ಕನ್ನಡಪ್ರಭ ವಾರ್ತೆ ಮಡಿಕೇರಿರಾಜಸೀಟು ಅಭಿವೃದ್ಧಿ ಸಮಿತಿ ಸಭೆಯು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ಭೇಟಿ ನೀಡುವ ಪ್ರತೀ ಪ್ರವಾಸಿಗರು ರಾಜಾಸೀಟಿಗೆ ಭೇಟಿ ನೀಡಲಿದ್ದಾರೆ. ಆದ್ದರಿಂದ ರಾಜಾಸೀಟು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಮತ್ತಿತರ ಸಂಬಂಧ ವಿಶೇಷ ಗಮನಹರಿಸುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ರಾಜಾಸೀಟು ಮಾರ್ಗದ ರಸ್ತೆಯನ್ನು ಸರಿಪಡಿಸಬೇಕು. ರಾಜಾಸೀಟು ಉದ್ಯಾನವನದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲಾಗಿರುವ ನೀರು ಪೂರೈಕೆ ಮತ್ತು ಲೈಟಿಂಗ್ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.ರಾಜಾಸೀಟು ಉದ್ಯಾನವನದ ಫೌಂಟೇನನ್ನು (ಕಾರಂಜಿ) ಉತ್ತಮವಾಗಿ ನಿರ್ವಹಣೆ ಮಾಡುವಂತೆ ತೋಟಗಾರಿಕೆ ಉಪ ನಿರ್ದೇಶಕರಿಗೆ ಸೂಚಿಸಿದರು.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್, ರಾಜಾಸೀಟು ಮುಂಭಾಗದಲ್ಲಿ ರಸ್ತೆ ಬದಿ ರೈಲಿಂಗ್ಸ್ ನಿರ್ಮಾಣ ಮಾಡುವುದು ಅತ್ಯಗತ್ಯ ಎಂದು ಸಲಹೆ ಮಾಡಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮುತ್ತಪ್ಪ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸಿದ್ದೇಗೌಡ, ಕೆಆರ್‌ಐಡಿಎಲ್ ಕಾರ್ಯಪಾಲಕ ಎಂಜಿನಿಯರ್ ಸುರೇಶ್, ಜಿ.ಪಂ. ಸಹಾಯಕ ಕಾರ್ಯದರ್ಶಿ ಜೀವನ್ ಕುಮಾರ್, ನಗರಸಭೆಯ ಪರಿಸರ ಎಂಜಿನಿಯರ್ ಸೌಮ್ಯ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್ ಇತರರು ಇದ್ದರು.