ಮುಂಡಗೋಡ:
ಸಮಾಜಕ್ಕೆ ಹೊಸ ರೂಪ ನೀಡುವಂತಹ ಮಕ್ಕಳನ್ನಾಗಿ ಪರಿವರ್ತಿಸುವ ಉದ್ದೇಶ ಪ್ರತಿಯೊಬ್ಬ ಪಾಲಕರದ್ದಾಗಿರುತ್ತದೆ. ಅವರ ಅಪೇಕ್ಷೆ ಈಡೇರಿಸುವ ಜವಾಬ್ದಾರಿ ಪ್ರತಿಯೊಬ್ಬ ಮಕ್ಕಳ ಮೇಲಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ತಾಲೂಕಿನ ಹುನಗುಂದ ಗ್ರಾಮದ ಪ್ರೌಢಶಾಲೆಯ ಅಡುಗೆ ಕೊಠಡಿ, ಪಿಂಕ್ ಟಾಯ್ಲೆಟ್ ಉದ್ಘಾಟಿಸಿ ಬಳಿಕ ವಸತಿ ಯೋಜನೆ ಅಡಿ ಆಯ್ಕೆಯಾದ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.ವಿದ್ಯಾರ್ಥಿ ಜೀವನ ಬಂಗಾರದ ಬದುಕಿದ್ದಂತೆ, ಅದನ್ನು ಸದುಪಯೋಗಪಡಿಸಿಕೊಳ್ಳಲು ಯಾವ ದಿಕ್ಕಿನಲ್ಲಿ ಹೋಗಬೇಕೆಂಬ ಬಗ್ಗೆ ಚಿಂತಿಸಬೇಕಾದ ಅವಶ್ಯಕತೆ ಇದೆ. ೨೧ನೇ ಶತಮಾನ ಯೋಗ್ಯತೆ ಹಾಗೂ ಸಾಮರ್ಥ್ಯದಿಂದ ಬದುಕುವ ಶತಮಾನವಾಗಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಹಾಗೂ ಕಂಪ್ಯೂಟರ್ ಜ್ಞಾನ ಮಕ್ಕಳಿಗೆ ಅತ್ಯವಶ್ಯವಾಗದೆ ಎಂದು ಹೇಳಿದರು.ಅಧ್ಯಾಪಕರ ವೃತ್ತಿ ನೌಕರಿಯಲ್ಲ, ಬದಲಾಗಿ ಸಮಾಜದಲ್ಲಿ ಅತಿ ಹೆಚ್ಚು ಗೌರವ ಹೊಂದಿದ ಸ್ಥಾನವದು. ಬೇರೆ ನೌಕರರು ವತ್ತಿಯಲ್ಲಿರುವಾಗ ಮಾತ್ರ ಜನ ಕೈ ಮುಗಿಯುತ್ತಾರೆ. ಆದರೆ ಶಿಕ್ಷಕರು ನಿವೃತ್ತಿ ಹೊಂದಿದ ಬಳಿಕವು ಅವರಿಗೆ ಗೌರವವಿದೆ. ಸಮಾಜದಲ್ಲಿ ಯಾವುದೇ ಹುದ್ದೆಯಲ್ಲಿ ಇರುವವರು ತಪ್ಪು ಮಾಡಿದರೆ ತಿದ್ದಬಹುದು. ಆದರೆ, ಒಬ್ಬ ಶಿಕ್ಷಕ ತಪ್ಪು ಮಾಡಿದರೆ ಸಮಾಜವೇ ತಲೆ ತಗ್ಗಿಸಬೇಕಾಗುತ್ತದೆ. ಮಕ್ಕಳನ್ನು ಸಮಾಜದಲ್ಲಿ ಶಿಲೆಗಳಾಗಿ ಬೆಳೆಯುವಂತಾಗಬೇಕು. ಅಂದಾಗ ಮಾತ್ರ ಶಿಕ್ಷಕರಿಗೂ ಗೌರವ ಹೆಚ್ಚುತ್ತದೆ ಎಂದರು.ಒಂದು ಕಾಲದಲ್ಲಿ ಗಂಡು ಮಕ್ಕಳು ಮಾತ್ರ ವಿದ್ಯೆ ಕಲಿಯುತ್ತಿದ್ದರು. ಆದರೆ ಈಗ ಹೆಣ್ಣು ಮತ್ತು ಗಂಡು ಸಮಾನವಾಗಿ ವಿದ್ಯೆ ಪಡೆಯುತ್ತಿದ್ದು, ಹೆಣ್ಣು ಮಕ್ಕಳು ಇಂದು ಎಲ್ಲ ಕ್ಷೇತ್ರದಲ್ಲಿಯು ದಾಪುಗಾಲು ಇಡುತ್ತಿದ್ದಾರೆ. ಹೆಣ್ಣು ಮಕ್ಕಳು ವಿದ್ಯಾವಂತರಾದರೆ ಭವಿಷ್ಯದಲ್ಲಿ ಆಕೆಯ ಕುಟುಂಬ ಒಂದು ವಿದ್ಯಾವಂತ ಕುಟುಂಬವಾಗಿ ಹೊರಹೊಮ್ಮುತ್ತದೆ ಎಂದರು.ಗ್ರಾಪಂ ಅಧ್ಯಕ್ಷ ಶರೀಪಸಿಂಗ್ ಸಿಗಟ್ಟಿ, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಿದ್ದಪ್ಪ ಹಡಪದ, ಎಸ್‌ಡಿಎಂಸಿ ಅಧ್ಯಕ್ಷ ಮಹಾವೀರ ಅಕ್ಕಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ, ಸಿದ್ದನಗೌಡ ಪಾಟೀಲ, ಸಂತೋಷ ಬಿಸ್ನಳ್ಳಿ ಉಪಸ್ಥಿತರಿದ್ದರು.
ಹುನಗುಂದದಲ್ಲಿ ಕಾಲೇಜುಕಳೆದ ವರ್ಷ ನಾನು ಸಚಿವನಾಗಿದ್ದಾಗ ಹುನಗುಂದ ಗ್ರಾಮಕ್ಕೆ ಪದವಿಪೂರ್ವ ಕಾಲೇಜು ಮಂಜೂರಿಯಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಇಲ್ಲಿ ಪದವಿಪೂರ್ವ ಕಾಲೇಜು ಪ್ರಾರಂಭವಾಗಲಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ಈ ಕಾಲೇಜು ಆರಂಭದಿಂದ ಸುತ್ತಮುತ್ತಲಿನ ಮಕ್ಕಳು ಮುಂಡಗೋಡಗೆ ಹೋಗುವ ಬದಲು ಸ್ಥಳೀಯವಾಗಿ ಕಾಲೇಜು ಶಿಕ್ಷಣ ಪಡೆದುಕೊಳ್ಳಬಹುದು ಎಂದರು.