ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ

KannadaprabhaNewsNetwork | Updated : Dec 15 2023, 01:31 AM IST

ಸಾರಾಂಶ

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ತರಗತಿಗಳನ್ನು ಬಹಿಷ್ಕರಿಸಿ ಕಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಬಹುಪಾಲು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿರುವ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬಹುತೇಕ ತರಗತಿಗಳು ಸ್ಥಗಿತಗೊಂಡಿವೆ. ಒಂದೆಡೆ ತರಗತಿಗಳು ನಡೆಯುತ್ತಿಲ್ಲ ಮತ್ತು ಇನ್ನೊಂದೆಡೆ ಸೆಮಿಸ್ಟರ್ ಪರೀಕ್ಷೆಯ ದಿನಾಂಕಗಳು ಸಮೀಪಿಸುತ್ತಿವೆ.

ಬಳ್ಳಾರಿ: ಸರ್ಕಾರಿ ಪ್ರಥಮದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲವನ್ನು ನಿವಾರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟ (ಎಐಡಿಎಸ್ಒ) ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಘಟನೆಯ ರಾಜ್ಯ ಖಜಾಂಚಿ ಸುಭಾಷ್ ಬಿ. ಮಾತನಾಡಿ, ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ತರಗತಿಗಳನ್ನು ಬಹಿಷ್ಕರಿಸಿ ಕಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಬಹುಪಾಲು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿರುವ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬಹುತೇಕ ತರಗತಿಗಳು ಸ್ಥಗಿತಗೊಂಡಿವೆ. ಒಂದೆಡೆ ತರಗತಿಗಳು ನಡೆಯುತ್ತಿಲ್ಲ ಮತ್ತು ಇನ್ನೊಂದೆಡೆ ಸೆಮಿಸ್ಟರ್ ಪರೀಕ್ಷೆಯ ದಿನಾಂಕಗಳು ಸಮೀಪಿಸುತ್ತಿವೆ. ಶೈಕ್ಷಣಿಕವಾಗಿ ತೀವ್ರ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ರಾಜ್ಯ ಸರ್ಕಾರವು ಕೂಡಲೇ ಈ ಕುರಿತು ಗಮನಹರಿಸಬೇಕು.

ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಶೀಲಿಸಿ ಅವರ ಬೇಡಿಕೆಗಳನ್ನು ಈಡೇರಿಸಬೇಕು. ಕಾಲೇಜುಗಳಲ್ಲಿ ಪಾಠಗಳು ಸರಿಯಾಗಿ ನಡೆಯುವ ನಿಟ್ಟಿನಲ್ಲಿ ಪೂರಕ ವಾತಾವರಣವನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷ ರವಿಕಿರಣ್ ಜೆ.ಪಿ. ಮಾತನಾಡಿ, ರಾಜ್ಯ ಸರ್ಕಾರ ಕೂಡಲೇ ಉಪನ್ಯಾಸಕರ ಸೇವೆ ಕಾಯಂಗೊಳಿಸುವತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದ ವಿದ್ಯಾರ್ಥಿಗಳು, ರಾಜ್ಯ ಸರ್ಕಾರ ಕೂಡಲೇ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಲು ಕ್ರಮ ವಹಿಸಿ ಎಂದು ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಜರುಗಿದ ಪ್ರತಿಭಟನಾ ಸಮಾವೇಶದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಐಡಿಎಸ್ಒ ಜಿಲ್ಲಾ ಉಪಾಧ್ಯಕ್ಷ ಕೆ. ಈರಣ್ಣ, ಖಜಾಂಚಿ ಎಂ.ಶಾಂತಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ನಿಹಾರಿಕಾ, ಪ್ರಮೋದ್, ವಿದ್ಯಾರ್ಥಿ ಮುಖಂಡರಾದ ಸತೀಶ್, ರಾಮಾಂಜಿನಿ, ರಘುವೀರ್, ಮೋಹನ್, ಶಿವರಾಜ್ ಮತ್ತಿತರರು ಭಾಗವಹಿಸಿದ್ದರು. ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಬೇಡಿಕೆಯ ಮನವಿಪತ್ರ ಕಳಿಸಿಕೊಡಲಾಯಿತು.

Share this article