ನಾಳೆಯಿಂದ ಮಂಡ್ಯದಲ್ಲಿ ಫಲಪುಷ್ಪ ಪ್ರದರ್ಶನ

KannadaprabhaNewsNetwork |  
Published : Jan 23, 2025, 12:46 AM IST
೨೨ಕೆಎಂಎನ್‌ಡಿ-೮ವಿವಿಧ ಜಾತಿಯ ಅಲಂಕಾರಿಕ ಗಿಡಗಳನ್ನು ಜೋಡಿಸಿರುವುದು. | Kannada Prabha

ಸಾರಾಂಶ

ಕೃಷಿ, ಮೀನುಗಾರಿಕೆ, ಶಿಕ್ಷಣ, ಅರಣ್ಯ, ಪಶು ಸಂಗೋಪನೆ, ಆರೋಗ್ಯ, ಕೈಗಾರಿಕೆ ಇಲಾಖೆ ಮತ್ತು ಖಾದಿ ಗ್ರಾಮೋದ್ಯೋಗ ವತಿಯಿಂದ ಕಲಾಕೃತಿಗಳ ಪ್ರಾತ್ಯಕ್ಷಿಕೆ, ರೈತರು ಬೆಳೆದ ವಿವಿಧ ಹಣ್ಣು, ತರಕಾರಿ, ಪ್ಲಾಂಟೇಷನ್‌ಗಳು ಪ್ರದರ್ಶನದಲ್ಲಿರಲಿವೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರತಿ ವರ್ಷದಂತೆ ಈ ಬಾರಿಯೂ ತೋಟಗಾರಿಕೆ ಕಚೇರಿ ಆವರಣ ಹಾಗೂ ಕಾವೇರಿ ಉದ್ಯಾನವನದಲ್ಲಿ ಜ.೨೪ರಿಂದ ೨೮ರವರೆಗೆ ೫ ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಶೇಖ್ ತನ್‌ವೀರ್ ಆಸೀಫ್ ತಿಳಿಸಿದರು.

ತೋಟಗಾರಿಕೆ ಕಚೇರಿ ಆವರಣದಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ವಿಭಿನ್ನ ಮತ್ತು ವಿಶೇಷ ರೀತಿಯಲ್ಲಿ ಮೂಡಿಬರುವಂತೆ ಆಯೋಜಿಸಲಾಗಿದ್ದು, ೯ ಲಕ್ಷ ವಿವಿಧ ಬಣ್ಣದ ಸೇವಂತಿಗೆ ಮತ್ತು ವಿವಿಧ ಬಣ್ಣದ ಗುಲಾಬಿ ಹೂಗಳನ್ನು ಬಳಸಿ ಪ್ರಮುಖ ಆಕರ್ಷಣೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯ ಪ್ರಸಿದ್ಧ ಮೇಲುಕೋಟೆ ಶ್ರೀ ಯೋಗನರಸಿಂಹಸ್ವಾಮಿ ದೇವಾಲಯ, ಕರ್ನಾಟಕದ ಪ್ರಸಿದ್ಧ ತಾಣವಾದ ರಂಗನತಿಟ್ಟು, ಹಳ್ಳಿ ಸೊಗಡಿನ ರೈತನ ಮನೆ, ಏಳು ಬೆಟ್ಟದ ಒಡೆಯ ಮಲೆ ಮಹದೇಶ್ವರ, ಹತ್ತು ವಿವಿಧ ಕಡೆಗಳಲ್ಲಿ ಯುವ ಜನತೆಯನ್ನು ಸೆಳೆಯಲು ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಹೂವಿನ ಆಕೃತಿಯ ಕ್ಷಯ ರೋಗ ಕುರಿತು ಜಾಗೃತಿ, ನರೇಗಾ ಯೋಜನೆಯ ಮಾಹಿತಿಯನ್ನೊಳಗೊಂಡ ಸ್ಥಬ್ಧ ಚಿತ್ರ, ವಿವಿಧ ಆಕರ್ಷಕ ಬಗೆಯ ಅಡಿನಿಯಂ ಗಿಡಗಳ ಪ್ರದರ್ಶಿಕೆ, ಬೋನ್ಸಾಯ್ ಗಿಡಗಳು, ವಿವಿಧ ತರಕಾರಿ ಹಣ್ಣುಗಳನ್ನು ಬಳಸಿ ಕಲಾಕೃತಿಗಳ ಕೆತ್ತನೆ, ಇಕೆಬನಾ ಹೂವಿನ ಜೋಡಣೆ, ಮೂವತ್ತೈದು ಸಾವಿರಕ್ಕೂ ಹೆಚ್ಚು, ನಲವತ್ತು ಬಗೆಯ ವಿವಿಧ ಜಾತಿಯ ಹೂವುಗಳ ಅಲಂಕಾರಿಕ ಕುಂಡಗಳ ಜೋಡಣೆ ಇರಲಿದೆ ಎಂದು ವಿವರಿಸಿದರು.

೧.೫೦ ಲಕ್ಷ ವಿವಿಧ ಜಾತಿಯ ಅಲಂಕಾರಿಕ ಗಿಡಗಳಾದ ಪೆಟೊನಿಯಾ, ಸಾಲ್ವಿಯಾ, ಅಂಟಿರೈನಂ. ಸೆಲೋಶಿಯಾ, ಸೇವಂತಿಗೆ, ಜೀನಿಯಾ, ಪಾಯ್ನಿ ಸೆಟಿಯಾಗಳನ್ನು ಜೋಡಿಸಲಾಗುತ್ತದೆ. ವಿವಿಧ ಜಿಲ್ಲೆಗಳ ಕೈಮಗ್ಗ ನೇಕಾರರು, ಸಹಕಾರ ಸಂಘಗಳು ಭಾಗವಹಿಸಿ ಕೈಮಗ್ಗ ಉತ್ಪನ್ನಗಳು, ಮೊಳಕಾಲ್ಮೂರು ರೇಷ್ಮೆ ಸೀರೆ, ಚಿಂತಾಮಣಿ ಸೀರೆ ಸೇರಿ ಹಲವು ಉತ್ಪನ್ನಗಳನ್ನು ಶೇ.೨೦ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಕೃಷಿ, ಮೀನುಗಾರಿಕೆ, ಶಿಕ್ಷಣ, ಅರಣ್ಯ, ಪಶು ಸಂಗೋಪನೆ, ಆರೋಗ್ಯ, ಕೈಗಾರಿಕೆ ಇಲಾಖೆ ಮತ್ತು ಖಾದಿ ಗ್ರಾಮೋದ್ಯೋಗ ವತಿಯಿಂದ ಕಲಾಕೃತಿಗಳ ಪ್ರಾತ್ಯಕ್ಷಿಕೆ, ರೈತರು ಬೆಳೆದ ವಿವಿಧ ಹಣ್ಣು, ತರಕಾರಿ, ಪ್ಲಾಂಟೇಷನ್‌ಗಳು ಪ್ರದರ್ಶನದಲ್ಲಿರಲಿವೆ ಎಂದು ತಿಳಿಸಿದರು.

ಒಟ್ಟಾರೆ ೨೮ ಲಕ್ಷ ರು. ವೆಚ್ಚವಾಗಲಿದ್ದು, ಇದನ್ನು ಸರಿದೂಗಿಸುವ ಸಲುವಾಗಿ ವಯಸ್ಕರಿಗೆ ೩೦ ರು. ಹಾಗೂ ೬ ರಿಂದ ೧೨ ವರ್ಷದ ಮಕ್ಕಳಿಗೆ ೨೦ ರು. ಪ್ರವೇಶ ಶುಲ್ಕ ವಿಧಿಸಲಾಗುತ್ತಿದೆ. ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಇದರೊಂದಿಗೆ ಸಂಜೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಉದ್ಘಾಟಿಸುವರು. ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲೆಯ ಎಲ್ಲಾ ಶಾಸಕರು, ನಗರಸಭೆ ಅಧ್ಯಕ್ಷರು, ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸುವರು ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಕೆ.ಎನ್.ರೂಪಶ್ರೀ, ತೋಟಗಾರಿಕೆ ಸಂಘದ ಉಪಾಧ್ಯಕ್ಷ ಡಾ.ಬಿ.ಎಸ್.ಉಮೇಶ್ ಚಂದ್ರ, ಎಸ್.ಪಿ.ಶ್ರೀಧರ್ ಇತರರು ಗೋಷ್ಠಿಯಲ್ಲಿದ್ದರು.

PREV

Recommended Stories

ಅಭಿಮಾನ್‌ ಸ್ಟುಡಿಯೋ ಬಳಿಯೇ ವಿಷ್ಣು ದರ್ಶನ ಕೇಂದ್ರ : ಕಿಚ್ಚ ಸುದೀಪ್‌ ಅವರಿಂದ ಜಾಗ ಖರೀದಿ
ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌