
ಕನ್ನಡಪ್ರಭ ವಾರ್ತೆ ಮಡಿಕೇರಿ
ಮುಖ್ಯ ಅತಿಥಿಯಾಗಿದ್ದ ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎ. ಬಿ. ಪಾಟೀಲ್ ಜೇನುತುಂಬಿದ ಎರಿ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜೇನು ಹುಳಗಳು ಕೃಷಿ ಹಾಗೂ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಜೇನುತುಪ್ಪದ ಗುಣಮಟ್ಟ ನಿರ್ಧರಿಸಲು ತೇವಾಂಶದ ಪ್ರಮಾಣ, ರಿಡ್ಯೂಸಿಂಗ್ ಶುಗರ್ ಹಾಗೂ ಫ್ರುಕ್ಟೋಸ್–ಗ್ಲುಕೋಸ್ ಅನುಪಾತದಂತಹ ಮಾನದಂಡಗಳು ಪ್ರಮುಖವಾಗಿವೆ ಎಂದರು.
ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕ ಡಾ. ಬಸವರಾಜು ಮಾತನಾಡಿ, ಜೇನುಗಳ ಪಾತ್ರವು ಜೇನುತುಪ್ಪ ಉತ್ಪಾದನೆಗೆ ಮಾತ್ರ ಸೀಮಿತವಾಗಿಲ್ಲ. ಅವು ಕೃಷಿ ಉತ್ಪಾದನೆ ಮತ್ತು ಆಹಾರ ಸರಪಳಿಯಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತವೆ ಎಂದರು.ಅತಿಥಿ ಭೈಪ್ ಕೊಡಗು ಡಿಸ್ಟಿಕ್ ಇನ್ ಚಾರ್ಜ್ ಗಂಗಾ ಅಂಕದ್ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಜೇನು ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ವಿವಿಧ ಯೋಜನೆಗಳು, ತರಬೇತಿ ಕಾರ್ಯಕ್ರಮ ನಡೆಯುತ್ತಿದೆ ಎಂದರು. ರೇನ್ ಫಾರೆಸ್ಟ್ ಅಲೈನ್ಸ್ ಸಹಯೋಗದಲ್ಲಿ ಒಂಬತ್ತು ಗ್ರಾಮ ಪಂಚಾಯಿತಿಗಳನ್ನು ಒಳಗೊಂಡ ಕ್ಲಸ್ಟರ್ ಯೋಜನೆ ಜಾರಿಗೊಂಡಿದ್ದು, ಸುಂಟಿಕೊಪ್ಪ ಮತ್ತು ತಿತಿಮತಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇದರ ಕಾರ್ಯಚಟುವಟಿಕೆಗಳು ನಡೆಯುತ್ತಿವೆ ಎಂದರು. ಸಂಶೋಧನೆ, ತರಬೇತಿಗೆ ಯೋಜನೆ: ಅಧ್ಯಕ್ಷತೆ ವಹಿಸಿದ್ದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಜಿ. ಎಂ.ದೇವಗಿರಿ ಮಾತನಾಡಿ ಅರಣ್ಯ ಮಹಾವಿದ್ಯಾಲಯ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಕಳೆದ 10 ರಿಂದ 15 ವರ್ಷಗಳಿಂದ ಜೇನು ಕೃಷಿಗೆ ಸಂಬಂಧಿಸಿದಂತೆ ನಿರಂತರ ತರಬೇತಿ ಕಾರ್ಯಕ್ರಮಗಳು ಮತ್ತು ಜಾಗೃತಿ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದರು.
ಜೇನು ಕೃಷಿ ಅಭಿವೃದ್ಧಿಗೆ ಆರ್ಥಿಕ ನೆರವಿನ ಭಾಗವಾಗಿ 10 ಲಕ್ಷ ರೂ. ಆವರ್ತಕ ನಿಧಿ ನೀಡಲಾಗಿದ್ದು, ರಾಷ್ಟ್ರೀಯ ಕೃಷಿ ಅಭಿವೃದ್ಧಿ ಯೋಜನೆಯಡಿ 1 ಕೋಟಿ ರೂ. ಮೌಲ್ಯದ ಯೋಜನೆಗೆ ಅನುಮೋದನೆ ದೊರೆತಿದೆ ಎಂದರು.
ಮಡಿಕೇರಿ ಶಿಕ್ಷಣ ಘಟಕಡ ಮುಖ್ಯಸ್ಥರಾದ ಡಾ. ಆರ್. ಎನ್. ಕೆಂಚರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜೇನಿನ ಪರಿಶುದ್ಧತೆಯ ಕುರಿತ ಪ್ರಾತ್ಯಕ್ಷಿಕೆ, ಜೇನು ಸಾಕಣೆಯ ಕುರಿತು ಪ್ರಾತ್ಯಕ್ಷಿಕೆ, ಜೇನು ಕೃಷಿ ಉತ್ಪನ್ನ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ವಿವಿಧ ಜೇನುತುಪ್ಪಗಳ ಪ್ರದರ್ಶನ ಮತ್ತು ಸವಿಯುವ ಅವಕಾಶ, ಜೇನು ಕೃಷಿ ಉಪಕರಣಗಳು, ವಿವಿಧ ಜೇನು ಪ್ರಭೇದಗಳ ಬಗ್ಗೆ ಮಾಹಿತಿ ನೀಡಲಾಯಿತು. ವಿವಿಧ ಬಗೆಯ ಜೇನು, ಮೇಣದಿಂದ ಮಾಡಿದ ಲಿಪ್ ಬಾಂಮ್ ಗಳು, ಬೊಂಬೆಗಳನ್ನು ಮಾರಾಟಕ್ಕೆ ಇಡಲಾಗಿತ್ತು