ಮಕ್ಕಳ ಕೈಗೆ ಮೊಬೈಲ್‌ ಕೊಡದೆ ಪೋಷಕರು ಎಚ್ಚರವಹಿಸಬೇಕು: ಸುಬ್ರಹ್ಮಣ್ಯ

KannadaprabhaNewsNetwork | Published : Feb 9, 2024 1:50 AM

ಸಾರಾಂಶ

ಮಕ್ಕಳ ಪೋಷಕರು ಮಕ್ಕಳ ಕೈಗೆ ಮೊಬೈಲ್ ಕೊಡದಂತೆ ಎಚ್ಚರಿಕೆ ವಹಿಸಬೇಕೆಂದು ಸಿನಿಯರ್‌ ಕೌನ್ಸಿಲ್ ಸುಪ್ರೀಂ ಕೋರ್ಟ್ ಎಚ್ . ಸುಬ್ರಹ್ಮಣ್ಯ ಜೋಯಿಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಹಾಗೂ ಟಿವಿ ನೋಡುವುದರಲ್ಲಿ ಸಮಯ ಕಳೆಯುತ್ತಿರುವುದರಿಂದ ಉತ್ತಮ ಶಿಕ್ಷಣ ಪಡೆಯಲು ಆಗುತ್ತಿಲ್ಲ. ಹಾಗಾಗಿ ಮಕ್ಕಳ ಪೋಷಕರು ಮಕ್ಕಳ ಕೈಗೆ ಮೊಬೈಲ್ ಕೊಡದಂತೆ ಎಚ್ಚರಿಕೆ ವಹಿಸಬೇಕೆಂದು ಸಿನಿಯರ್‌ ಕೌನ್ಸಿಲ್ ಸುಪ್ರೀಂ ಕೋರ್ಟ್ ಎಚ್ . ಸುಬ್ರಹ್ಮಣ್ಯ ಜೋಯಿಶ್ ತಿಳಿಸಿದರು.

ಪಟ್ಟಣದ ಚಿದಂಬರ ಆಶ್ರಮದ ಚಿದಂಬರ ಪಬ್ಲಿಕ್ ಸ್ಕೂಲ್‌ ಹಾಗೂ ಸೇವಾಸದನ ಶಿಕ್ಷಣ ಸಂಸ್ಥೆ ಶಾಲಾ ವಾರ್ಷಿಕೋತ್ಸವ 24 ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಹೆಚ್ಚಿನ ಸಮಯ ಶಿಕ್ಷಕರೊಂದಿಗೆ ಶಾಲೆಯಲ್ಲಿ ಕಳೆಯುತ್ತಾರೆ. ಮಕ್ಕಳ ಮೇಲೆ ಶಿಕ್ಷಕರು ಪ್ರಭಾವ ಬೀರುವುದರಿಂದ ಮಕ್ಕಳ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಹೇಳಿದರು. ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಉತ್ತಮ ಶಿಕ್ಷಣದೊಂದಿಗೆ ಉತ್ತಮ ದೇಹ ಹಾಗೂ ಆರೋಗ್ಯ ಹೊಂದುವಂತೆ ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಡಾ. ಸಚ್ಚಿದಾನಂದ ಶರ್ಮ ಮಾತನಾಡಿ, ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಸಹಪಠ್ಯ ಚಟುವಟಿಕೆಗಳನ್ನು ಸಹ ಆಸಕ್ತಿಯನ್ನು ತೋರಿಸಬೇಕು. ಮಾತಿಗಿಂತ ಮುಖ್ಯವಾಗಿ ಕೆಲಸ ಮಾಡುವುದನ್ನು ಮಕ್ಕಳು ರೂಡಿಸಿಕೊಳ್ಳಬೇಕೆಂದ ಅವರು ಮಕ್ಕಳನ್ನು ಶಾಲೆಗೆ ಕಳಿಸಿದರೆ ಅಷ್ಟೇ ಸಾಲದು ಮಕ್ಕಳ ಪೋಷಕರು ಶಾಲೆಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಚರ್ಚಿಸಿ ನಮ್ಮ ಮಕ್ಕಳು ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ ಎಂದು ತಿಳಿದು ತಿದ್ದುವ ಕೆಲಸ ಮಾಡಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯೆ ಅರುಣ ಕುಮಾರಿ, ಪ್ರಾಂಶುಪಾಲ ಶ್ರೀರಾಮ ಶಂಕರ್‌, ಮುಖ್ಯ ಶಿಕ್ಷಕ ಎ. ಬಿ. ಜಗದೀಶ್, ಅನಂತರಾಜು , ಸಾಯಿ ವರ್ಧನ್, ನಳಿನ ಕುಮಾರಿ, ಶಶಿಕಲಾ, ನೇತ್ರಾವತಿ ಹಾಗೂ ಮಕ್ಕಳ ಪೋಷಕರು ಭಾಗವಹಿಸಿದ್ದರು.

Share this article