ಕನ್ನಡಪ್ರಭ ವಾರ್ತೆ ಮಡಿಕೇರಿ
ಫಲಪುಷ್ಪ ಪ್ರದರ್ಶನವನ್ನು ಜ.26ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಉದ್ಘಾಟಿಸಲಿದ್ದಾರೆ. ಜಿಲ್ಲೆಯ ಮಾನ್ಯ ಶಾಸಕರುಗಳು ಹಾಗೂ ಇತರೆ ಗಣ್ಯರು ಭಾಗವಹಿಸಲಿದ್ದಾರೆ.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಈಗಾಗಲೇ ರಾಜಾಸೀಟು ಉದ್ಯಾನವನದಲ್ಲಿ ಸುಮಾರು 15,000 ಸಂಖ್ಯೆಯ ಇಪ್ಪತ್ತು ಜಾತಿಯ ಹೂವುಗಳಾದ ಸಾಲ್ವಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಡಯಾಂಥಸ್, ಆಸ್ಟರ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ, ಇತ್ಯಾದಿಗಳನ್ನು ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ಬೆಳೆಯಲಾಗಿದೆ.ಈ ವರ್ಷದ ಪ್ರಮುಖ ಆಕರ್ಷಣೆಗಳು: ಕೊಡಗಿನ ಕುಲದೇವತೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಕಲಾಕೃತಿಯನ್ನು 15 ಅಡಿ ಎತ್ತರದಲ್ಲಿ 48 ಅಡಿ ಉದ್ದ, 28 ಅಡಿ ಅಗಲದಲ್ಲಿ ಗುಲಾಬಿ, ಸೇವಂತಿಗೆ, ಆಸ್ಟರ್ ಹೂವುಗಳ ವಿವಿಧ ಬಣ್ಣದ ಸುಮಾರು 5 ಲಕ್ಷ ಹೂವುಗಳಿಂದ ಅಲಂಕರಿಸಿ ರಚಿಸಲಾಗಿದೆ.
ಮಕ್ಕಳಿಗೆ ಮನರಂಜನೆ ನೀಡುವಂತಹ ಚೋಟಾ ಭೀಮ್, ಬಾರ್ಬಿ ಡಾಲ್, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್, ಅಣಬೆ ಕಲಾಕೃತಿಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಿ ಪೋಟೋ ಪ್ರೇಮ್, ಸೆಲ್ಫಿ ಜೋನ್ ಮಾದರಿಗಳನ್ನು ರಚಿಸಲಾಗಿದೆ.
ಗಾಂಧಿ ಮೈದಾನದಲ್ಲಿ 60 ವಿವಿದ ವಸ್ತು ಪ್ರದರ್ಶನ ಮಳಿಗೆಯನ್ನು ನಿರ್ಮಿಸಲಾಗುವುದು, ಇದರಲ್ಲಿ 10 ಮಳಿಗೆಯನ್ನು ತೋಟಗಾರಿಕೆ, ಕಾಫಿ ಮಂಡಳಿ, ಕೃಷಿ, ಪಶುಪಾಲನೆ, ಮೀನುಗಾರಿಕೆ, ಹಾಪ್ ಕಾಮ್ಸ್, ಕೈಗಾರಿಕೆ ವಾಣಿಜ್ಯ ಇಲಾಖೆ ಹಾಗೂ ಇತರೆ ಇಲಾಖೆಗಳಿಗೆ ಕಾಯ್ದಿರಿಸಲಾಗಿದೆ. 50 ಮಳಿಗೆಯಲ್ಲಿ ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಪರಿಕರಗಳ ಪ್ರದರ್ಶನ ಹಾಗೂ ಯಂತ್ರೋಪಕರಣಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ.
ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ಸಾರ್ವಜನಿಕರಿಗೆ 20 ರುಪಾಯಿ ಪ್ರವೇಶ ಶುಲ್ಕ ಹಾಗೂ ಶಾಲೆಯಿಂದ ಭಾಗವಹಿಸುವ ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರವೇಶ ನೀಡಲು ತೀರ್ಮಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಯೋಗೀಶ್ ತಿಳಿಸಿದ್ದಾರೆ.