ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಶಾಸಕ ಮಹಾಂತೇಶ ಕೌಜಲಗಿ, ಕೊಳಚೆ ನಿರ್ಮೂಲನಾ ಅಧಿಕಾರಿಗಳು ಹರಳಯ್ಯ ಕಾಲೋನಿ ನಿವಾಸಿಗಳ ನ್ಯಾಯಯುತ ಬೇಡಿಕೆಗೆ ಸ್ಪಂದಿಸದೆ ಅನ್ಯಾಯ ಮಾಡುತ್ತಿದ್ದಾರೆ. ಅವರಿಗೆ ನ್ಯಾಯ ದೊರಕದಿದ್ದರೇ ಬೈಲಹೊಂಗಲ ಬಂದ್ ನಡೆಸಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಎಚ್ಚರಿಕೆ ನೀಡಿದರು.ಪಟ್ಟಣದ ಹರಳಯ್ಯ ಕಾಲೋನಿ ನಿವಾಸಿಗಳು ಎಸಿ ಕಚೇರಿ ಎದುರು ಕಳೆದ 24 ದಿನಗಳಿಂದ ನಡೆದ ಅಹೋರಾತ್ರಿ ಧರಣಿ ಸತ್ಯಾಗ್ರಹ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿ, 42 ವರ್ಷಗಳಿಂದ ವಾಸಿಸುತ್ತಿರುವ ಬಡ ನಿವಾಸಿಗಳಿಗೆ ಅನ್ಯಾಯ ಮಾಡುತ್ತಾ ಬರಲಾಗಿದೆ. ಅವರ ನ್ಯಾಯಬದ್ಧ ಬೇಡಿಕೆಯಾದ ಮನೆ ಹಕ್ಕುಪತ್ರ ವಿತರಿಸಬೇಕು. ನೊಂದ ಜನರಿಗೆ ನ್ಯಾಯ ನೀಡುವುದು ಮತ್ತು ಜನರ ಸಮಸ್ಯೆ ಆಲಿಸುವುದು ಶಾಸಕರ ಕರ್ತವ್ಯವಾಗಿದೆ. ಈಗಾಗಲೇ ಅಧಿಕಾರಿಗಳು ಸರ್ವೇ ಮಾಡಿದ್ದಾರೆ. ಹಕ್ಕುಪತ್ರ ವಿತರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೂ ಹಕ್ಕುಪತ್ರ ವಿತರಿಸಲು ವಿಳಂಬ ನೀತಿ ಏಕೆ ಅನುಸರಿಸುತ್ತಿದ್ದೀರಿ ಶೀಘ್ರ ಹಕ್ಕುಪತ್ರ ವಿತರಿಸದಿದ್ದರೆ ಸಮಾಜದವರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಿದದು, ಯಾರಿಗಾದರೂ ಆರೋಗ್ಯ ಸಮಸ್ಯೆಯಾದರೆ, ಅಹಿತಕರ ಘಟನೆ ನಡೆದರೆ ಶಾಸಕರೆ ನೇರ ಹೊಣೆಯಾಗಲಿದ್ದಾರೆ ಎಂದರು. ಎಸಿ ಪ್ರಭಾವತಿ ಫಕ್ಕೀರಪೂರ ಅವರಿಗೆ ಈ ಕುರಿತು ಕ್ರಮ ಜರುಗಿಸುವಂತೆ ಮನವಿ ಮಾಡಿದರು.
ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ನಿಂಗಪ್ಪ ಚೌಡಣ್ಣವರ, ಕೆಂಗಾನೂರ ಗ್ರಾ.ಪಂ.ಅಧ್ಯಕ್ಷ ಯಲ್ಲಪ್ಪ ಹುಲಗಣ್ಣವರ, ಮಹಾಂತೇಶ ಕಮತ, ಮುರಗೇಶ ಗುಂಡ್ಲೂರ, ಬಸವರಾಜ ಕೊಡ್ಲಿ, ಜಗದೀಶ ಜಂಬಗಿ, ವಿಜಯ ಪತ್ತಾರ, ನೀಲಪ್ಪ ಕಲ್ಲೂರ, ಪ್ರಕಾಶ ಯರಡಾಲ, ಮಡಿವಾಳಪ್ಪ ಚಿಕ್ಕೊಪ್ಪ, ಚಂದನ ಕೌಜಲಗಿ, ಗೂಳಪ್ಪ ಹೊಳಿ ಡಾ.ವಿಶ್ವನಾಥ ಪಾಟೀಲ ಅಭಿಮಾನಿಗಳು ಉಪಸ್ಥಿತರಿದ್ದರು.