, ಸರ್ಕಾರ ಅಲ್ಲ. ಪರಿಹಾರದಿಂದ ಹೋದ ಪ್ರಾಣ ಬರುವುದಿಲ್ಲ. ಜನ ಈ ಬಗ್ಗೆ ಯೋಚಿಸಬೇಕು ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.
ದೇಶದಲ್ಲಿ ಅಭಿವೃದ್ಧಿ ಆದಷ್ಟು ಬುದ್ದಿ ಕೆಳಮಟ್ಟಕ್ಕೆ ಹೋಗುತ್ತಿದೆ. ಇದು ಆಗಬಾರದು. ನಾವೂ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಬೇಕು. ಎಲ್ಲವನ್ನೂ ಸರ್ಕಾರದ ಮೇಲೆ ಬೊಟ್ಟು ಮಾಡಬಾರದು. ಕಾಶ್ಮೀರದಲ್ಲಿ ಧರ್ಮ ನೋಡಿ ಪ್ರವಾಸಿಗರನ್ನು ಕೊಂದರು. ಧರ್ಮ ನೋಡಿ ಕೊಲೆ ಮಾಡಿ ಎಂದು ಯಾವ ಧರ್ಮ ಗ್ರಂಥದಲ್ಲೂ ಇಲ್ಲ. ಅಂತಹವರನ್ನು ಸದೆ ಬಡಿಯಬೇಕು ಎಂದರು.
- ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಅವಧೂತ ದತ್ತಪೀಠ