ಜಿಲ್ಲಾ ತೋಟಗಾರಿಕೆ ಇಲಾಖೆಯಿಂದ ಕಾಟಾಚಾರಕ್ಕೆ ಆಯೋಜನೆ. ಹೊಸದೇನು ಇಲ್ಲ, ಪೋಲಾಯ್ತು ಹಣವೆಲ್ಲ. ರಾಯಚೂರು ನಗರದ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ರೈತರು, ಜನರಿಲ್ಲದೇ ಬಿಕೋ ಎನ್ನುತ್ತಿರುವ ದೃಶ್ಯಗಳು.
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರು
ತೋಟಗಾರಿಕೆ ಇಲಾಖೆ (ಜಿಲ್ಲಾ ಪಂಚಾಯಿತಿ) ಯಿಂದ ಫಲಪುಷ್ಪ ಪ್ರದರ್ಶನವನ್ನು ಕಾಟಾಚಾರಕ್ಕೆ ಆಯೋಜನೆ ಮಾಡಲಾಗಿದ್ದು, ಜನರು-ರೈತರನ್ನು ಆಕರ್ಷಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದರಿಂದ ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನವು ಫ್ಲಾಪ್ ಶೋ ಆಗಿ ಹೊರಹೊಮ್ಮಿದೆ.
ಸ್ಥಳೀಯ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಪ್ರಸಕ್ತ ಸಾಲಿನ ಫಲಪುಷ್ಪ ಪ್ರದರ್ಶನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಶುಕ್ರವಾರ ಚಾಲನೆ ನೀಡಿ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರಿಗೌಡ ಅವರ ಮೂರ್ತಿ ಅನಾವರಣಗೊಳಿಸಿದ್ದರು.
ಮೂರು ದಿನಗಳ ಕಾರ್ಯಕ್ರಮ ಇರುವುದರ ಕುರಿತು ಸರಿಯಾಗಿ ಪ್ರಚಾರ ಮಾಡುವಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದರಿಂದ ಪ್ರದರ್ಶನ ಆರಂಭಗೊಂಡು ಎರಡು ದಿನಗಳ ಕಳೆದರು ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆಯಿಲ್ಲದೇ ಪ್ರದರ್ಶನವು ಸತ್ತು ಹೋದಂತಿದೆ.ಆಕರ್ಷಣೆ ಮಾಯ
ಪ್ರತಿ ವರ್ಷ ಕೃಷಿ ಮೇಳದಲ್ಲಿ ಏರ್ಪಡಿಸುವ ಫಲಪುಷ್ಪ ಪ್ರದರ್ಶನ ಮಾದರಿಯಲ್ಲಿಯೇ ಆಯೋಜನೆಗೊಂಡಿದ್ದರು ಸಹ ಬರಗಾಲ, ಸಮರ್ಪಕ ಮಾಹಿತಿಯ ಕೊರತೆಯು ಪ್ರದರ್ಶನದಲ್ಲಿ ಎದ್ದುಕಂಡಿತು. ವಿವಿಧ ಬಗೆಯ ಹೂವುಗಳಿಂದ ರೂಪಿಸಿದ ಚಂದ್ರಯಾನ್-3 ರಾಕೇಟ್, ರೋವರ್, ಬಿದಿರಿನ ಗಣಪ, ಮೇವಿನಿಂದ ರೂಪಿಸಿದ ಆನೆ, ನವಿಲು, ಶಿವಲಿಂಗ ಬಿಟ್ಟರೆ ಪ್ರದರ್ಶನದಲ್ಲಿ ಏನಿಲ್ಲ. ಪ್ರತಿ ವರ್ಷ ಕೃಷಿ ಮೇಳದಲ್ಲಿ ಮಾಡುವ ಮಾದರಿಯಲ್ಲಿಯೇ ಪ್ರದರ್ಶನ ರೂಪಿಸಿದ್ದು ಆದರೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಆಯೋಜನೆ ಮಾಡಿಲ್ಲ. ರೈತರು ಸಾಮಾನ್ಯವಾಗಿ ಬೆಳೆಯುವ ತರಕಾರಿ, ಹಣ್ಣು, ಪುಷ್ಪಗಳ ಪ್ರದರ್ಶನದ ಒಂದೆರಡು ಮಳಿಗೆಗಳನ್ನು ಹಾಕಿದ್ದು ಬಿಟ್ಟರೇ ಫಲಪುಷ್ಪ ಪ್ರದರ್ಶನದಲ್ಲಿ ಉಪಯೋಗಕ್ಕೆ ಬರುವ, ಆಕರ್ಷಕವಾದ ಸಂಗತಿಗಳು ಪ್ರದರ್ಶನದಲ್ಲಿ ಮಾಯವಾಗಿವೆ.ಹೊಸದೇನು ಇಲ್ಲ, ಪೋಲಾಯ್ತು ಹಣವೆಲ್ಲ
ಇಂತಹ ಕಾರ್ಯಕ್ರಮಗಳಿಗೆ ತೋಟಗಾರಿಕೆ ಇಲಾಖೆಯಿಂದ ಸುಮಾರು 3 ರಿಂದ 5 ಲಕ್ಷ ರು. ಮತ್ತು ಜಿಲ್ಲಾ ಪಂಚಾಯ್ತಿಯಿಂದ ಹೆಚ್ಚುವರಿಗಾಗಿ ಒಂದೆರಡು ಲಕ್ಷದ ಅನುದಾನವಿರುತ್ತದೆ ಆದರೆ ಮೂರು ದಿನಗಳ ಈ ಪ್ರದರ್ಶನಕ್ಕೆ ಜಿಲ್ಲಾ ಪಂಚಾಯಿತಿ ಮತ್ತು ಸಮಗ್ರ ತೋಟಗಾರಿಗೆ ಅಭಿವೃದ್ಧಿ ಯೋಜನೆಯಡಿ ಅಂದಾಜು ಒಂದೂವರೆ ಲಕ್ಷ ರು. ಖರ್ಚಾಗಿರುವುದನ್ನು ಇಲಾಖೆ ಮೂಲಗಳು ತಿಳಿಸಿದ್ದು, ಪ್ರದರ್ಶನ ನೋಡುತ್ತಿದ್ದರೆ ಇಷ್ಟೊಂದು ಖರ್ಚು ಹೊಸದೇನು ಇಲ್ಲ ಪೋಲಾಯ್ತು ಹಣವೆಲ್ಲಾ ಎಂದು ಜನಸಾಮಾನ್ಯರು ಆರೋಪಿಸುತ್ತಿದ್ದಾರೆ.ಸಹಕಾರ ಮರೆತರು
ಮೂರು ದಿನಗಳ ಫಲಪುಷ್ಪ ಪ್ರದರ್ಶನ ಯಶಸ್ವಿಗಾಗಿ ಅಗತ್ಯ ಸಹಕಾರ ಪಡೆದುಕೊಳ್ಳುವಲ್ಲಿ ತೋಟಗಾರಿಕೆ ಇಲಾಖೆಯು ಸಂಪೂರ್ಣ ವಿಫಲವಾಗಿರುವುದು ಎದ್ದು ಕಂಡುಬಂದಿತು. ಇಲ್ಲೇ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಸರ್ಕಾರಿ ಇಲಾಖೆಗಳು, ಸಂಘ-ಸಂಸ್ಥೆಗಳು, ರೈತರ ಗುಂಪುಗಳಿದ್ದರು ಸಹ ಅವುಗಳ ಸಹಕಾರ ಮರೆತು ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಸ್ಪಂದನೆ ಲಭಿಸುತ್ತಿಲ್ಲ ಸ್ಥಳೀಯ ನಿವಾಸಿ ರಂಜಿತ್ ಕುಮಾರ.ಸಿ.ಎಸ್ ತೀವ್ರ ಬೇಸರ ವ್ಯಕ್ತಪಡಿಸಿದರು.ರೈತರು ಹಾಗೂ ಜನಸಾಮಾನ್ಯರಿಗೆ ತೋಟಗಾರಿಕೆ ಇಲಾಖೆ ವಿವಿಧ ಯೋಜನೆಗಳ ಮಾಹಿತಿ, ತೋಟಗಾರಿಕೆ ವಲಯದ ಅರಿವನ್ನು ಬಿತ್ತರಿಸಲು ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಜನರು ಸಹ ಬಂದು ಪ್ರದರ್ಶನವನ್ನು ವೀಕ್ಷಿಸುತ್ತಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.