ಕನ್ನಡಪ್ರಭ ವಾರ್ತೆ ತುಮಕೂರುಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಹೋರಾಟ ನಡೆಸುತ್ತಿದ್ದ ಸ್ವಾಮೀಜಿಗಳು, ರೈತರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು.ಅವೈಜ್ಞಾನಿಕ ಪೈಪ್‌ಲೈನ್ ಕಾಮಗಾರಿ ನಿಲ್ಲಿಸಬೇಕು ಎಂದು ತುಮಕೂರು ನಗರ ವೀರಶೈವ ಸೇವಾ ಸಮಾಜ ಮತ್ತು ಅಖಿಲ ಭಾರತ ಲಿಂಗಾಯಿತ, ವೀರಶೈವ ಮಹಾಸಭಾ ಒತ್ತಾಯಿಸುತ್ತದೆ ಎಂದು ತುಮಕೂರು ನಗರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಚಂದ್ರಮೌಳಿ ತಿಳಿಸಿದ್ದಾರೆ.
ಜಿಲ್ಲೆಗೆ ಹಂಚಿಕೆಯಾಗಿರುವ 25.31 ಟಿಎಂಸಿ ನೀರು ಆದೇಶದಲ್ಲಿ ಅಷ್ಟೇಇದ್ದು ಮಳೆಯಾದರೂ ಪೂರ್ಣಪ್ರಮಾಣದಲ್ಲಿ ನಮಗೆ ಗೊರೂರು ಜಲಾಶಯದಿಂದ ದೊರೆಯುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಕುಣಿಗಲ್ ತಾಲೂಕನ್ನು ತೋರಿಸಿ ಮಾಗಡಿ ಹಾಗೂ ರಾಮನಗರ ಭಾಗಕ್ಕೆ ನೀರನ್ನು ತೆಗೆದುಕೊಂಡು ಹೋಗುವ ಕುತಂತ್ರ ನಡೆದಿದ್ದು ತುರುವೇಕೆರೆ,ಗುಬ್ಬಿ,ತುಮಕೂರು ಗ್ರಾಮಾಂತರ ಹಾಗೂ ತುಮಕೂರು ನಗರ ಜನರಿಗೆ ಭಾರೀ ಅನ್ಯಾಯ ಮಾಡಲು ಮುಂದಾಗಿದೆ. ಮಾಗಡಿ, ರಾಮನಗರ ಮತ್ತು ಕನಕಪುರದ ಭಾಗಕ್ಕೆ ಮಂಚನಬೆಲೆ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಗಳ ಮೂಲಕ ಸಾಕಷ್ಟು ನೀರು ಕಲ್ಪಿಸುವುದಕ್ಕೆ ಅವಕಾಶ ಇದ್ದಾಗ್ಯೂ ಈ ಯೋಜನೆ ಜಾರಿಗೊಳಿಸುತ್ತಿರುವುದು ಎಷ್ಟು ಸರಿ? ಎನ್ನುವ ಪ್ರಶ್ನೆಉದ್ಭವವಾಗಿದೆ ಎಂದು ನುಡಿದರು.ಅಖಿಲ ಭಾರತ ಲಿಂಗಾಯಿತ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಎಸ್.ಪರಮೇಶ್ ಮಾತನಾಡಿ, ಜಿಲ್ಲೆಯ ನೆಲ-ಜಲದ ವಿಷಯದಲ್ಲಿ ಸದಾ ಮುಂಚೂಣಿಯಲ್ಲಿ ನಿಂತು ಹೋರಾಡುವ ಮಠಾಧೀಶರ ಮೇಲೂ ಪ್ರಕರಣ ದಾಖಲಿಸುವ ದೂರ್ತತನದ ಕೆಲಸ ಮಾಡಿ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಕೂಡಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಹಾಗೂ ಈ ಸರಕಾರ ಪ್ರಕರಣವನ್ನು ಹಿಂಪಡೆಯುವುದರ ಜೊತೆಗೆ ಪೂಜ್ಯರುಗಳಿಗೆ ಬಹಿರಂಗವಾಗಿ. ಕ್ಷಮೆಯಾಚಿಸಬೇಕು ಎಂದು ಒತ್ತಾಯ ಮಾಡುತ್ತೇವೆ. ಇಲ್ಲವಾದಲ್ಲಿ ವೀರಶೈವ ಸಮಾಜಿಗಳು ಬೀದಿಗಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು.ಕುಣಿಗಲ್‌ಗೆ ನೀರು ನೀಡಲು ನಮ್ಮ ಅಭ್ಯಂತರವಿಲ್ಲ. ಅಧುನೀಕರಣಗೊಂಡ ನಾಲೆಯ ಮೂಲಕ ನೀರು ತೆಗೆದುಕೊಂಡು ಹೋಗಲಿ, ಅದನ್ನು ಬಿಟ್ಟು ಸಾವಿರಾರು ಕೋಟಿ ಖರ್ಚು ಮಾಡಿ ಎಕ್ಸ್ ಪ್ರೆಸ್ ಕೆನಾಲ್ ಮಾಡಿ, ನೀರು ಹರಿಸುವ ಅಗತ್ಯವಿಲ್ಲ.ಇದನ್ನು ಜನಪ್ರತಿನಿಧಿಗಳು ಮತ್ತು ಸರಕಾರಗಳು ಅರ್ಥ ಮಾಡಿಕೊಳ್ಳಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ನಗರ ವೀರಶೈವ ಸಮಾಜದ ಕಾರ್ಯದರ್ಶಿ ಹರೀಶ್.ಟಿ.ಬಿ, ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾ ಕಾರ್ಯದರ್ಶಿ ವಿಶ್ವನಾಥ್ ಅಪ್ಪಾಜಪ್ಪ, ಕೋಶಾಧ್ಯಕ್ಷ ಜಯಣ್ಣ, ಮಹಾಸಭಾ ಕಾರ್ಯದರ್ಶಿ ತಾಳವಾರನಹಳ್ಳಿ ವಿಜಯಕುಮಾರ್, ಮಹಿಳಾ ಘಟಕದ ಅಧ್ಯಕ್ಷರಾದ ಮಮತ ದಿವಾಕರ್, ಮುಖಂಡರಾದ ತಿಪ್ಪೇಸ್ವಾಮಿ, ಗುಬ್ಬಿ ತಾಲೂಕು ಅಧ್ಯಕ್ಷ ಮಂಜುನಾಥ್,ಜಿ.ಎಸ್.ಶ್ರೀಧರ್, ಸತ್ಯಮಂಗಲ ಜಗದೀಶ್, ರಾಜೀವ್ ಮತ್ತಿತರರು ಉಪಸ್ಥಿತರಿದ್ದರು.