ಪೌಷ್ಟಿಕ ಆಹಾರ ವಿತರಣೆಗೆ ಎಫ್ಆರ್‌ಎಸ್‌ ತೊಡಕು

KannadaprabhaNewsNetwork |  
Published : Jul 11, 2025, 12:32 AM IST
ಪೋಟೊ8ಕೆಎಸಟಿ2: ಅಂಗನವಾಡಿ ಕಾರ್ಯಕರ್ತೆಯರು ಫಲಾನಭವಿಗಳ ಎಫ್ಆರ್ಎಸ್ ಮೂಲಕ ಪೋಟೊ ತೆಗೆಯುತ್ತಿರುವದು. | Kannada Prabha

ಸಾರಾಂಶ

ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ಅಂಗನವಾಡಿ ಮೂಲಕ ನೀಡುವ ಪೂರಕ ಪೌಷ್ಟಿಕ ಆಹಾರದ ಸಮರ್ಪಕ ವಿತರಣೆಗೆ ಫೇಸ್ ರೀಡಿಂಗ್ ಸಾಫ್ಟ್‌ವೇರ್ (ಎಫ್ಆರ್‌ಎಸ್‌) ತೊಡಕಾಗಿದ್ದು ಕಾರ್ಯಕರ್ತೆಯರು, ಫಲಾನುಭವಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ಅಂಗನವಾಡಿ ಮೂಲಕ ನೀಡುವ ಪೂರಕ ಪೌಷ್ಟಿಕ ಆಹಾರದ ಸಮರ್ಪಕ ವಿತರಣೆಗೆ ಫೇಸ್ ರೀಡಿಂಗ್ ಸಾಫ್ಟ್‌ವೇರ್ (ಎಫ್ಆರ್‌ಎಸ್‌) ತೊಡಕಾಗಿದ್ದು ಕಾರ್ಯಕರ್ತೆಯರು, ಫಲಾನುಭವಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.

ಕೇಂದ್ರ ಸರ್ಕಾರ ಅಂಗನವಾಡಿ ಫಲಾನುಭವಿಗಳಿಗೆ ಆಹಾರ ನಿಡಲು ಕಡ್ಡಾಯವಾಗಿ ಫೇಸ್‌ ಕ್ಯಾಪ್ಚರ್ ಮಾಡಬೇಕು ಎಂಬ ಆದೇಶ ಜಾರಿಗೂಳಿಸಿದ್ದಾರೆ. ಆದರೆ, ಫಲಾನುಭವಿಗಳಿಗೆ ಸೌಲಭ್ಯ ನೀಡಲು ಅವರ ಫೇಸ್ ಕ್ಯಾಪ್ಚರ್ ಮಾಡುವಾಗ ನೆಟ್‌ವರ್ಕ್‌ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ.

ಏನೇನು ಸಮಸ್ಯೆ:

ಫಲಾನುಭವಿಗಳ ಆಧಾರ್‌ ನಂಬರ್‌ಗೆ ಲಿಂಕ್ ಇರುವ ಮೊಬೈಲ್ ನಂಬರ್‌ ಕಳೆದುಕೊಂಡಿದ್ದು ಅಥವಾ ನಂಬರ್‌ಗೆ ರಿಚಾರ್ಜ್‌ ಮಾಡಿಸದ ಕಾರಣ ಒಟಿಪಿ ಬರುವುದಿಲ್ಲ. ಇದರಿಂದ ಫೇಸ್ ಕ್ಯಾಪ್ಚರ್ ಮಾಡಲು ಬರುತ್ತಿಲ್ಲ. ಕೆಲವರು ಒಟಿಪಿ ಹೇಳಲು ಹಿಂಜರಿಯುತ್ತಿದ್ದು ಇನ್ನೂ ಅನೇಕ ಸಮಸ್ಯೆಗಳು ಕಾಡುತ್ತಿವೆ. ನೆಟ್‌ವರ್ಕ್‌ ಸಮಸ್ಯೆ ಇದ್ದಲ್ಲಿ ಕಾರ್ಯಕರ್ತೆಯರು ಫಲಾನುಭವಿಗಳನ್ನು ಸರ್ವರ್ ಸಿಗುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಪೋಟೊ ತೆಗೆಯುತ್ತಿದ್ದಾರೆ. ಪೋಟೊ ತೆಗೆಯುವ ವೇಳೆ ಫಲಾನುಭವಿಗಳು ಹತ್ತಾರು ಬಾರಿ ಕಣ್ಣು ಪಿಳೀಕಿಸಬೇಕು. ಅಂದಾಗ ಮಾತ್ರ ಫೇಸ್‌ ಕ್ಯಾಪ್ಚರ್ ಓಕೆ ಆಗಲಿದೆ. ಇದರಿಂದ ಉಳಿದ ಕೆಲಸ ಬಿಟ್ಟು ಇದೊಂದೆ ಕೆಲಸ ದಿನಪೂರ್ತಿ ಮಾಡಬೇಕಾಗಿದೆ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆಯರು.

ವೈಫೈ ಹಾಕಿಸಿ:

ಎಲ್ಲ ಮಾಹಿತಿ ಮೊಬೈಲ್‌ನಲ್ಲಿ ಅಪ್ಲೋಡ್ ಮಾಡಬೇಕಾಗಿದ್ದು ಇಲಾಖೆ ಕೊಡುವ ಒಂದು ಜಿಬಿ ಡಾಟಾ ಸಾಲುತ್ತಿಲ್ಲ. ಪ್ರತಿಯೊಂದು ಅಂಗನವಾಡಿಗಳಿಗೆ ವೈಫೈ ಹಾಕಿಸಿದರೆ ಆನ್‌ಲೈನ್ ಕೆಲಸ ಬೇಗ ಆಗುತ್ತವೆ ಎಂದು ಕಾರ್ಯಕರ್ತೆಯರು ಹೇಳಿದ್ದಾರೆ.

ಮಕ್ಕಳ ಶಿಕ್ಷಣಕ್ಕೂ ಒಡೆತ:

ಫೇಸ್ ಕ್ಯಾಪ್ಚರ್ ಕೆಲಸ ಶುರುವಾದ ದಿನದಿಂದ ಕಾರ್ಯಕರ್ತೆಯರು ಫಲಾನುಭವಿಗಳ ಮನೆಗೆ ತೆರಳಿ ಫೇಸ್ ಕ್ಯಾಪ್ಚರ್ ಮಾಡುವಲ್ಲಿ ತಲ್ಲೀಣರಾಗಿದ್ದಾರೆ. ಕೇಂದ್ರಕ್ಕೆ ಬರುವ ಮಕ್ಕಳಿಗೆ ಅಕ್ಷರ ಕಲಿಸಲು ಆಗುತ್ತಿಲ್ಲ. ಇದರಿಂದ ಮಕ್ಕಳ ಶಾಲಾ ಪೂರ್ವ ಶಿಕ್ಷಣಕ್ಕೂ ಪೆಟ್ಟು ಬಿದ್ದಿದ್ದು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎನ್ನುತ್ತಾರೆ ಪಾಲಕರು.

ಪಾರದರ್ಶಕತೆಯಿಂದ ಕೆಲಸ ಮಾಡಬೇಕು ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಆದೇಶದಿಂದ ಕಾರ್ಯಕರ್ತೆಯರು ಮಕ್ಕಳಿಗೆ ಶಿಕ್ಷಣ ಕಲಿಸುವುದನ್ನು ಬಿಟ್ಟು ಫಲಾನಭವಿಗಳಿಗೆ ಆಹಾರ ವಿತರಣೆಯಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.ಕೇವಲ ಒಂದು ಜಿಬಿ ಡಾಟಾದಿಂದ ಕೆಲಸ ಆಗುತ್ತಿಲ್ಲ. ಅಂಗನವಾಡಿಗಳಿಗೆ ವೈಫೈ ಅಳವಡಿಸಿದರೆ ಮಾತ್ರ ಫೇಸ್ ಕ್ಯಾಪ್ಚರ್‌ ಸೇವೆ ಮಾಡಲು ಸಾಧ್ಯವಾಗಲಿದ್ದು ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಜು. 9ರಂದು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗಿದೆ.

ಕಲಾವತಿ ಮೇಣೆದಾಳ ಅಂಗನವಾಡಿ ರಾಜ್ಯ ನೌಕರರ ಸಂಘದ ಪದಾಧಿಕಾರಿ

ಕೇಂದ್ರ ಸರ್ಕಾರದ ಆದೇಶದ ಪ್ರಕಾರವಾಗಿ ಎಫ್ಆರ್‌ಎಸ್‌ ಮೂಲಕ ಫಲಾನಭವಿಗಳಿಗೆ ಆಹಾರ ವಿತರಿಸುವುದು ಕಡ್ಡಾಯವಾಗಿದೆ. ಆಧಾರ್‌ ನಂಬರ್‌ಗೆ ಲಿಂಕ್ ಇರುವ ಮೊಬೈಲ್ ನಂಬರ್‌ ಕಳೆದುಕೊಂಡವರು ಆಧಾರ್‌ ಅಪ್ಡೇಟ್ ಮಾಡಿಸಬೇಕು. ಅಂಗನವಾಡಿಗಳಿಗೆ ವೈಫೈ ಅಳವಡಿಸುವ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಯಲ್ಲಮ್ಮ ಹಂಡಿ ಸಿಡಿಪಿಒ ಕುಷ್ಟಗಿ

PREV

Recommended Stories

ಪ್ರೇಮದ ಇನ್ನೊಂದು ಹೆಸರೇ ಅಮೃತಾ ಪ್ರೀತಮ್
ಹೋಬೋ ಸೆಕ್ಷುಯಾಲಿಟಿ : ಒಂದು ಹಗುರ ಸಂಬಂಧದ ಕಥೆ!