ಮಕ್ಕಳ ಪ್ರತಿಭೆ ವಿಕಾಸಕ್ಕೆ ಪಠ್ಯಪೂರಕ ಚಟುವಟಿಕೆ ಅವಶ್ಯ​: ಮಹೇಶ್ವರಪ್ಪ

KannadaprabhaNewsNetwork | Published : Feb 9, 2024 1:50 AM

ಸಾರಾಂಶ

ಹೊಳಲ್ಕೆರೆ ತಾಲೂಕಿನ ತುಪ್ಪದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ವಾರ್ಷಿಕೋತ್ಸವ ಕಲಾ ಸೌರಭವನ್ನು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ತುಪ್ಪದಹಳ್ಳಿ ಮಹೇಶ್ವರಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ವಿದ್ಯಾರ್ಥಿಗಳು ಪ್ರತಿಭೆಗಳ ಸಾಗರ. ಅವರಲ್ಲಿನ ವಿಭಿನ್ನ ಪ್ರತಿಭೆಗಳ ವಿಕಾಸಕ್ಕೆ ಪಠ್ಯದ ಜೊತೆಗೆ ಪಠ್ಯಪೂರಕ ಚಟುವಟಿಕೆ ಅವಶ್ಯಕ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ತುಪ್ಪದಹಳ್ಳಿ ಮಹೇಶ್ವರಪ್ಪ ಹೇಳಿದರು.

ತಾಲೂಕಿನ ತುಪ್ಪದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ವಾರ್ಷಿಕೋತ್ಸವ ಕಲಾ ಸೌರಭ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಶಾಲೆ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸಹಕರಿಸಬೇಕು. ವಿದ್ಯಾರ್ಥಿಗಳಿಗೆ ಶಾಲಾ ಪಾಠ ಪುಸ್ತಕಗಳ ತಿಳುವಳಿಕೆ ಜೊತೆಗೆ ಗುರು ಹಿರಿಯರ ಗೌರವಿಸುವ, ಸಮಾಜದಲ್ಲಿ ಘನತೆಯಿಂದ ಬದುಕುವ ರೀತಿನೀತಿ ಕಲಿಸಬೇಕು. ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂಬಂತೆ ಶಾಲಾ ಶಿಕ್ಷಣದ ನಂತರ ಬದುಕುವ ಅಪಾರ ಅವಕಾಶಗಳು ಸಮಾಜದಲ್ಲಿವೆ ಎಂಬ ಅರಿವನ್ನು ವಿದ್ಯಾರ್ಥಿಗಳಿಗೆ ಮನನ ಮಾಡಿಸಬೇಕು ಎಂದು ಹೇಳಿದರು.

ಅತಿಥಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ ಮಾತನಾಡಿ, ತುಪ್ಪದಹಳ್ಳಿ ಶಾಲೆಯಲ್ಲಿ ಶಿಕ್ಷಕರ ಶ್ರಮದಿಂದ ಎಲ್ಲ ಕಲಿಕಾ ಚಟುವಟಿಕೆ ಅತ್ಯುತ್ತಮವಾಗಿ ನಡೆಯುತ್ತಿವೆ. ಸುಸಜ್ಜಿತ ಕಟ್ಟಡಗಳು ಮತ್ತು ಆಟಾಂಗಣ ಶಾಲೆಯಲ್ಲಿದೆ. ಮುಂದೆ ಮಕ್ಕಳ ಸಂಖ್ಯೆ ಹೆಚ್ಚಿದಂತೆ ಇಂಗ್ಲೀಷ್ ಮಾಧ್ಯಮ ಸೇರಿ ಅಗತ್ಯವಾದ ಸೌಲಭ್ಯ ಒದಗಿಸಿ ಕೊಡುವೆವು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಮ್‌ಸಿ ಅಧ್ಯಕ್ಷ ನಾಗರಾಜ, ಹೊಳಲ್ಕೆರೆ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ನಾಗೇಶಪ್ಪ, ಮಾದರಿ ಕೃಷಿಕ ಭೈರೇಶ್, ನಿವೃತ್ತ ಮುಖ್ಯೋಪಾಧ್ಯಾಯ ಟಿ.ಸಿ.ಮಹೇಶ್ವರಪ್ಪ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ಪಿ.ಉಮೇಶ್ ಮಾತನಾಡಿದರು. ವಿದ್ಯಾರ್ಥಿಗಳು ವಚನ, ದಾಸರ ಕೀರ್ತನೆ, ವಿವಿಧ ಜನಪದ, ಭಾವಗೀತೆಗಳಿಗೆ ನೃತ್ಯ ಮಾಡಿದರು. ಕಿರು ನಾಟಕ ಪ್ರದರ್ಶಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗು ಆಟೋಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಬಹುಮಾನ ನೀಡಲಾಯಿತು.

ಕ್ಷೇತ್ರ ಸಮನ್ವಾಯಾಧಿಕಾರಿ ಸುರೇಂದ್ರನಾಥ್, ಅಕ್ಷರ ದಾಸೋಹ ನಿರ್ದೇಶಕ ಈಶ್ವರಪ್ಪ, ಗ್ರಾಪಂ ಸದಸ್ಯ ಇಂದ್ರಮ್ಮ, ಶಂಕರಮೂರ್ತಿ, ಶೇಖರ, ಗ್ರಾಮಸ್ಥರಾದ ಕಾಂತರಾಜ, ಸತೀಶ್, ಸುರೇಶ್, ಮುಖ್ಯೋಪಾಧ್ಯಾಯ ನಾಗರಾಜಪ್ಪ, ಶಿಕ್ಷಕರಾದ ಮಹೇಶ್ವರಪ್ಪ, ಬಸವರಾಜಪ್ಪ, ಮನೋಹರ, ಹೇಮಲತಾ, ಟಿ.ಬಿ.ಅನಿತ, ಮಮತ, ದೀಪ, ನವ್ಯ ನೀಲಮ್ಮ, ಕಮಲಮ್ಮ, ಬಸಮ್ಮ, ದ್ಯಾಮಕ್ಕ, ವಿದ್ಯಾರ್ಥಿಗಳಿದ್ದರು.

Share this article